ರಾಯಚೂರು

ಇಂದು ಔರಾದ್ ಪಪಂ ಚುನಾವಣೆ

Published On :

ಕ.ಪ್ರ. ವಾರ್ತೆ  ಔರಾದ್  ಮಾ.17
ಬಿಜೆಪಿ ಹಾಗೂ ಕೆಜೆಪಿ ಒಂದಾದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಹೈಕೋರ್ಟ್ ನೀಡಿದ ತಡೆಯಾಜ್ಞೆ ತೆರವಾಗಿದ್ದು, ಮಾ.18ರಂದು ಔರಾದ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿವೆ.
 ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 18ರಂದು ಮ.3 ಗಂಟೆಗೆ ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಎಚ್.ವೆಂಕಣ್ಣ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
  ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮಿಸಲಿದೆ. 14 ಸದಸ್ಯ ಬಲವುಳ್ಳ ಪಟ್ಟಣ ಪಂಚಾಯಿತಿಯಲ್ಲಿ ವಾಡ್ 7ರಿಂದ ಎಸ್‌ಟಿ ಮಹಿಳಾ ಸದಸ್ಯೆಯಾಗಿ ಗೆಲವು ಸಾಧಿಸಿದ ರುಕ್ಮಿಣಿಬಾಯಿ ಮುದಾಳೆ ಒಬ್ಬರಾಗಿದ್ದು, ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲದಂತಾಗಿದೆ.
ಚುನಾವಣೆ ಕಾವು ಜೋರು: ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ಶಾಸಕ ಪ್ರಭು ಚವ್ಹಾಣ ಬಣದ 7 ಸದಸ್ಯರು ಹಾಗೂ ನಾಗಮಾರಪಳ್ಳಿ ಬಣದ 7 ಸದಸ್ಯರು ಗೆಲವು ಪಡೆಯುವ ಮೂಲಕ ಪಪಂ ಆತಂತ್ರ ಸ್ಥಿತಿಗೆ ತಂದಿಟ್ಟಿದ್ದರು. ಆದರೆ ಬಿಜೆಪಿ ಮತ್ತು ಕೆಜೆಪಿ ಒಂದಾಗಿದ್ದು ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೂ ದಿನಾಂಕ ನಿಗದಿಯಾಗಿದ್ದರಿಂದ ಚುನಾವಣೆ ಕಾವು ಬಿಸಿಲಿಗಿಂತ ಹೆಚ್ಚು ಕಾವೇರತೊಡಗಿದೆ.
 ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರಿ ಫೈಟ್ ನಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದಕ್ಕೆ ಈ ಹಿಂದೆ ಕೆಜೆಪಿಯಿಂದ ಗೆದ್ದವರು 7 ಜನ ಹಾಗೂ ಬಿಜೆಪಿಯಿಂದ ಗೆದ್ದವರು 7 ಜನರ ಸಮಬಲ ಹೊಂದಿದ್ದು ಕೆಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸಿದ ಮಹಿಳೆ ಅಧ್ಯಕ್ಷರಾದರೆ ಉಪಾಧ್ಯಕ್ಷ ಸ್ಥಾನ ಯಾರಿಗೆ ಬಿಟ್ಟುಕೊಡಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಉಪಾಧ್ಯಕ್ಷ ಸ್ಥಾನ ಭಾರಿ ಕಗ್ಗಂಟಾಗಿ ಪರಿಣಮಿಸಿದ್ದು ಉಭಯ ನಾಯಕರುಗಳು ದ್ವೇಷ ಮರೆತು ಏಕತೆ ಪ್ರದರ್ಶಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ.
 ಔರಾದ್ ಪಟ್ಟಣ ಪಂಚಾಯಿತಿಯ 14 ಸ್ಥಾನಗಳಿಗೆ 4 ಹಿಂದುಳಿದ ವರ್ಗ(ಎ), 4 ಸಾಮಾನ್ಯ, 2 ಸಾಮಾನ್ಯ ಮಹಿಳೆ, 1 ಹಿಂದುಳಿದ ವರ್ಗ(ಬಿ), ಪರಿಶಿಷ್ಟ ಜಾತಿ ಮಹಿಳೆ ಹಾಗೂ ಪರಿಶಿಷ್ಟ ಪಂಗಡ ಮಹಿಳೆಗೆ ತಲಾ ಒಂದೊಂದು ಮಿಸಲಾತಿ ಕಲ್ಪಿಸಲಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.