ರಾಯಚೂರು

ಮೂಲ ಸೌಕರ್ಯಕ್ಕೆ ಹಮಾಲರ ಆಗ್ರಹ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಮೇ 27
ಸ್ಥಳೀಯ ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರಿಗೆ ವಿವಿಧ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಮಂಗಳವಾರ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ನಿಂದ ಧರಣಿ ನಡೆಸಲಾಯಿತು.
ಇಲ್ಲಿನ ಎಪಿಎಂಸಿ ಕಚೇರಿ ಎದುರು ಧರಣಿ ನಡೆಸಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ  ಹೋರಾಟಗಾರರು, ನಗರದ ಗಂಜ್‌ನಲ್ಲಿ ಸಾವಿರಾರು ಸಂಖ್ಯೆಯ ಹಮಾಲರು ದುಡಿಯುತ್ತಿದ್ದಾರೆ. ಅವರಲ್ಲಿ 400ಕ್ಕೂ ಹೆಚ್ಚಿನ ಸಂಖ್ಯೆಯ ಮಹಿಳಾ ಕಾರ್ಮಿಕರಿದ್ದಾರೆ. ಆದರೆ ಎಲ್ಲ ಕಾರ್ಮಿಕರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿದರು.
ಕೂಲಿಯಿಲ್ಲದೆ ಕಾರ್ಮಿಕರ ದುಡಿಮೆ: ಎಪಿಎಂಸಿಯಲ್ಲಿ ಕುಡಿಯುವ ನೀರು, ಶೌಚಾಲಯ, ಶ್ರಮಿಕ ಭವನ ಸೌಲಭ್ಯ ನೀಡದೆ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ. ಗಂಜ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರಿಗೆ ಅನೇಕ ವರ್ಷಗಳ ದುಡಿಮೆ ನಂತರವೂ ನಿವೇಶನ ಒದಗಿಸಿಲ್ಲ. ಮಹಿಳಾ ಕಾರ್ಮಿಕರನೇಕರು ಕೂಲಿಯಿಲ್ಲದೇ ಎಪಿಎಂಸಿಯಲ್ಲಿ ಕಸ ಬಳಿದು ಸಂಗ್ರಹಿಸಿದ ಧಾನ್ಯಗಳನ್ನು ವೇತನವಾಗಿ ಪಡೆಯುತ್ತಿದ್ದಾರೆಂದು ಟೀಕಿಸಿದರು.
ಪಟೇಲ್ ರಸ್ತೆಯಲ್ಲಿನ ಅಂಗಡಿಗಳನ್ನು ಎಪಿಎಂಸಿಗೆ ಸ್ಥಳಾಂತರಿಸಿದ್ದರೂ ಲೈಸೆನ್ಸ್ ಪಡೆದ ಹಮಾಲಿಗರಿಗೆ ಕೆಲಸ ನೀಡದೇ ಮುಂಚೆ ಕೆಲಸ ಮಾಡಿದವರಿಗೆ ಹಮಾಲಿ ಕೆಲಸ ನೀಡಲಾಗುತ್ತಿದೆ. ಲೈಸೆನ್ಸ್ ಪಡೆದು ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಬೇಕು. ಎಪಿಎಂಸಿ ಆವರಣದ ಪ್ರಮುಖ ಸ್ಥಳಗಳಲ್ಲಿ ಕುಡಿವ ನೀರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.
ಕನಿಷ್ಠ ವೇತನ ನಿಗದಿಗೊಳಿಸಿ: ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಪಡಿಸಬೇಕು. ಪಟೇಲ್ ರಸ್ತೆಯಿಂದ ಸ್ಥಳಾಂತರಗೊಂಡ ಅಂಗಡಿಗಳಲ್ಲಿ ಎಪಿಎಂಸಿ ಹಮಾಲರಿಗೆ ಕೆಲಸಕ್ಕೆ ಅವಕಾಶ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಫೆಡರೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತಾರ್, ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್, ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಲ್ಹಾದ ರೆಡ್ಡಿ, ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ಶೇಕ್ಷಾ ಖಾದ್ರಿ, ಮುಖಂಡರಾದ ಡಿ.ಎಸ್. ಶರಣಬಸವ, ಕೆ.ಜಿ. ವೀರೇಶ, ಆನಂದ, ಶಾಲಂ, ಮಣಿಯಪ್ಪ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.