ಶಿವಮೊಗ್ಗ

ಸಂಗಮೇಶ್ವರ್ ಬಂಡಾಯ

Published On :

ಭದ್ರಾವತಿ: ಕಾಂಗ್ರೆಸ್ ಟಿಕೆಟ್ ವಚಿತರಾದ ಶಾಸಕ ಬಿ.ಕೆ.ಸಂಗಮೇಶ್ವರ್ ಪಕ್ಷದ ವರಿಷ್ಠರ ತೀರ್ಮಾನದ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
  ತಾವು ಭದ್ರಾವತಿಯ ಅಭಿವೃದ್ಧಿಗಾಗಿ ಕಳೆದ ಹತ್ತು ವರ್ಷಗಳಿಂದ ಶ್ರಮಿಸಿದ್ದು ಈಗ ಏಕಾಏಕಿ ಪಕ್ಷವು ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿರುವುದರ ಬಗ್ಗೆ ಅವರು ಮಾಧ್ಯಮಗಳ ಮುಂದೆ ಆಶ್ಟರ್ಯ ಮತ್ತು ಅತಂಕವನ್ನು ವ್ಯಕ್ತಪಡಿಸಿದರು.
ವಂಚನೆ: ಕಳೆದ ಮೂರು ದಶಕಗಳಿಂದಲೂ ಭದ್ರಾವತಿ ಕಡೆಗೆ ತಿರುಗಿ ನೋಡದ ಇಬ್ರಾಹಿಂ ತಾವು ಸಮಾರಂಭಮೊಂದರಲ್ಲಿ ವಿಡಂಬನೆಗಾಗಿ ಇಬ್ರಾಹಿಂ ವಿಧಾನಸಭಾ ಚುನಾವಣೆಗೆ ಭದ್ರಾವತಿಯಿಂದ ಸ್ಪರ್ಧಿಸುವುದಾದರೆ ತಾವೇ ಮುಂದೆ ನಿಂತು ಬೆಂಬಲಿಸುವುದಾಗಿ ಹೇಳಿದ್ದನ್ನೇ ಬಂಡವಾಳವನ್ನಾಗಿಸಿಕೊಂಡು ಪಕ್ಷದ ವರಿಷ್ಠರನ್ನು ಬುಟ್ಟಿಗೆ ಹಾಕಿಕೊಂಡು ಟಿಕೆಟ್ ಗಿಟ್ಟಿಸಿರುವುದು ತಮಗೆ ಮಾಡಿರುವ ವಂಚನೆ ಎಂದರು.
 ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿರುವ ವಿಷಯ ಸಂಗಮೇಶ್ವರ್ ಅವರ ಹಿತೈಷಿಗಳ ವಲಯದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಮಂಗಳವಾರ ಬೆಳಗ್ಗೆ ಅವರ ನಿವಾಸದ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಸಂಗಮೇಶ್ವರ ಅವರಿಗೆ ಜಯಕಾರ ಹಾಕಿದರು.
ಇಬ್ರಾಹಿಂ ಗೆಲ್ಲೊಲ್ಲಾ: ನಂತರ ಅಲ್ಪಸಂಖ್ಯಾತರ ಮುಖಂಡರುಗಳು ಹಾಗೂ ಸಂಗಮೇಶ್ವರ ಅವರ ಬೆಂಬಲಿಗರು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣಣದಲ್ಲಿರುವ ಶಾಸಕರ ಕಚೇರಿಯ ಮುಂದೆ ಪೆಂಡಾಲ್ ಹಾಕಿ ಪ್ರತಿಭಟನೆ ಮಾಡತೊಡಗಿದರು. ಅಲ್ಲಿಗೆ ಆಗಮಿಸಿದ ಸಂಗಮೇಶ್ವರ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ ಇಬ್ರಾಹಿಂ ಅವರಿಗೆ ಕ್ಷೇತ್ರದ ಪರಿಚಯವೇ ಇಲ್ಲ. ಅವರು ಇಲ್ಲಿ ಗೆಲ್ಲಲು ಸಾಧ್ಯವೇ ಇಲ್ಲವೆಂದು ಪ್ರತಿಪಾದಿಸಿದರು.
ಬಂಡಾಯ ಅಭ್ಯರ್ಥಿ: ಇಬ್ರಾಹಿಂ ನಾಯಕತ್ವ ನಡೆಸುವ ಮಟ್ಟವೇ ಬೇರೆ ಇರುವಾಗ ಅನಾವಶ್ಯಕವಾಗಿ ಅವರು ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಕೈಹಾಕಿರುವುದು ಸರಿಯಲ್ಲವೆಂದ ಸಂಗಮೇಶ್ವರ್, ತಾವು ಇಬ್ರಾಹಿಂ ಅವರಿಗೆ ಭದ್ರಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಯಾವತ್ತೂ ಆಹ್ವಾನಿಸಿಲ್ಲವೆಂದು ಸ್ಪಷ್ಟಪಡಿಸಿದರು. ಪಕ್ಷದ ತೀರ್ಮಾನದ ವಿರುದ್ಧವಾಗಿ ತಾವು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯ ಕಣದಲ್ಲಿಳಿಯುವುದಾಗಿ ಅವರು ಘೋಷಿಸಿದರು.
 ಕಾಂಗ್ರೆಸ್ ಹಾಲಿ ಇರುವ ಎಲ್ಲಾ ಶಾಸಕರಿಗೂ ಟಿಕೆಟ್ ಕೊಡುವ ತೀರ್ಮಾನವನ್ನು ಕೈಗೊಂಡಿದ್ದು ಅದರಂತೆ ಹಾಲಿ ಇದ್ದ 71 ಶಾಸಕರಲ್ಲಿ 70 ಜನರಿಗೆ ಟಿಕೆಟ್ ನೀಡಿ ತಮಗೆ ವಂಚನೆ ಮಾಡಿದೆ. ಇದಕ್ಕೆ ಕಾಂಗ್ರೆಸ್  ತಕ್ಕ ಪ್ರತಿಫಲವನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಭಿಮಾನಿ ಆತ್ಮಹತ್ಯೆ ಯತ್ನ: ತಮ್ಮ ಮೆಚ್ಚಿನ ನಾಯಕನಿಗೆ ಟಿಕೆಟ್ ನೀಡದ್ದರಿಂದ ಅಸಮಾಧಾನಗೊಂಡ ಸಂಗಮೇಶ್ವರ್ ಅಭಿಮಾನಿಯೊಬ್ಬ ಸಂಗಮೇಶ್ ಅವರ ನಿವಾಸದ ತಾರಸಿಯನ್ನೇರಿ ಅಲ್ಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಒಡ್ಡಿದ ಘಟನೆ ನಡೆಯಿತು. ನಂತರ ಇತರ ಕಾರ್ಯಕರ್ತರು ಆತನ ಮನವೊಲಿಸಿ ಕೆಳಗಿಳಿಸುವಲ್ಲಿ ಸಫಲರಾದರು.
 ಸಂಗಮೇಶ್ವರ್ ಅವರ ನಿವಾಸದಿಂದ ಹೊರಟ ಅವರ ಅಭಿಮಾನಿಗಳು ಸಂಗಮೇಶ್ವರ್ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಪ್ರತಿಭಟನಾ ಮೆರವಣಿಗೆ ಭದ್ರಾನದಿಯ ಸೇತುವೆಯ ಮೇಲೆ ಹಾದುಹೋಗುವಾಗ ಈರ್ವರು ಕಾರ್ಯಕರ್ತರು ಸೇತುವೆಯಿಂದ ಧುಮುಕಲು ಯತ್ನಿಸಿದ ಘಟನೆ ನಡೆಯಿತು.
 ಅಂಬೇಡ್ಕರ್ ವೃತ್ತದಲ್ಲಿಯೂ ಸಂಗಮೇಶ್ವರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಕೆಜೆಪಿ ಬೆಂಬಲ: ಮಂಗಳವಾರ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಕದಿರೇಶ್ ಅವರು ಸಂಗಮೇಶ್ವರ್ ಅವರು ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾದರೆ ತಾವು ತಮ್ಮ ನಾಮಪತ್ರ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಅಮೀರ್ ಜಾನ್ ಕಾಲೋನಿಯ ಟಿಪ್ಪೂ ಸುಲ್ತಾನ್ ಅವರು ಸಹ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.