ರಂಗ ಶಿಕ್ಷಕರ ನೇಮಿಸಿ
ಶಿವಮೊಗ್ಗ: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಯಶಸ್ವಿ ಅನುಷ್ಠಾನ ಮತ್ತು ಸಫಲತೆಯಲ್ಲಿ ನಾಟಕ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ರಂಗ ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ರಂಗಶಿಕ್ಷಣ ಪದವೀಧರರ ಸಂಘವು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಮನವಿ ಸಲ್ಲಿಸಿದೆ.
ಮಗುವಿನ ದೈಹಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಗೆಳೆಯುವುದಾದರೆ ಶಿಕ್ಷಣದ ಪ್ರಕ್ರಿಯೆಯಲ್ಲಿ ರಂಗಕಲೆ ವಿಧಾನಗಳು, ಚಟುವಟಿಕೆಗಳು ಅನಿವಾರ್ಯ ಎಂದು ಶಿಕ್ಷಣ ತಜ್ಞರು, ಶೈಕ್ಷಣಿಕ ಮನೋವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ರಂಗಭೂಮಿಯು ಬಹುಮುಖ್ಯವಾಗಿ ಮನಸ್ಸಿನ ಆತಂಕವನ್ನು ದೂರಮಾಡಿ ಶಾಂತಿಯನ್ನು ನೀಡಿ ಸೌಹಾರ್ದ ಬಾಳಿಗೆ ಸೇತುವೆಯಂತೆ ಕೆಲಸಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಬಜೆಟ್‌ನಲ್ಲಿ ಮತ್ತು ಆದ್ಯತೆಯಲ್ಲಿ ರಂಗಭೂಮಿಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಎನ್‌ಸಿಎಫ್- 2005: ಭಾರತ ಸರ್ಕಾರವೂ ಸಹ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು- 2005 (ಎನ್.ಸಿ.ಎಫ್.- 2005) ಮುಖಾಂತರ ಶಿಕ್ಷಣ ನೀಡುವ ಮತ್ತು ಮೌಲ್ಯಮಾಪನ ಮಾಡುವ ವಿಧಾನಗಳನ್ನು ಗುರುತಿಸುವಲ್ಲಿ ರಂಗಭೂಮಿಯ ಆಯಾಮಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಸರ್ವ ಶಿಕ್ಷಣ ಅಭಿಯಾನದ ಮೂಲಕ ಸಿ.ಸಿ.ಇ ನಿಯಮ (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ) ಅಳವಡಿಸಿದೆ.
ಸಾವಿರ ಮಂದಿಗೆ ಕೆಲಸ: ಈಗಾಗಲೇ ರಾಜ್ಯದಲ್ಲಿ 54 ನಾಟಕ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ತೊಡಗಿಸಿಕೊಂಡು ವಿಭಿನ್ನವಾಗಿ ಕಾರ್ಯೋನ್ಮುಖರಾಗಿದ್ದಾರೆ. ಉಳಿದಂತೆ ರಾಜ್ಯದ 8226 ಪ್ರೌಢಶಾಲೆಗಳಲ್ಲೂ ಹಲವು ಶಾಲೆಗಳಿಗೆ ನಾಟಕ ಶಿಕ್ಷಕರ ನೇಮಕಾತಿ ಅಗತ್ಯವಿದೆ. ಆದ್ದರಿಂದ ನಾಟಕ ಶಿಕ್ಷಕರನ್ನು ಶಾಲೆಗಳಿಗೆ ಕಾಯಂ ಆಗಿ ನೇಮಕ ಮಾಡಿಕೊಳ್ಳಬೇಕು. ಈ ಸಂಬಂಧ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ರಾಜ್ಯದಲ್ಲಿರುವ ರಂಗ ಶಿಕ್ಷಣ ಪದವೀಧರರು-ಒಂದು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಯಂ ನೇಮಕಾತಿ ಆಗುವವರೆಗೆ ತಾತ್ಕಾಲಿಕವಾಗಿ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುವುದಾದರೆ, ತತ್ಸಂಬಂಧ ವಿದ್ಯಾರ್ಹತೆ ಹೊಂದಿರುವವರಿಗೆ ಮತ್ತು ಗುಣಾತ್ಮಕ ಸಂಸ್ಥೆಗೆ ತಾತ್ಕಾಲಿಕ ನೇಮಕಾತಿ ಜವಾಬ್ದಾರಿ ನೀಡಬಹುದಾಗಿದೆ ಎಂದು ಸಂಘವು ಮನವಿಯಲ್ಲಿ ಹೇಳಿದೆ.
ರಂಗಶಿಕ್ಷಣ ಪದವೀಧರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪೀರಗಾರ, ಅಜಯ್ ಗೌಡ, ಕಒಕ್ಕೂಟದ ಅಧ್ಯಕ್ಷ ಪ್ರೊ. ಎಸ್.ಸಿ. ಗೌರಿಶಂಕರ್, ರಂಗಕರ್ಮಿ ಡಾ. ಸಾಸ್ವೆಹಳ್ಳಿ ಸತೀಶ್ ಹಲವು ರಂಗಶಿಕ್ಷಣ ಪದವೀಧರರು ಇದ್ದರು.
ಇತರೆ ಬೇಡಿಕೆಗಳು
ರಂಗ ಶಿಕ್ಷಕರ ನೇಮಕ ಸಂದರ್ಭ ಹೆಗ್ಗೋಡಿನ ನೀನಾಸಂ, ಸಾಣೇಹಳ್ಳಿಯ ಶಿವಕುಮಾರ ರಂಗಶಿಕ್ಷಣ ಕೇಂದ್ರ, ಕುಂದಾಪುರದ ರಂಗ ಅಧ್ಯಯನ ಕೇಂದ್ರ ಮತ್ತು ಮೈಸೂರು ರಂಗಾಯಣದ ರಂಗಶಾಲೆಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ರಂಗ ಶಿಕ್ಷಣ ಪಡೆದವರನ್ನೇ ನೇಮಕಾತಿ ಮಾಡಿಕೊಳ್ಳಬೇಕು. ಇದಕ್ಕಾಗಿ ವೃಂದ ಮತ್ತು ನೇಮಕಾತಿ ನಿಯಮಗಳ ಸೂಕ್ತ ತಿದ್ದುಪಡಿ ಮಾಡಬೇಕು.
ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರಂಗಶಿಕ್ಷಕರಿಗೆ ಶಾಲಾ ವೇಳಾಪಟ್ಟಿಯಲ್ಲಿ ಅವಧಿಯನ್ನು ನಿಗದಿಪಡಿಸಬೇಕು.
ರಾಜ್ಯದ ಪ್ರತಿ ಶಾಲೆಯ ಮಕ್ಕಳು ವರ್ಷಕ್ಕೊಂದು ಪರಿಪೂರ್ಣ ನಾಟಕ ಕಲಿತು ಪ್ರದರ್ಶಿಸುವಂತೆ ಅನುದಾನ ನೀಡಬೇಕು ಹಾಗೂ ರಂಗ ಪದವೀಧರರು ಮತ್ತು ನುರಿತ ರಂಗ ತಜ್ಞರನ್ನು ಇದಕ್ಕಾಗಿ ಬಳಸಿಕೊಳ್ಳಬೇಕು.
ರಂಗಭೂಮಿಯಲ್ಲಿ ಉನ್ನತ ಪದವಿ ಹಾಗೂ ವ್ಯಾಸಂಗ ಮಾಡಿದವರನ್ನು ಜಿಲ್ಲಾ ಡಯಟ್‌ನಲ್ಲಿ ರಂಗಭೂಮಿ ಪ್ರಶಿಕ್ಷಕರಾಗಿ ನೇಮಕ ಮಾಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

