ಶಿವಮೊಗ್ಗ

ಓಡಿಹೋಗೋ ಜಾಯಮಾನ ನನ್ನದಲ್ಲ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಏ.2
ನನ್ನ ಬಗ್ಗೆ ಎಷ್ಟು ಹಗುರವಾಗಿ ಮಾತನಾಡುತ್ತಿದ್ದೀರಾ ಬಿಜೆಪಿ ನಾಯಕರೇ, ಮುಂದಿನ ಚುನಾವಣೆಯಲ್ಲಿ ನನಗೆ ಎಷ್ಟು ಸೀಟು ಬರುತ್ತದೋ ಗೊತ್ತಿಲ್ಲ. ನನಗೀಗ 70 ಮುಗಿದು 71ನೇ ವಯಸ್ಸು. ಜನರ ಆಶೀರ್ವಾದಿಂದ ಇನ್ನೂ ಎರಡು ಚುನಾವಣೆ ಎದುರಿಸುತ್ತೇನೆ. ಜನತಾ ಜನಾರ್ದನನ ಮೇಲೆ ವಿಶ್ವಾಸ ಇದೆ, ಬೆನ್ನು ಹಾಕಿ ಓಡಿಹೋಗೋದಿಲ್ಲ...
ಹೀಗೆಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಯಡಿಯೂರಪ್ಪನವರದ್ದು ಕೊನೆ ಚುನಾವಣೆ ಎಂದು ಕೆಲವು ನಾಯಕರು ಲೇವಡಿ ಮಾಡುತ್ತಿದ್ದಾರೆ. ಆದರೆ, ಬೆನ್ನುಹಾಕಿ ಓಡಿಹೋಗುವ ಜಾಯಮಾನ ನನ್ನದಲ್ಲ ಎಂದು ಗುಡುಗಿದರು.
ಅಪರಾಧಿ ನಾನಲ್ಲ: ಶಿವಮೊಗ್ಗದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನನ್ನ ನೇತೃತ್ವದಲ್ಲಿ ಅಧಿಕಾರಕ್ಕೆ ಬರದೇ ಇದ್ದರೆ ನೀವು (ಬಿಜೆಪಿ ನಾಯಕರು) ಗೂಟದ ಕಾರಲ್ಲಿ ಓಡಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು, ನನ್ನನ್ನು ಪದೇ ಪದೇ ಅಪರಾಧಿ... ಅಪರಾಧಿ... ಎಂದು ಕರೆದು ಬಿಜೆಪಿಯೇ ಅಪರಾಧಿ ಎಂದು ಜನ ಹೇಳುವ ಸ್ಥಿತಿಗೆ ತಂದಿದ್ದು ನೀವುಗಳೇ. ದೇವರೇ ಗತಿ ಎಂಡ್ ಟೀಮ್ ನಿಮ್ಮದು. ದೇವರು ನಿಮಗೆ ಒಳ್ಳೆಯದು ಮಾಡುತ್ತಾರೆ ಎಂದು ಅವರು ಬಿಜೆಪಿ ನಾಯಕರನ್ನು ಟೀಕಿಸಿದರು.
ಸಜ್ಜನರು ಸುಮ್ಮನಿದ್ದರೆ ದುರ್ಜನರು ಘರ್ಜಿಸುತ್ತಾರೆ. ಹೀಗಾಗಿ ಸಜ್ಜನರು ಸುಮ್ಮನಿರಬಾರದು ಎಂದು ಹೇಳಿದ ಯಡಿಯೂರಪ್ಪ, ನನ್ನ ಅವಧಿಯಲ್ಲಿ ಅಭಿವೃದ್ಧಿ ವೇಗವಾಯಿತು. ಇದೇ ಸಂದರ್ಭದಲ್ಲಿ ಬಿಎಸ್‌ವೈ ವೇಗವಾಗಿ ಬೆಳೆಯುತ್ತಾನೆಂದು ಎಲ್ಲರೂ ಸೇರಿ ಚೂರಿ ಹಾಕಿದರು. ಅಂದು ಅವರೆಲ್ಲರೂ ಸುಮ್ಮನಿರುತ್ತಿದ್ದರೆ ಮುಂದಿನ 25 ವರ್ಷ ರಾಜ್ಯದಲ್ಲಿ ಬಿಜೆಪಿಯನ್ನು ಅಲ್ಲಾಡಿಸಲು ಆಗುತ್ತಿರಲಿಲ್ಲ. ಉದ್ದೇಶ ಪೂರ್ವಕವಾಗಿ ಈಶ್ವರಪ್ಪನಂತಹ ಜನ ಸೇರಿಕೊಂಡು ಚೂರಿ ಹಾಕಿದರು ಎಂದರು.
ನಾನೇ ಬಿಟ್ಟು ಕೊಡುತ್ತಿದ್ದೆ: ಅನಂತ್ ಕುಮಾರ್ ಸಿಎಂ ಆಗಬೇಕಂತೆ, ಬಿಜೆಪಿ ವರಿಷ್ಠ ಆಡ್ವಾಣಿಯವರೇ ನನ್ನನ್ನು ಕರೆದು ಸಿಎಂ ಸ್ಥಾನ ಬಿಡು ಎಂದಿದ್ದರೆ ಜಾಗ ಖಾಲಿ ಮಾಡಿ ಖುಷಿಯಿಂದ ಅವಕಾಶ ಕೊಡುತ್ತಿದ್ದೆ ಎಂದು ಅನಂತ್ ಕುಮಾರ್ ಅವರನ್ನು ಕಿಚಾಯಿಸಿದರು.
ನಮ್ಮ ಪಕ್ಷ ಮೂರು ಮುಕ್ಕಾಲು ತಿಂಗಳ ಕೂಸು. ಹೊಸ ಮುಖಗಳಿಗೆ ಅವಕಾಶಕೊಡಲಾಗಿದೆ. ಹಾಗೆಯೇ ರಕ್ತದಲ್ಲಿ ಬರೆದುಕೊಡುತ್ತೇನೆ. ನಿಮ್ಮ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಮಾಡಲ್ಲ ಎಂದು ಕಾರ್ಯಕರ್ತರನ್ನುದ್ದೇಶಿಸಿ ಮತ ಯಾಚಿಸಿದರು.
ಸಭೆಯಲ್ಲಿ ಅಭ್ಯರ್ಥಿಗಳಾದ ರುದ್ರೇಗೌಡ, ಬಸವಣ್ಯಪ್ಪ, ಮಂಜುನಾಥ ಗೌಡ, ಮುಖಂಡ ಮುಕುಡಪ್ಪ, ಗುರುಮೂರ್ತಿ, ಜ್ಯೋತಿಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.