ಅರಸು ಜಯಂತಿ ಆಚರಣೆಗೆ ಸಜ್ಜು
ಶಿವಮೊಗ್ಗ: ಆ. 20ರಂದು ಶಿವಮೊಗ್ಗ ನಗರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 98ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅರಸು ಜನ್ಮ ದಿನಾಚರಣೆ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಮಾನವೀಯ ಮೌಲ್ಯ ಎತ್ತಿಹಿಡಿಯುವ ಮೂಲಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ ನೇತಾರ ಡಿ. ದೇವರಾಜ ಅರಸು ಅವರ ಜನ್ಮ ದಿನವನ್ನು ವ್ಯವಸ್ಥಿತವಾಗಿನಡೆಸಲಾಗುವುದು ಎಂದರು.
ಮೆರವಣಿಗೆ: 20ರಂದು ಬೆಳಗ್ಗೆ ಡಿ. ದೇವರಾಜ ಅವರು ಅವರ ಭಾವಚಿತ್ರದ ಮೆರವಣಿಗೆ ಅಂಬೇಡ್ಕರ್ ಭವನದಿಂದ ಹೊರಟು ಶಿವಪ್ಪನಾಯಕ ಪ್ರತಿಮೆ ಮೂಲಕ ನೆಹರೂ ರಸ್ತೆ ಹಾಗೂ ಗೋಪಿ ಸರ್ಕಲ್, ಕೋರ್ಟ್ ಸರ್ಕಲ್ನಿಂದ ಕುವೆಂಪು ರಂಗಮಂದಿರದಲ್ಲಿ ಸಮಾವೇಶಗೊಳ್ಳಲಿದೆ. ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ತಜ್ಞರಿಂದ ಅರಸು ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ ಎಂದವರು ತಿಳಿಸಿದರು.
ಪೂರ್ವ ತಯಾರಿ ಕುರಿತು ಸ್ವಾಗತ ಸಮಿತಿ ರಚನೆ, ಆಹ್ವಾನ ಪತ್ರಿಕೆ, ಮೆರವಣಿಗೆ, ಅಲಂಕಾರ, ಆಹಾರ ಸಮಿತಿ, ಪ್ಲೇಕ್ಸ್ ಹಾಗೂ ಬ್ಯಾನರ್ಗಳ ಮೂಲಕ ವ್ಯಾಪಕ ಪ್ರಚಾರ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಬಹುಮಾನ ವಿತರಣೆ: ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲು ಹಾಗೂ ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲು ಕ್ರಮ ಕೈಗೊಳ್ಳುವಂತೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್, ಹಿಂದುಳಿದ ವರ್ಗಗಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕೆಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ
ಶಿಕಾರಿಪುರ: ತಾಲೂಕಿನ ಈಸೂರು ಗ್ರಾಪಂಗೆ ನಡೆದ ಮರುಚುನಾವಣೆಯಲ್ಲಿ ಕೆಜೆಪಿ ಬೆಂಬಲಿತ ಅಭ್ಯರ್ಥಿ ಕೆ. ವೀರಪ್ಪ ಅಂತರದಿಂದ ಜಯಗಳಿಸಿದ್ದಾರೆ. ತಾಲೂಕಿನ ಈಸೂರು ಗ್ರಾಪಂ 1 ನೇ ಕ್ಷೇತ್ರದಲ್ಲಿನ ಸದಸ್ಯ ಬಸವರಾಜಪ್ಪನವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆ. 4 ರಂದು ಮರುಚುನಾವಣೆಯಾಗಿದ್ದು, ಬುಧವಾರ ಪ್ರಕಟವಾದ ಮತ ಎಣಿಕೆಯಲ್ಲಿ ಕೆಜೆಪಿ ಬೆಂಬಲಿತ ಅಭ್ಯರ್ಥಿ ವೀರಪ್ಪ 513 ಮತ ಪಡೆಯುವ ಮೂಲಕ ಪ್ರತಿಸ್ಪರ್ದಿ ಚಂದ್ರಶೇಖರವರನ್ನು 225 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕ್ಷೇತ್ರದಲ್ಲಿನ 1,118 ಮತಗಳಲ್ಲಿ 810 ಮತದಾನವಾಗಿದ್ದು, 9 ಮತ ತಿರಸ್ಕೃತಗೊಂಡಿದೆ. ಚುನಾವಣಾಧಿಕಾರಿಯಾಗಿ ಜಿಪಂ ಎಇ ಪರಶುರಾಮ್ ಕರ್ತವ್ಯ ನಿರ್ವಹಿಸಿದ್ದರು. ಗ್ರಾಪಂ ನೂತನ ಸದಸ್ಯ ಕೆ. ವೀರಪ್ಪನವರಿಗೆ ತಾಲೂಕು ಕೆಜೆಪಿ ಮುಖಂಡ ಗುರುಮೂರ್ತಿ ಮೊದಲಾದವರು ಅಭಿನಂದಿಸಿದ್ದಾರೆ.
ವೈದ್ಯಕೀಯ ವೆಚ್ಚ ವಿತರಣೆ
ಜೋಗ್ ಫಾಲ್ಸ್: ಇಲ್ಲಿನ ಜೋಗ- ಕಾರ್ಗಲ್ ಪಟ್ಟಣ ಪಂಚಾಯ್ತಿ ವತಿಯಿಂದ ಶೇ.3, ಶೇ.7.25 ಮತ್ತು ಶೇ.22.75 ಯೋಜನೆಯಡಿಯಲ್ಲಿ ಜೋಗ್, ಕಾರ್ಗಲ್, ಲಿಂಗನಮಕ್ಕಿ ವ್ಯಾಪ್ತಿಯ ಜನರಿಗೆ ವೈದ್ಯಕೀಯ ಸೌಲಭ್ಯಗಳ ಬಳಕೆಗಾಗಿ 10 ಲಕ್ಷ ಧನ ಸಹಾಯವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ, ಬಡ ಜನರ, ಹಿಂದುಳಿದ ವರ್ಗದವರ ಮತ್ತು ಪರಿಶಿಷ್ಟ ಜಾತಿ-ವರ್ಗದವರ ಆರೋಗ್ಯದ ಹಿತ ದೃಷ್ಟಿಯಿಂದ ವೈದ್ಯಕೀಯ ಸೌಲಭ್ಯಗಳ ಬಳಕೆಗಾಗಿ ಧನಸಹಾಯವನ್ನು ನೀಡಲಾಗುತ್ತಿದ್ದು, ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬೇಕೆನ್ನುವುದೇ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲೂ ಗಂಭೀರ ಸ್ವರೂಪದ ಖಾಯಿಲೆಯಿಂದ ಬಳಲುತ್ತಿದ್ದರೆ ಅದರ ರಶೀದಿಗಳನ್ನು ಪಂಚಾಯ್ತಿಗೆ ನೀಡಿ ಧನಸಹಾಯವನ್ನು ಪಡೆಯಬಹುದಾಗಿದೆ ಎಂದರು.
ಯೋಧರ ಹತ್ಯೆ ಖಂಡಿಸಿ ರಸ್ತೆತಡೆ
ಭದ್ರಾವತಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಗಡಿಯೊಳಗೆ ನುಗ್ಗಿದ ಪಾಕಿಸ್ತಾನಿ ಸೈನಿಕ ಪಡೆ ಮಂಗಳವಾರ ಬೆಳಗ್ಗೆ ಭಾರತದ ಐವರು ಯೋಧರನ್ನು ಹತ್ಯೆಗೈದಿರುವುದನ್ನು ಖಂಡಿಸಿ ಸ್ಥಳೀಯ ಭಜರಂಗದಳ ಕಾರ್ಯಕರ್ತರು ಪಟ್ಟಣದ ಮಾಧವಾಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಸ್ತೆತಡೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಧರ್ಮಪ್ರಸಾದ್, ಈ ಹಿಂದೆ ನಡೆದ ಕಾರ್ಗಿಲ್ ಯುದ್ಧವನ್ನು ಈ ಘಟನೆ ಮತ್ತೆ ನೆನಪಿಗೆ ತಂದಿದೆ. ಪಾಕಿಸ್ತಾನದ ಈ ದುಷ್ಕೃತ್ಯವನ್ನು ಖಂಡಿಸಿ ಭಾರತದ ಯೋಧರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಇದನ್ನು ಮನಗಂಡು ಪಾಕಿಸ್ತಾನ ತನ್ನ ಅಕ್ರಮ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯು.ಪಿ.ಎ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತಕ್ಕ ಉತ್ತರ ನೀಡಬೇಕು. ಇದರಲ್ಲಿ ಯಾವುದೇ ಲೋಪದೋಷಗಳುಂಟಾದಲ್ಲಿ ಭಜರಂಗದಳವು ಉಗ್ರ ಹೋರಾಟವನ್ನು ರೂಪಿಸುವುದು ಎಂದು ಅವರು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

