ನೀರಿನ ಕರ ಏರಿಕೆಗೆ ವಿರೋಧ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.18
ಕುಡಿಯುವ ನೀರಿನ ಕರ ಏರಿಕೆ ಮಾಡಿರುವ ನಗರಸಭೆ ಕ್ರಮವನ್ನು ವಿರೋಧಿಸಿ ಗುರುವಾರ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ಗೆ ಮನವಿ ಅರ್ಪಿಸಿ, ಏರಿಸಿರುವ ದರವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.
ಏಪ್ರಿಲ್1ರಿಂದ ಅನ್ವಯವಾಗುವಂತೆ ನೀರಿನ ಶುಲ್ಕವನ್ನು ವಾರ್ಷಿಕ 720 ರುಪಾಯಿನಿಂದ 1,440 ರುಪಾಯಿಗೆ ಹೆಚ್ಚಿಸಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಶುಲ್ಕವಾಗಿ 600 ರುಪಾಯಿಯನ್ನು ಹೊಸದಾಗಿ ವಿಧಿಸಲಾಗಿದೆ. ಇದು ನಾಗರಿಕರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ವೇದಿಕೆಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ನೀರಿನ ಶುಲ್ಕವನ್ನು ಎರಡು ಪಟ್ಟು ಏರಿಸುವ ಮೂಲಕ ನಾಗರಿಕರಿಗೆ ಹೊರೆ ಮಾಡಲಾಗಿದೆ. ಅಲ್ಲದೇ ನೀರಿನ ಶುಲ್ಕ ಶೇ.100ರಷ್ಟು ಏರಿಕೆ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಅಸಮಾಧಾನ: ನೀರಿನ ಶುಲ್ಕ ಹೆಚ್ಚಿಸಲಾಗಿದೆಯೇ ಹೊರತು ನೀರು ಸರಬರಾಜಿಗೆ ಮತ್ತು ಶುದ್ದೀಕರಣಕ್ಕೆ ಯಾವುದೇ ಪ್ರಾಮಾಣಿಕ ಬದ್ಧತೆಯನ್ನು ನಗರಸಭೆ ತೋರಿಲ್ಲ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದರು. ಈಗಾಗಲೇ ಹಲವಾರು ಬಡಾವಣೆಗಳಲ್ಲಿ ಸ್ವಯಂ ಕಸ ವಿಲೇವಾರಿ ನಡೆಯುತ್ತಿದ್ದು, ಪ್ರತಿ ಮನೆಯವರೂ ತಲಾ 20ರಿಂದ 30 ರುಪಾಯಿ ವರೆಗೆ ಶುಲ್ಕ ನೀಡುತ್ತಿದ್ದಾರೆ. ಇದರೊಂದಿಗೆ ನಗರಸಭೆ 600 ರುಪಾಯಿ ಸ್ವಚ್ಛತಾ ಶುಲ್ಕ ವಿಧಿಸಿದರೆ ಹೆಚ್ಚು ಹೊರೆಯಾಗುತ್ತದೆ ಎಂದು ಹೇಳಿದರು.
ಕೌನ್ಸಿಲ್ ಸಭೆ: ಸ್ವಚ್ಛತೆ ಶುಲ್ಕ ವಿಧಿಸುವ ಮೊದಲು ನಗರಸಭೆಯಿಂದ ತ್ಯಾಜ್ಯ ವಿಲೇವಾರಿಗೆ ಯಾವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ಶೆಟ್ಟಿ, ನಗರಸಭೆ ಚುನಾಯಿತ ಪ್ರತಿನಿಧಿಗಳ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನೀರು ಮತ್ತು ತ್ಯಾಜ್ಯ ವಿಲೇವಾರಿ ಶುಲ್ಕ ಕುರಿತಂತೆ ನಗರದ ನಾಗರಿಕ ಸಂಘಟನೆಗಳೊಂದಿಗೆ ಚರ್ಚಿಸದೇ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದೂರಿದರು. ಸ್ವಯಂ ಘೋಷಿತ ಆಸ್ತಿತೆರಿಗೆ ಎಂದರೆ ನಮ್ಮ ತೆರಿಗೆಯನ್ನು ನಾವೇ ತೀರ್ಮಾನ ಮಾಡಿಕೊಳ್ಳಬೇಕು. ಈಗ ತಿಂಗಳಿಗೆ 30ರುಪಾಯಿಯಂತೆ ವರ್ಷಕ್ಕೆ 360ರುಪಾಯಿ ತ್ಯಾಜ್ಯ ವಿಲೇವಾರಿ ನೀಡುತ್ತಿದ್ದೇವೆ. ಆದರೂ 600 ಶುಲ್ಕ ವಿಧಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.
ಜಿಲ್ಲಾಧಿಕಾರಿಯವರು ಸರ್ಕಾರಿ ಆದೇಶದ ಬಗ್ಗೆ ಮಾತನಾಡುತ್ತಿದ್ದಾರೆ ವಿನಃ ತೆರಿಗೆದಾರರ ಸಮಸ್ಯೆ ಅರಿಯುತ್ತಿಲ್ಲ ಎಂದ ಹೇಳಿದ ಅವರು, ಹೆಚ್ಚುವರಿ ಶುಲ್ಕವನ್ನು ನಗರದ ನಾಗರಿಕರು ಕಟ್ಟಬಾರದು ಎಂದು ಮನವಿ ಮಾಡಿದರು.
ಇದು ಕರ ನಿರಾಕರಣೆಯಲ್ಲ. ಆದರೆ ಹೆಚ್ಚುವರಿ ಶುಲ್ಕ ಕಟ್ಟುವುದಿಲ್ಲ ಎಂದು ಹೇಳಿದರು. ಪ್ರತಿಭಟನೆಯಲ್ಲಿ ವೇದಿಕೆ ಪ್ರಮುಖರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

