ತೋಟಗಾರಿಕೆ ಬೆಳೆ ಶೇ.90 ಹಾನಿ
ಆಳಂದ: ತಾಲೂಕಿನಲ್ಲಿ ಬಿದ್ದ ಆಲಿಕಲ್ಲು ಮಳೆ, ಬಿರುಗಾಳಿಗೆ ತೋಟಗಾರಿಕೆ ಮತ್ತು ಕೃಷಿ ಬೆಳೆಯ ಹಾನಿಯ ಕುರಿತು ವಿಜ್ಞಾನಿಗಳ ಜಂಟಿ ತಂಡವು ಗುರುವಾರ ತಾಲೂಕಿನ ಆಯ್ದ ಗ್ರಾಮಗಳಿಗೆ ಭೇಟಿ ಮಳೆ ಹಾನಿ ಕುರಿತು ವೀಕ್ಷಣೆ ನಡೆಸಿತು.
ಬೀದರ್ ತೋಟಗಾರಿಕೆ ಕಾಲೇಜಿನ ಹಿರಿಯ ವಿಜ್ಞಾನಿ, ಸಹ ಪ್ರಾಧ್ಯಾಪಕ ಡಾ. ಮಹಮದ್ ಫಾರುಕ್, ಸಸ್ಯ ಶಾಸ್ತ್ರ ವಿಭಾಗದ ಅರುಣಕುಮಾರ ಕೆ., ತರಕಾರಿ ವಿಭಾಗದ ಇಮಾಮಸಾಹೇಬ ಜತ್ತ, ಹಣ್ಣು ವಿಭಾಗದ ಡಾ. ಪ್ರವೀಣ ಜೋಗ್ಲಿಕರ್, ಗುಲ್ಬರ್ಗ ಕೃಷಿ ಸಂಶೋಧನಾ ಕೇಂದ್ರದ ಕೀಟ ಪದ್ಧತಿ ಯುವ ತಜ್ಞ ಸತ್ಯಪ್ರಮೋದ ಪಂತ, ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ರಾಹುಲ್ ಬಾವಿದೊಡ್ಡಿ ಅವರನ್ನು ಒಳಗೊಂಡ ತಂಡವು ವೀಕ್ಷಣೆ ಮಾಡಿ ಹಾನಿ ವೀಕ್ಷಿಸಿದ ಬೆಳೆಗಳಲ್ಲಿ ಶೇ.90ರಷ್ಟು ಹಾನಿಯಾಗಿದೆ ಎಂದು ದೃಢಪಡಿಸಿದೆ.
ಬಾಗಲಕೋಟೆ ಕೃವಿವಿಗೆ ವರದಿ: ತಾಲೂಕಿನ ಚಿಂಚನಸೂರ, ಕಮಲಾನಗರ, ಕರಹರಿ, ಬೆಳಮಗಿ, ತಡಕಲ್, ನರೋಣಾ ಮತ್ತಿತರ ಗ್ರಾಮಗಳಲ್ಲಿನ ಬೆಳೆ ಹಾನಿಯಾದ ತೋಟಗಳಿಗೆ ಭೇಟಿ ನೀಡಿದ ತಂಡವು ದ್ರಾಕ್ಷಿ, ಪಪ್ಪಾಯಿ, ತರಕಾರಿ ಮತ್ತಿತರ ಹಾನಿಯಾದ ಬೆಳೆಯನ್ನು ವೀಕ್ಷಿಸಿದ್ದು, ಈ ಕುರಿತು ಬಾಗಲಕೋಟ ಕೃಷಿ ವಿವಿಗೆ ವರದಿ ಸಲ್ಲಿಸಲಾಗುವುದು ಎಂದು ಸುದ್ದಿಗಾರರಿಗೆ ಡಾ. ಮಹಮದ್ ಫಾರುಕ್ ಅವರು ಹೇಳಿಕೊಂಡರು.
ಕೃಷಿ ಬೆಳೆ ಜೋಳ, ಗೋದಿ, ಕಡಲೆ ಮತ್ತಿತರ ಬೆಳೆ ಕೂಡ ವೀಕ್ಷಿಸಿದ ಸ್ಥಳಗಳಲ್ಲಿ ಸಂಪೂರ್ಣವಾಗಿ ಹಾನಿಗೀಡಾಗಿದೆ ಎಂದು ಗುಲ್ಬರ್ಗ ಕೆವಿಕೆ ವಿಜ್ಞಾನಿ ಸತ್ಯಪ್ರಮೋದ ಪಂತ್ ಹೇಳಿದ್ದಾರೆ. ಅಲ್ಲದೆ ಈ ಕುರಿತು ರಾಯಚೂರ ಕೃಷಿ ವಿವಿಗೆ ಮಾಹಿತಿ ನೀಡಲಾಗುವುದು ಎಂದರು.
8 ತಂಡಗಳಿಂದ ಸರ್ವೆ: ತಾಲೂಕಿನಲ್ಲಿ ಶನಿವಾರದಿಂದ 8 ಅಧಿಕಾರಿಗಳ ಪ್ರತ್ಯೇಕ ಸರ್ವೆ ತಂಡ ರಚಿಸುವ ಮೂಲಕ ಬೆಳೆ ಹಾನಿ ಸರ್ವೆ ಕೈಗೊಳ್ಳಲಾಗುತ್ತಿದೆ. ಶೀಘ್ರವೇ ಹಾನಿಯ ಕುರಿತು ಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರು ಭೇಟಿ ಮಾಡಿದ ಸುದ್ದಿಗಾರರಿಗೆ ಹೇಳಿದರು. ಈಗಾಗಲೇ ಶೇ.40ರಷ್ಟು ಫಲಾನುಭವಿ ಪಟ್ಟಿ ಒಳಗೊಂಡು ಸರ್ವೆ ಕೈಗೊಳ್ಳಲಾಗಿದೆ. ದ್ರಾಕ್ಷಿ, ಬಾಳೆ, ಹಣ್ಣು, ಪಪ್ಪಾಯಿ ಮತ್ತಿತರ ಬೆಳೆ ಸೇರಿ 2,145 ಎಕರೆ ತೋಟಗಾರಿಕೆ ಮತ್ತು ಖುಷ್ಕಿಯಲ್ಲಿ ಜೋಳ, ಕಡಲೆ, ಗೋದಿ ಹೀಗೆ 26,063 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾದ ಕುರಿತು ಸರ್ವೆ ಕೈಗೊಳ್ಳಲಾಗಿದೆ. ಉಳಿದ ಸರ್ವೆ ಶೀಘ್ರವೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

