ಶಿವಮೊಗ್ಗ

ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ಸಂಕಲ್ಪ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ ಆ.11
ಶಿವಮೊಗ್ಗದಲ್ಲೊಂದು ಸಾಂಸ್ಕೃತಿಕ ಸಮುಚ್ಛಯ ನಿರ್ಮಿಸುವ ಸಂಕಲ್ಪಕ್ಕೆ ಭಾನುವಾರ ಕರ್ನಾಟಕ ಸಂಘದಲ್ಲೇ ಕಿಕ್ಕಿರಿದು ಸೇರಿದ್ದ ನೂರಾರು ಜನ ಸಾಕ್ಷಿಯಾದರು.
ಭಾನುವಾರ ಸಂಜೆ ಶಿವಮೊಗ್ಗ ಬೆಳ್ಳಿ ಮಂಡಲ ಆಯೋಜಿಸಲಾಗಿದ್ದ 4ನೇ ವರ್ಷದ ಚಿತ್ರೋತ್ಸವ ಸರಣಿ ಹಾಗೂ ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಉದ್ಘಾಟನೆ ನೆರವೇರಿಸಿ ಮಾತನಾಡಿದ ನಿರ್ದೇಶಕ ಬಿ.ಸುರೇಶ್, ಶಿವಮೊಗ್ಗಕ್ಕೆ ಸಾಂಸ್ಕೃತಿಕ ಸಮುಚ್ಛಯದ ಅವಶ್ಯಕತೆ ಇದ್ದು, ಕೇಂದ್ರದ ಸರ್ಕಾರದ ಅಗತ್ಯ ಹಣಕಾಸು ನೆರವು ಪಡೆದು ಯೋಜನೆ ಅನುಷ್ಠಾನ ಮಾಡುವಂತೆ ವೇದಿಕೆಯಲ್ಲಿದ್ದ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ಗೆ ಸಲಹೆ ನೀಡಿದರು.
ನಂತರ ಮಾತನಾಡುವ ಸರದಿ ಬಂದಾಗ ಪ್ರಸನ್ನಕುಮಾರ್, ಯೋಜನೆಯ ಅನುಷ್ಠಾನಕ್ಕೆ ಕೇಂದ್ರದಿಂದ ಹಣ ತರಲು ಎಲ್ಲಾ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರಲ್ಲದೇ, ಬೆಳ್ಳಿ ಮಂಡಲದ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಶಾಸಕರ ಅನುದಾನದಲ್ಲಿ 2 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದರು.
ಬೇಕು ಸಮುಚ್ಛಯ: ಶಿವಮೊಗ್ಗದಲ್ಲಿ ಕಲಾತ್ಮಕ ಸಿನೆಮಾಗಳನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸಬಹುದಾಗಿದ್ದ ಸಾಂಸ್ಕೃತಿಕ ಭವನ ರಂಗಾಯಣದ ಪಾಲಾಗಿದೆ. ಹಾಗಾಗಿ ಅಂತಹುದೇ ಮತ್ತೊಂದು ಕೇಂದ್ರ ಶಿವಮೊಗ್ಗಕ್ಕೆ ಅಗತ್ಯವಿದೆ. ಅದನ್ನು ಶಾಸಕರ ನಿಧಿಯಲ್ಲಿ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಸುಮಾರು 7-8 ಕೋಟಿ ಬೇಕಾಗುತ್ತದೆ, ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಸಾಕಷ್ಟು ಹಣವಿದ್ದು, ಅಲ್ಲಿಂದ ಇಂತಹ ಕೇಂದ್ರಗಳಿಗೆ ಅನುದಾನ ಸಿಗುತ್ತದೆ. ಅದನ್ನು ಬಳಸಿಕೊಳ್ಳಬೇಕು, ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಸಾಧ್ಯವಿದೆ ಎಂದು ಬಿ. ಸುರೇಶ್ ಸಲಹೆ ನೀಡಿದರು.
ಈ ಸಮುಚ್ಛಯದಲ್ಲಿ ಸಿನೆಮಾ- ರಂಗಭೂಮಿಯ ಜ್ಞಾನ ಹೇಳಿಕೊಡುವ ಕೇಂದ್ರವನ್ನೂ ಆರಂಭಿಸಬಹುದು. ಕರ್ನಾಟಕದಲ್ಲಿ ಅಂತಹ ಯಾವುದೇ ಒಳ್ಳೆಯ ಕೇಂದ್ರವಿಲ್ಲ. ಅದನ್ನು ಕಲಿಯಲು ತ್ರಿವೇಂಡ್ರಂ, ಕೊಲ್ಕೊತ್ತಾ, ಚೆನ್ನೈ ನಗರಗಳಿಗೆ ತೆರಳಬೇಕಾದ ಸ್ಥಿತಿಯಿದೆ. ಹೀಗಾಗಿ ಅಗತ್ಯ ಹೆಚ್ಚಿದ್ದು, ಪ್ರಯತ್ನ ಮಾಡಬೇಕಾಗಿದೆ ಎಂದು ತಿಳಿಸಿದರು.
ಒಳ್ಳೆ ಚಿತ್ರಕ್ಕೆ ದುಡ್ಡುಕೊಡಲಿ: ಒಳ್ಳೆಯ ಸಿನೆಮಾಗಳನ್ನು ಥಿಯೇಟರ್‌ಗಳಲ್ಲಿ ಪ್ರದರ್ಶಿಸಿದರೂ ಅಲ್ಲಿನ ಗಲಾಟೆ - ಗದ್ದಲಗಳಲ್ಲಿ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೆ ಒಂದೆರಡು ದಿನಗಳಲ್ಲೇ ಎತ್ತಂಗಡಿಯಾಗಿ ಬಿಡುತ್ತವೆ. ಗಿರೀಶ್ ಕಾಸರವಳ್ಳಿ ಅವರ ಸಿನೆಮಾಗಳನ್ನು ಥಿಯೇಟರ್‌ಗಳಿಗಿಂತ ಕರ್ನಾಟಕ ಸಂಘದಂತಹ ಸ್ಥಳಗಳಲ್ಲೇ ನೋಡಬೇಕೆನಿಸುತ್ತದೆ. ಇಂತಹ ಕಡೆಗಳಲ್ಲಿ ಒಂದೇ ತೆರನಾದ ಅಭಿಪ್ರಾಯಗಳ ಜನರು ಸೇರುತ್ತಾರೆ. ಯಾವುದೇ ಗೌಜು- ಗದ್ದಲಗಳಿರುವುದಿಲ್ಲ. ಕೂರ್ಮಾವತಾರ, ಭಾರತ್ ಸ್ಟೋರ್ಸ್‌ನಂತಹ ಸಿನೆಮಾಗಳನ್ನು ಇಂತಹ ಕಡೆಗಳಲ್ಲಿಯೇ ಸೂಕ್ಷ್ಮವಾಗಿ ನೋಡಲಿಕ್ಕೆ ಸಾಧ್ಯ. ಜೊತೆಗೆ ಇಂತಹ ಸಿನೆಮಾಗಳ ನಿರ್ಮಾಪಕರಿಗೆ ಸಾರ್ವಜನಿಕರೇ ಹಣ ಒಟ್ಟುಗೂಡಿಸಿ ನೀಡುವ ವ್ಯವಸ್ಥೆಯಾಗಬೇಕು. ಆಗ ನಿರ್ಮಾಪಕರು ಇನ್ನಷ್ಟು ಉತ್ತಮ ಚಿತ್ರ ನಿರ್ಮಿಸಿ ನಮಗೆ ಕೊಡಲು ಸಾಧ್ಯವಾಗುತ್ತದೆ ಎಂದರು.
ಬದಲಾದ ಕಾಲಮಾನದಲ್ಲಿ ಎರಡು ವಯೋವುತಿಯ ವರ್ಗಗಳ ನಡುವೆ ಸಂಘರ್ಷ ನಡೆಯುತ್ತಿದೆ. 40ರ ನಂತರದ ವಯೋವಾನದವರ ಅಭಿರುಚಿಯೇ ಒಂದು ತೆರನಾಗಿದ್ದರೆ 20ರಿಂದ 40 ವಯೋವಾನದವರ ಅಭಿರುಚಿ ಅದಕ್ಕೆ ವಿರುದ್ಧವಾಗಿದೆ. 40ರ ನಂತರದ ವಯೋವಾನದವರ ಒಳ್ಳೆಯದು ಎನ್ನುವ ವಸ್ತು ಯುವ ವಯೋವಾನದವರಿಗೆ ಒಳ್ಳೆಯದಾಗಿ ಕಾಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಆದಷ್ಟು ಬೇಗ ಸಂಪಾದಿಸುವ ಧಾವಂತ ಯುವ ಜನರಲ್ಲಿ ಕಾಣಿಸುತ್ತಿದೆ. ಪದವಿ ಮುಗಿಯದೇ ಹೋದರೂ ಹಣ ಸಂಪಾದಿಸುವ ಧಾವಂತ ಇದೆ. ಈ ಧಾವಂತದ ಅಡಿಯಲ್ಲಿ ಕ್ಲುಪ್ತ ಮನೋರಂಜನೆಯನ್ನು ಯುವ ಜನತೆ ಬಯಸುತ್ತಿದೆ. ಎರಡದಿಂದ ಮೂರು ನಿಮಿಷ, ಹೆಚ್ಚಿನ ಸಮಯ ಸಿಕ್ಕರೆ 10 ನಿಮಿಷದಲ್ಲಿ ಯೂಟ್ಯೂಬ್‌ನಲ್ಲಿ ಚಿತ್ರ ನೋಡಿ ಮುಗಿಸುವ ಧಾವಂತ ಅವರಲ್ಲಿದೆ. ದಿನವೊಂದಕ್ಕೆ 65 ದೈನಿಕ ಧಾರವಾಹಿಗಳು ಪ್ರಸಾರವಾಗುತ್ತವೆ.
ಇವುಗಳ ಜೊತೆಗೆ ಯುವ ಜನತೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹೆಚ್ಚು ಒತ್ತಡ ಹೇರಿದರೆ ಅದನ್ನೇ ಯುದ್ಧದಂತೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಇತ್ತೀಚೆಗೆ ಬೆಂಗಳೂರು ಬಳಿ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆಯನ್ನು ವಿವರಿಸಿದರು.
ಬೆಳ್ಳಿ ಮಂಡಲ ಅಧ್ಯಕ್ಷ ಡಾ.ಕೆ.ಎ. ಅಶೋಕ ಪೈ, ಸಂಚಾಲಕ ವೈದ್ಯ, ಹಿರಿಯ ಚಲನಚಿತ್ರ ಚಿಂತಕ ಶ್ರೀಪಾದ ಭಟ್, ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ.ತಿಮ್ಮಯ್ಯ, ಡಾ. ನಾಗಭೂಷಣ, ಡಿ.ಎಸ್. ಅರುಣ್ ಮತ್ತಿತರರು ಹಾಜರಿದ್ದರು. ನಂತರ ಕೂರ್ಮಾವತಾರ ಚಿತ್ರದ ಪ್ರದರ್ಶನ ನಡೆಯಿತು.

ಸಿನಿಮೊಗೆ ಉದಯ
ಶಿವಮೊಗ್ಗ ಸಿನಿಮಾ ಸಮಾಜ ಸಿನಿಮೊಗೆ ಭಾನುವಾರದಿಂದ ಅಧಿಕೃತವಾಗಿ ಚಟುವಟಿಕೆ ಆರಂಭಿಸಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಲಾಂಛನ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಹಾಗೂ ಬೆಳ್ಳಿಮಂಡಲ ಸಂಚಾಲಕ ವೈದ್ಯ, ಮೂರು ವರ್ಷ ಪೂರೈಸಿದ ಬೆಳ್ಳಿಮಂಡಲ ಈವರೆಗೆ 58 ಕಾರ್ಯಕ್ರಮ(ಚಿತ್ರೋತ್ಸವ, ಶಿಬಿರ) ನಡೆಸಿದೆ. 178 ಮಂದಿ ಸಿನಿಮಾ, ಸಾಹಿತ್ಯ ಸಂಗೀತ ಕ್ಷೇತ್ರದ ಗಣ್ಯರನ್ನು ಕರೆಸಿ ಸಂವಾದ ನಡೆಸಲಾಗಿದ್ದು, ಇದು ಶಿವಮೊಗ್ಗಕ್ಕೆ ಹೆಮ್ಮೆ ತರುವ ವಿಚಾರ ಎಂದರು. ಇನ್ನು ಮುಂದೆ ಸಿನಿಮೊಗೆ ಅಡಿಯಲ್ಲಿ ಚಿತ್ರೋತ್ಸವ, ಕಿರುಚಿತ್ರ ಉತ್ಸವ, ದಸರಾ ಚಿತ್ರೋತ್ಸವ ನಡೆಸಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.