ರಾಯಚೂರು

ಬಿಸಿಲಿನಂತೆ ಚುನಾವಣಾ ಕಾವು

Published On :

-ವಿಶೇಷ ವರದಿ
ಕ.ಪ್ರ. ವಾರ್ತೆ ಸಿಂಧನೂರು ಮಾ.24
ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ತಾಲೂಕಿನಾದ್ಯಂತ ದಿನೇ ದಿನೇ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಬಿಜೆಪಿಯಿಂದ ಕರಡಿ ಸಂಗಣ್ಣ, ಕಾಂಗ್ರೆಸ್‌ನಿಂದ ಬಸವರಾಜ ಹಿಟ್ನಾಳ್ ಹೆಸರುಗಳು ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ತಾಲೂಕಿನಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಪೂರ್ಣಗೊಳಿಸುವಲ್ಲಿ ಅಂತಿಮ ತಾಲೀಮು ನಡೆಸಿದ್ದಾರೆ.
ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಲಿಂಗಾಯತರ ವಿರುದ್ಧ ಕುರುಬರು ಎಂಬುದು ಜನಜನಿತ. ತಾಲೂಕಿನ ಮೊದಲ ಎಂಎಲ್‌ಎ ಆಗಿದ್ದ ಶಿವಬಸನಗೌಡ ಗುಡದೂರು ಅವರಿಂದ ಮೊದಲ್ಗೊಂಡು ಪ್ರಸ್ತುತ ಎಂಎಲ್‌ಎ ಆಗಿರುವ ಬಾದರ್ಲಿ ಹಂಪನಗೌಡರ ರಾಜಕೀಯದವರೆಗೆ ಒಮ್ಮೆ ಅವಲೋಕಿಸಿದಾಗ ಇಲ್ಲಿ ಜಾತಿ ಮನೆ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಆರ್. ನಾರಾಯಣಪ್ಪ ಎರಡು ಬಾರಿ ಆರಿಸಿ ಬಂದಿರುವುದು ಕೊಂಚ ಮಟ್ಟಿನ ಸಮಾಧಾನದ ಸಂಗತಿ.
ವಿವಿಧ ಪಕ್ಷಗಳು: ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮಸ್ಕಿ, ಕುಷ್ಟಗಿ, ಕನಕಗಿರಿ, ಗಂಗಾವತಿ, ಸಿರುಗುಪ್ಪ, ಯಲಬುರ್ಗಾ, ಸಿಂಧನೂರು, ಕೊಪ್ಪಳ ತಾಲೂಕುಗಳು ಬರುತ್ತವೆ. 2009ರಲ್ಲಿ ಬಿಜೆಪಿಯಿಂದ ಶಿವರಾಮೆಗೌಡ 2,91,693 ಮತಗಳನ್ನು ಪಡೆದು ವಿಜಯ ನಗೆ ಬೀರಿದ್ದರು. ಕಾಂಗ್ರೆಸ್‌ನಿಂದ ಬಸವರಾಜ ರಾಯರಡ್ಡಿ 2,09,904 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಜೆಡಿಎಸ್‌ನಿಂದ ಸ್ಪರ್ಧೆಸಿದ್ದ ಇಕ್ಬಾಲ್ ಅನ್ಸಾರಿ 1,80,380 ಮತಗಳನ್ನು ಪಡೆದು, 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಮೈಸೂರು ರಾಜ್ಯವಿದ್ದಾಗ ಲೋಕಸೇವಕ ಸಂಘದಿಂದ 1962ರಲ್ಲಿ ಶಿವಮೂರ್ತಿಸ್ವಾಮಿ ಗೆದ್ದರು. 1967ರಲ್ಲಿ ಕಾಂಗ್ರೆಸ್‌ನ ಎ. ಸಂಗಣ್ಣ, 1971ರಲ್ಲಿ ಕಾಂಗ್ರೆಸ್‌ನಿಂದ ಸಿಂಧನೂರು ತಾಲೂಕಿನ ಬಳಗಾನೂರು ಸಿದ್ದರಾಮೇಶ್ವರ ಸ್ವಾಮಿ, 1977ರಲ್ಲಿ 2ನೇ ಬಾರಿಗೆ ಸಿದ್ದರಾಮೇಶ್ವರಸ್ವಾಮಿ ಕಾಂಗ್ರೆಸ್‌ನಿಂದಲೇ ಆಯ್ಕೆಯಾಗಿದ್ದು ತಾಲೂಕಿನ ವಿಶೇಷವೇ ಸರಿ.
ಕಾಂಗ್ರೆಸ್ ಅಧಿಕಾರ: ನಂತರ 1980,1984,1998, 1999ರಲ್ಲಿ ಕಾಂಗ್ರೆಸ್‌ನಿಂದ ಗಂಗಾವತಿಯ ವೈಟ್‌ಹೌಸ್ ದೊರೆ ಎಚ್.ಜಿ. ರಾಮುಲು ನಾಲ್ಕು ಬಾರಿ ಆಯ್ಕೆಯಾಗಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಗೆಲವಿನ ಹೊಸ ಭಾಷ್ಯ ಬರೆದರು. 1989, 1991ರಲ್ಲಿ ಬಸವರಾಜ ಪಾಟೀಲ್ ಅನ್ವರಿ ಆಯ್ಕೆಯಾಗಿ ಒಂದು ಬಾರಿ ಕೇಂದ್ರ ಸಚಿವರಾಗಿ ಇತಿಹಾಸ ನಿರ್ಮಿಸಿದರು. 2004ರಲ್ಲಿ ಸಿಂಧನೂರಿನ ಕೆ. ವಿರುಪಾಕ್ಷಪ್ಪ ಕಾಂಗ್ರೆಸ್‌ನಿಂದ ಆಯ್ಕೆಯಾದರು. 2009ರಲ್ಲಿ ಗಂಗಾವತಿಯ ಶಿವರಾಮೆಗೌಡ ಬಿಜೆಪಿಯಿಂದ ಗೆದ್ದರು.
2014ರ ಕೊಪ್ಪಳ ಲೋಕಸಭಾ ಚುನಾವಣೆಯ ಒಟ್ಟು ಮತದಾರರ ಸಂಖ್ಯೆ 15,02,785 ಮತದಾರರು ಇರುವರು. 2013ರ ಕ್ಷೇತ್ರದಲ್ಲಿನ ಚುನಾವಣೆಯ ಅಂಕಿ ಅಂಶಗಳಂತೆ 7,21,206 ಪುರುಷ ಮತದಾರರು, 7,12,330 ಮಹಿಳಾ ಮತದಾರರು ಇರುವರು. ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಎರಡು ಬಾರಿ ಜನತಾದಳ, ಒಂದೊಂದು ಬಾರಿ ಬಿಜೆಪಿ ಹಾಗೂ ಲೋಕಸೇವಕ ಸಂಘದ ಅಭ್ಯರ್ಥಿಗಳು ಗೆದ್ದಿದ್ದಾರೆ.
2013 ಅಂಕಿ ಅಂಶಗಳ ಪ್ರಕಾರ ಮತದಾರರು ಸಿಂಧನೂರು ತಾಲೂಕಿನಲ್ಲಿ 2,02,026 ಇರುವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.71.88ರಷ್ಟು ಮತದಾನವಾಗಿತ್ತು. ತಾಲೂಕಿನ ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ ಇಲ್ಲಿ ಪಕ್ಷಕ್ಕಿಂತ ಜಾತಿ ರಾಜಕಾರಣವೇ ಪ್ರಬಲವೆನಿಸುತ್ತದೆ. ಕಳೆದ 30 ವರ್ಷಗಳ ಜಿದ್ದಾಜಿದ್ದಿ ರಾಜಕೀಯದಲ್ಲಿ ಹಂಪನಗೌಡ ಬಾದರ್ಲಿ ವರ್ಸಸ್ ಕೆ. ವಿರುಪಾಕ್ಷಪ್ಪ ಅವರ ಜಾತಿ ರಾಜಕಾರಣ ಪ್ರಮುಖವಾಗಿದೆ. 2004ರಲ್ಲಿ ಇವರಿಬ್ಬರು ರಾಜಕೀಯ ಅಧಿಕಾರದ ಲಾಭಕ್ಕಾಗಿ ಒಂದಾಗಿದ್ದರು. ಬಾದರ್ಲಿ ಎಂಎಲ್‌ಎ ಆದರೆ, ವಿರೂಪಾಕ್ಷಪ್ಪ ಎಂಪಿ ಪಟ್ಟಕ್ಕೇರಿದರು. ಆದರೆ ವಿರುಪಾಕ್ಷಪ್ಪ ತಮ್ಮ ಐದು ವರ್ಷಗಳ ಅವಧಿಯಲ್ಲಿ ತಾಲೂಕಿನ ಜನತೆ ನೆನಪಿನಲ್ಲಿಟ್ಟುಕೊಳ್ಳುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡದಿರುವುದು ಅಷ್ಟೇ ಬೇಸರವನ್ನುಂಟು ಮಾಡಿತು.
ರೀಲು ರಾಜರು: ಮುನಿರಾಬಾದ್ ಮಹಿಬೂಬನಗರ ರೈಲನ್ನು ರಾಮುಲು, ರಾಯರಡ್ಡಿ, ಅನ್ವರಿಯವರು ಬಿಟ್ಟಂತೆ ಇವರು ಸಹ ರೈಲಿನ ರೀಲು ಬಿಟ್ಟರೆಂದು ಆಡಿಕೊಂಡಿತು. ಬಿಜೆಪಿಯಿಂದ ಆಕಸ್ಮಿಕವಾಗಿ ಟಿಕೆಟ್ ಪಡೆದು ಗೆದ್ದ ಶಿವರಾಮೆಗೌಡ ಬರೀ ಭಾಷಣದಲ್ಲಿ ಮಾತ್ರ  ಬಂಧುಗಳು ಎಂದು ಪದೇ ಪದೇ ಉಚ್ಚರಿಸುತ್ತಿದ್ದರು. ಲೆಟರ್ ಪ್ಯಾಡ್, ಫೋನ್ ರಾಜಕೀಯ ಬಿಟ್ಟರೆ ಏನನ್ನೂ ಮಾಡಲಿಲ್ಲ.
ಹಂಪನಗೌಡ ಬಾದರ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ ಸಹ ಇವರಿಗೂ ಜಾತಿ ಜಿಡ್ಡು ಬಿಟ್ಟಿಲ್ಲ ಎಂಬುದು ಸರ್ವವಿಧಿತವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಸವರಾಜ ಹಿಟ್ನಾಳ್ ಹಾಲುಮತ ಸಮಾಜವನ್ನು ಪ್ರತಿನಿಧಿಸಿದರೆ, ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವೀರಶೈವ ಪಂಚಮಸಾಲಿ ಜಾತಿಯವರು.
ಏತನ್ಮಧ್ಯೆ ವಿರುಪಾಕ್ಷಪ್ಪನವರ ಸಹೋದರರ ಪುತ್ರ ಕೆ. ಕರಿಯಪ್ಪ ದೊಡ್ಡಪ್ಪನೊಂದಿಗೆ ಬಿಜೆಪಿ ಸೇರಲಿಲ್ಲ. ಬದಲಾಗಿ ಕಾಂಗ್ರೆಸ್ ಸೇರಲು ದೆಹಲಿಗೆ ಎಡತಾಕಿ ಬಂದಿರುವುದು ಗುಟ್ಟಾಗಿ ಉಳಿದಿಲ್ಲ. ಇವರ ರಾಜಕೀಯ ನಡೆ ನಿಗೂಢವಾಗಿದೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಎನ್. ಶಿವನಗೌಡ ಗೊರೇಬಾಳ ಬಿಜೆಪಿ ಕಾರ್ಯಕರ್ತರ ಕೆಲ ಸಭೆಗಳಿಗೆ ಗೈರು ಹಾಜರಾಗಿರುವುದು ಅನೇಕರಿಗೆ ಅನುಮಾನ ಹುಟ್ಟಿಸಿದೆ.
ಲೋಕಸಭೆ ಚುನಾವಣೆಯ ಮತದಾನ ಎ.17 ರಂದು ನಡೆಯಲಿದ್ದು, ಮತ ಪೆಟ್ಟಿಗೆಯಲ್ಲಿ ಮತಗಳು ಬೀಳುವವರೆಗೆ ಇನ್ನೆಷ್ಟು ರಾಜಕೀಯ ಬದಲಾವಣೆಗಳು, ಡೊಂಬರಾಟಗಳು ನಡೆಯುತ್ತವೆ ಎಂಬುದು ಉಹಿಸಲು ಅಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.