ಶಿವಮೊಗ್ಗ

ಗೀತಾ ಪುನಶ್ಚೇತನ ಅಭಿಯಾನ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.18 ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಮ್ಮಿಕೊಂಡಿರುವ ಶ್ರೀಮದ್ ಭಗವದ್ಗೀತಾ ಪುನಶ್ಚೇತನ ಅಭಿಯಾನಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ದೊರೆಯಿತು.
  ಕಳೆದ ವರ್ಷ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಭಗವದ್ಗೀತೆ ಅಭಿಯಾನ ಇದೀಗ ಮತ್ತಷ್ಟು ಜನರನ್ನು ತಲುಪುವ ಉದ್ದೇಶದಿಂದ ಪುನಶ್ಚೇತನ ಕಾರ್ಯಕ್ರಮದ ಮೂಲಕ ಮುಂದುವರಿದಿದ್ದು,  ಶಿವಮೊಗ್ಗ ಜಿಲ್ಲೆಯ ಪುನಶ್ಚೇತನ ಅಭಿಯಾನಕ್ಕೆ ಹವ್ಯಕ ಭವನದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಕಾರ್ಯದರ್ಶಿ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಸ್.ಕುಮಾರ್ ಚಾಲನೆ ನೀಡಿದರು.
ನಾಗಾಲೋಟದ ಬದುಕು: ನಂತರ ಮಾತನಾಡಿದ ಎನ್.ಎಸ್.ಕುಮಾರ್, ಇಂದು ನಾಗಾಲೋಟದ ಬದುಕಿಗೆ ಇಳಿದಿದ್ದು, ಮನುಷ್ಯ ಮನುಷ್ಯನ ನಡುವಿನ ಸಂಬಂಧ ದೂರವಾಗುತ್ತಿದೆ. ವರ್ತಮಾನದಲ್ಲಿ ಇರುವ ನಾವು ಭೂತ ಇಲ್ಲವೇ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿರುತ್ತೇವೆ.
  ಭವಿಷ್ಯದ ನಿರಾಸೆ, ಜಿಗುಪ್ಸೆಯ ಬಗ್ಗೆ ಆಲೋಚನೆಯಾದರೆ ಭವಿಷ್ಯದ ಭಯ, ಆತಂಕ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ವರ್ತಮಾನವನ್ನು ಸಮರ್ಥವಾಗಿ ಎದುರಿಸಲು ಗೀತೆ ಸಹಕಾರಿ ಎಂದರು.
ನಮ್ಮ ಮಕ್ಕಳಿಗೆ ಈ ವಿಚಾರದಲ್ಲಿ ಅಣಿಗೊಳಿಸುವ ಅಗತ್ಯವಿದ್ದು, ಭಗವದ್ಗೀತೆ ಈ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ಈ ಕಾರ್ಯಕ್ರಮ ಸಮಾಜಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.
ಪಚನವಾಗುವ ಶಿಕ್ಷಣ ಬೇಕು: ವಿನಯಾನಂದ ಸರಸ್ವತಿ ಶ್ರೀ ಮಾತನಾಡಿ, ಪ್ರತಿಯೊಬ್ಬರಿಗೂ ಪಚನವಾಗುವಂತಹ ಶಿಕ್ಷಣ ಅಗತ್ಯ.
  ಅದರ ಹೊರತಾಗಿ ಶಿಕ್ಷಣ ಹೇರಿದರೆ ಒಳಗೆ ಕೊಳೆತು ಬದುಕನ್ನೇ ಕಸಿಯುತ್ತದೆ. ಮನುಷ್ಯನಿಗೆ ಶಕ್ತಿ, ಉತ್ಸಾಹ, ಧೈರ್ಯ ಕೊಡುವ ಶಿಕ್ಷಣ ಅಗತ್ಯವಿದೆ. ಪ್ರತಿ ವ್ಯಕ್ತಿ ತನಗೆ ಎದುರಾದ ಸಮಸ್ಯೆಯನ್ನು ತಾನು ಬಗೆಹರಿಸಿಕೊಳ್ಳುವಂತಹ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.  
  ಅಭಿಯಾನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿಯಾನದ ಜಿಲ್ಲಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ಭಗವದ್ಗೀತಾ ಅಭಿಯಾನ ನಿರಂತರತೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮತ್ತಷ್ಟು ಜನರನ್ನು ತಲುಪುವ ಉದ್ದೇಶವಿದೆ. ಜಾತಿ ಮತ ಬೇಧವಿಲ್ಲದೇ ಎಲ್ಲರಿಗೂ ಉಪಯೋಗವಾಗವಾಗುವ ಗೀತೆಯನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಂಠಪಾಠ: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗೀತೆಯ 13, 14 ಮತ್ತು 15ನೇ ಅಧ್ಯಾಯ ಕಂಠಪಾಠ ಮಾಡಿಸುವುದು, ಗೀತೆಯಲ್ಲಿ ವ್ಯಕ್ತಿತ್ವ ವಿಕಸನ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಉಪನ್ಯಾಸ ಏರ್ಪಡಿಸುವುದು, ಶಿಕ್ಷಕರಿಗೆ ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಗೀತಾ ಪ್ರಶಿಕ್ಷಣ ಕಾರ್ಯಕ್ರಮವನ್ನು ಶಿವಮೊಗ್ಗ  ಹಾಗೂ ಇತರ ತಾಲೂಕು ಕೇಂದ್ರಗಳಲ್ಲಿ ಏರ್ಪಡಿಸಲಾಗುವುದು ಎಂದು ಕಾಶಿ ಅಭಿಯಾನದ ಮುನ್ನೋಟವನ್ನು ವಿವರಿಸಿದರು.
   ಹವ್ಯಕ ಸಂಘದ ಅಧ್ಯಕ್ಷ ಅಶೋಕ್ ಜಿ.ಭಟ್ ಮಾತನಾಡಿ, ಭೂತ, ಭವಿಷ್ಯ ಹಾಗೂ ವರ್ತಮಾನದಲ್ಲಿ ಅವಿಚ್ಛಿನ್ನವಾಗಿರುವುದೇ ಭಗವದ್ಗೀತೆ. ಅದೇ ರೀತಿ ಭಗವಂತನ ವಾಣಿಯೇ ಭಗವದ್ಗೀತೆ ಎಂದು ಹೇಳಿದರು.
   ಭಗವದ್ಗೀತೆ ಎಂಬುದು ರಸಾಯನಶಾಸ್ತ್ರ, ಭೌತ ಶಾಸ್ತ್ರ, ಸಂಖ್ಯಾಶಾಸ್ತ್ರ. ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು. ಈ ನಿಟ್ಟಿನಲ್ಲಿ ಅಭಿಯಾನ ಚಟುವಟಿಕೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ವಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸಹ ಕಾರ್ಯದರ್ಶಿ ಬಾಲಕೃಷ್ಣ ಹೆಗಡೆ ವಂದಿಸಿದರು.
ಪ್ರಶಿಕ್ಷಣ ಕಾರ್ಯಾಗಾರ: ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಶಿಕ್ಷಣ ಕಾರ್ಯಾಗಾರ ನಡೆಯಿತು. ವಿವಿಧ ಭಜನಾ ಮಂಡಳಿ, ಸಂಘ ಸಂಸ್ಥೆಯ ಪ್ರಮುಖರಿಗೆ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವೇದಾಂತ ಅಧ್ಯಾಪಕ ವಿ. ಶಂಕರಭಟ್ ವಾಲೆಗದ್ದೆ ಮಾರ್ಗದರ್ಶನ ಮಾಡಿದರು. ಅಭಿಯಾನದ ವಿಸ್ತರಣೆ, ಮತ್ತಷ್ಟು ಜನರನ್ನು ತಲುಪುವ ಕುರಿತು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.