ರಾಯಚೂರು

ಭೂಮಾಪನ ಕಚೇರಿ ಮುತ್ತಿಗೆ

Published On :

ಕ.ಪ್ರ. ವಾರ್ತೆ ್ಣ ಲಿಂಗಸ್ಗೂರು ್ಣ ಮೇ 17
ಸ್ಥಳೀಯ ಭೂಮಾಪನ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಲಂಚ ನೀಡಿದವರಿಗೆ ಮಾತ್ರ ಬೇಗನೆ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಇಲ್ಲದಿದ್ದರೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಶನಿವಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲೂಕಿನಲ್ಲಿ ಜಮೀನು ಖರೀದಿ, ಮಾರಾಟ, ಪಾಲು ವಿಭಾಗ, ಪೋತಿ ವಿರಾಸತ್, ಪಹಣಿ ತಿದ್ದುಪಡಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಸಲ್ಲಿಸಿದ ಅರ್ಜಿಗಳು ಕಳೆದ ಮೂರು ವರ್ಷಗಳಿಂದ ಯಾವುದೇ ಪ್ರಗತಿ ಕಾಣದೆ ಧೂಳು ತಿನ್ನುತ್ತಿವೆ. ಸಿಬ್ಬಂದಿ ವಿಳಂಬ ಧೋರಣೆಯಿಂದ ರೈತರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಹಣ ನೀಡಿದವರಿಗೆ ಬೇಗನೆ ಕೆಲಸ ಮಾಡಿಕೊಡುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಇಂತಹ ಸುಮಾರು 200 ಅರ್ಜಿಗಳು ವಿಲೇವಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆ ಎಂದು ಭೂ ಮಾಪನಾ ಇಲಾಖೆ ಅಧಿಕಾರಿ ಸೃಜಯ್, ತಹಸೀಲ್ದಾರ್ ರಾಧೇಶ್ಯಾಮ್ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ಅರ್ಜಿಗಳು ಬಾಕಿಯಿಲ್ಲ: ಈ ವೇಳೆ ಮಾತನಾಡಿದ ಅಧಿಕಾರಿಗಳು, ಕಳೆದೆರಡು ತಿಂಗಳಿಂದ ಭೂಮಿ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ರೈತರು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಜಮೀನು ಸರ್ವೆ, ಮೋಜಿಣಿ ಸೇರಿದಂತೆ ಇತರೆ ಕಾರ್ಯದಲ್ಲಿ ಭೂಮಾಪನ ಮತ್ತು ಕಂದಾಯ ಇಲಾಖೆಗಳು ಒಳಪಡುತ್ತವೆ. ಪಹಣಿ ತಿದ್ದುಪಡಿ ಇದ್ದರೆ ಮೋಜಿಣಿ ಮಾಡಲು ಬರುವುದಿಲ್ಲ. ಇದನ್ನು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಪರಿಹರಿಸಬೇಕಿದೆ. ಭೂ ಮಾಪನಾ ಇಲಾಖೆಯಲ್ಲಿ ಯಾವುದೇ ಅರ್ಜಿಗಳು ಬಾಕಿ ಉಳಿದಿದ್ದರೆ ಹೇಳಿ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ರೈತರು, ಕಳೆದೆರಡು ತಿಂಗಳಿಂದ ಭೂಮಿ ಕೇಂದ್ರ ಸ್ಥಗಿತಗೊಳಿಸಲಾಗಿದೆ ಎಂದು ಹೇಳುತ್ತೀರಿ. ಆದರೆ ರೈತರು ಅರ್ಜಿ ಸಲ್ಲಿಸಿ ಎರಡ್ಮೂರು ವರ್ಷ ಕಳೆದಿದ್ದು, ಇದುವರೆಗೆ ಅರ್ಜಿಗಳು ವಿಲೇವಾರಿಯಾಗದೆ ಇರಲು ಕಾರಣವೇನೆಂದು ಪ್ರಶ್ನಿಸಿದರು.
ಇದಕ್ಕೆ ಭೂ ಮಾಪನಾ ಇಲಾಖಾಧಿಕಾರಿ ಸೃಜಯ್, 'ಪಹಣಿ ತಿದ್ದುಪಡಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮಗೆ ಕೇವಲ ಸರ್ವೆ ಕಾರ್ಯವಷ್ಟೇ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರನ್ನು ಭೇಟಿಯಾಗಿ' ಎಂದರು. ಆದ ರೈತರು 'ಹಾಗಿದ್ದರೆ ಪಹಣಿ ತಿದ್ದುಪಡಿ ಕಡತಗಳನ್ನು ಯಾಕೆ ನಿಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದೀರಿ' ಎಂದು ಪ್ರಶ್ನಿಸಿದರು. ಆಗ ವಾಗ್ವಾದ ನಡೆಯಿತು.
ಪರಿಹಾರದ ಭರವಸೆ: ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಟಿ.ಯೋಗೇಶ್, ವಿವಿಧ ಕಾರ್ಯಗಳಿಗಾಗಿ ಸಲ್ಲಿಸಿದ ಅರ್ಜಿಗಳ ಪೈಕಿ ಪಹಣಿ ತಿದ್ದುಪಡಿ ಕಾರ್ಯ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಅರ್ಜಿಗಳ ಶೀಘ್ರ ವಿಲೇವಾರಿಯ ಸಹಾಯಕ್ಕೆಂದು ಭೂಮಾಪನಾ ಇಲಾಖೆ ಅಧಿಕಾರಿಗಳ ಸಹಕಾರ ಪಡೆಯಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆಯಲು ಆಸ್ಪದವಿಲ್ಲ. ಅಂತಹ ಘಟನೆಗಳು ಜರುಗಿದರೆ ದಾಖಲೆ ಸಹಿತ ಮಾಹಿತಿ ನೀಡಿ, ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ರೈತರ ಅರ್ಜಿಗಳು ವಿಳಂಬವಾಗದಂತೆ ಹೋಬಳಿವಾರು ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಾಗ ರೈತರು ಪ್ರತಿಭಟನೆ ಹಿಂಪಡೆದರು.
ಈ ವೇಳೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಮುಖಂಡರಾದ ಅಮರಯ್ಯಸ್ವಾಮಿ ಹುಲಿಗುಡ್ಡ, ಸಂಗಣ್ಣ ಮುದಗಲ್, ಸಿದ್ಧೇಶ ಗೌಡೂರು, ಕುಪ್ಪಣ್ಣ ಗೋನವಾಟ್ಲ, ಹನುಮಂತ ಫೂಲಬಾವಿ, ಬಸವರಾಜ, ಗ್ಯಾನಪ್ಪ, ಬಸಲಿಂಗಪ್ಪ, ಶರಣಬಸಪ್ಪ, ಗೋವಿಂದಪ್ಪ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.