ಶಿವಮೊಗ್ಗ

ಇಂದು ವೈವಿಧ್ಯಮಯ ಭಾವಲಹರಿ

Published On :

ಶಿವಮೊಗ್ಗ: ನಾಡಿನ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಾದ ಮೈಸೂರು ಅನಂತಸ್ವಾಮಿ ಹಾಗೂ ಸಿ. ಅಶ್ವತ್ಥ ಅವರ ರಾಗಸಂಯೋಜನೆಯ ಭಾವಗೀತೆಗಳ ಸಂಗೀತ ಸಂಜೆ ಭಾನುವಾರ (ಆ.18)ಸಂಜೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.
ಶಂಕರ್ ಸೈಕಲೋತ್ಸವ ಮತ್ತು ಗುರುಗುಹ ಸಂಗೀತ ಸಮಗ್ರ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಶಿವಮೊಗ್ಗದ ಯುವ ಕಲಾವಿದರಾದ ಋತ್ವಿಕ್ ಮುರಳೀಧರ್, ಅಮಿತ್ ಎಸ್.ಕುಮಾರ್, ಚಾರ್ವಿ ಮುರಳೀಧರ್, ವಿ.ಕೃಪಾ ಭಾವಗೀತೆಗಳಿಗೆ ಸಂಗೀತ ಲೇಪನ ಮಾಡಲಿದ್ದಾರೆ.
ಪೂರ್ವತಯಾರಿ: ಕಾರ್ಯಕ್ರಮದ ಮಾರ್ಗದರ್ಶಕ ವಿದ್ವಾನ್ ಎಚ್.ಎಸ್.ನಾಗರಾಜ್ ಭಾವಲಹರಿ ಕುರಿತು ಪ್ರತಿಕ್ರಿಯೆ ನೀಡಿ, ಕಾರ್ಯಕ್ರಮದಲ್ಲಿ ಕೇಳುಗರಿಗೆ ಕವನದ ಸಾಹಿತ್ಯವನ್ನು ತಲುಪಿಸಲು ಪೂರ್ವ ತಯಾರಿ ನಡೆಯಲಿದೆ. ಕಾರ್ಯವನ್ನು ಇಬ್ಬರು ಕನ್ನಡ ಪಂಡಿತರು ನಡೆಸಿಕೊಡುತ್ತಾರೆ ಎಂದರು.
ಒಂದು ಕವನದ ಭಾವನೆ ಏನು, ಕವಿದೃಷ್ಟಿ ಏನು ಹೇಳುತ್ತದೆ ಎಂಬುದನ್ನು ಈ ಪಂಡಿತರು ಚುಟುಕಾಗಿ ಪ್ರಸ್ತುಪಡಿಸುತ್ತಾರೆ. ಹಾಗೆಂದು ಕವಿತೆಯ ಪೂರ್ಣ ಪಾಠವನ್ನೂ ಹೇಳುವುದಿಲ್ಲ. ಆಯ್ದ ಕವಿತೆಗಳ ಪೂರ್ವಪೀಠಿಕೆ ಒದಗಿಸಿ, ಹಾಡಿಸುವ ಕಾರ್ಯ ಇಲ್ಲಿ ನಡೆಯುವುದು ಸಾರಾಂಶ ಎಂದು ತಿಳಿಸಿದರು.
ಸಂಗೀತದ ಮಧ್ಯೆ ಮಾತೇಕ ಎಂಬ ವಿಚಾರ ಬರಬಹುದು, ಇದು ಸಾಹಿತ್ಯದ ಕಾರ್ಯಕ್ರಮ. ಎಷ್ಟೇ ಆಡಂಬರವಾಗಿ ದೇವಸ್ಥಾನ ಕಟ್ಟಿದರೂ ದೇವಸ್ಥಾನದಲ್ಲಿ ದೇವತಾಮೂರ್ತಿಯೇ ಮುಖ್ಯವಾಗುತ್ತದೆ. ಅದೇ ರೀತಿ ಹಾಡು ಎಷ್ಟೇ ಚೆನ್ನಾಗಿ ಹೇಳಿದರೂ, ಸಾಹಿತ್ಯ ಮುಖ್ಯವಾಗುತ್ತದೆ. ಅದನ್ನು ಸೂಚ್ಯವಾಗಿ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಕವಿದೃಷ್ಟಿ: ಶ್ರಾವಣಾ ಬಂತು ಶ್ರಾವಣ..., ದೀಪವು ನಿನ್ನದೆ..., ಮುಚ್ಚುಮರೆ ಇಲ್ಲದೆಯೇ... ಕವನ ಸೇರಿದಂತೆ 15ರಿಂದ 20 ಕವನಗಳು, ಅವುಗಳ ಭಾವನೆ, ಕವಿ ದೃಷ್ಟಿಯನ್ನು ಅರ್ಥೈಸಲಾಗುತ್ತದೆ. ಸುಮಾರು 2.30 ಗಂಟೆ ಕಾರ್ಯಕ್ರಮ ಇದಾಗಿದ್ದು, 6 ಗಂಟೆಗೆ ಆರಂಭವಾಗಲಿದೆ.
ಭಾವಲಹರಿ ಕುರಿತು ಪ್ರತಿಕ್ರಿಯಿಸಿರುವ ಆಯೋಜಕರಾದ ಶಂಕರ್ ಸೈಕಲೋತ್ಸವದ ಮುರಳೀಧರ್, ಭಾವಗೀತೆ ಕಾರ್ಯಕ್ರಮ ಎಂದರೆ ಸರಳವಾಗಿ ನಡೆಯುತ್ತವೆ ಎಂಬ ಕಲ್ಪನೆ ಸಾಮಾನ್ಯ. ಅದರ ಹೊರತಾಗಿ ವಿಭಿನ್ನವಾಗಿ, ವರ್ಣರಂಜಿತವಾಗಿ ಪ್ರಸ್ತುತಪಡಿಸಬೇಕೆಂಬ ಉದ್ದೇಶದಿಂದ ಭಾವಲಹರಿ ಆಯೋಜಿಸಲಾಗಿದೆ. ಗುರುಗುಹದಂತಹ ದೊಡ್ಡ ಸಂಸೆಯೊಂದಿಗೆ ಸೇರಿಕೊಂಡು ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎನಿಸುತ್ತಿದೆ ಎಂದು ತಿಳಿಸಿದರು.
ಭಾವಲಹರಿ ಪೂರ್ವತಯಾರಿ ಚೆನ್ನಾಗಿ ನಡೆದಿದೆ, ಕಳೆದ 15 ದಿನಗಳಿಂದ ನಮ್ಮ ತಂಡ ಕಠಿಣ ಅಭ್ಯಾಸ ನಡೆಸಿದೆ. ಶಿವಮೊಗ್ಗದ ಕಲಾಭಿಮಾನಿಗಳನ್ನು ನಾವು ನಿರಾಸೆಗೊಳಿಸುವುದಿಲ್ಲ. ವಿದ್ವಾನ್ ಶೃಂಗೇರಿ ನಾಗರಾಜ್ ಅವರ ಮಾರ್ಗದರ್ಶನ ಪಡೆದುಕೊಂಡಿದ್ದೇವೆ ಎಂದು ಯುವ ಗಾಯಕ ಅಮಿತ್ ಎಸ್. ಕುಮಾರ್ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.