ಶಿವಮೊಗ್ಗ

ಏಕಮುಖಿ ಅಭಿವೃದ್ಧಿ ಮಾರಕ

Published On :

ಶಿವಮೊಗ್ಗ: ಆರ್ಥಿಕ ವ್ಯವಸ್ಥೆಯ ಏಕಮುಖೀ ಅಭಿವೃದ್ಧಿಗಾಗಿ ಪುನರ್ ನಿರ್ಮಾಣಗೊಳ್ಳದಂಥ ಸಮೃದ್ಧ ನಿಸರ್ಗ ಮತ್ತು ಅದರ ಜೊತೆಗೆ ಗುರುತಿಸಿಕೊಳ್ಳುವ ಪುನ- ಅದೇ ಬಗೆಯಲ್ಲಿ ಕಟ್ಟಲಾಗದ ಜನಸಂಸ್ಕೃತಿಯನ್ನು ವಿಧ್ವಂಸಗೊಳಿಸುವ ಅಭಿವೃದ್ಧಿ ಹೆಜ್ಜೆಗಳು ಭಾರತದಂಥ ದೇಶವನ್ನು ಕಳಾಹೀನಗೊಳಿಸುತ್ತಿವೆ ಎಂದು ಭೂಮಿಗೀತ ಖ್ಯಾತಿ ಚಲನಚಿತ್ರ ನಿರ್ದೇಶಕ, ಪರಿಸರವಾದಿ ಕೇಸರೀ ಹರವು ಅಭಿಪ್ರಾಯಪಟ್ಟರು.
 ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಸೋಮವಾರ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿನಿಮಾ ಮತ್ತು ಪರಿಸರಸಂಬಂಧಿ ವಿದ್ಯಮಾನಗಳು ಕುರಿತು ಮಾತನಾಡಿದರು.
ಕನಸಾಗಿಯೇ ಉಳಿಯುತ್ತದೆ: ದೇಶ ಎಂದರೆ ಕೇವಲ ರಾಜಕೀಯ ಗಡಿಗಳಿಂದ ಆವೃತವಾದ ಸಂರಚನೆಯಲ್ಲ. ಅದರ ಭೌಗೋಳಿಕ ಗುಣಲಕ್ಷಣಗಳು, ಪ್ರಾಕೃತಿಕ ಸೌಂದರ್ಯ, ಜೀವವೈವಿಧ್ಯ, ಮರಳುಗಾಡು ಇವೆಲ್ಲವೂ ಸೇರಿ ದೇಶಕ್ಕೆ ಹೆಗ್ಗುರುತನ್ನು ಕೊಡುತ್ತವೆ. ಇಂಥ ಶ್ರೀಮಂತ ಹೆಗ್ಗುರುತುಗಳನ್ನು ಕಳೆದುಕೊಂಡು ಬರೀ ಏಕಮುಖೀ ಅಭಿವೃದ್ಧಿಗೆ ಜೋತುಬಿದ್ದರೆ ಸಮಗ್ರ, ಸುಸ್ಥಿರ ಅಭಿವೃದ್ಧಿಯು ಕನಸಾಗಿಯೇ ಉಳಿಯುತ್ತದೆ ಎಂದು ಹೇಳಿದರು.
ಸ್ಥಳೀಯ ಪರಿಸರ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣಕ್ಕೆ ಅನುಗುಣವಾದ ಸುಸ್ಥಿರ ಮಾದರಿಗಳಿಗೆ ತದ್ವಿರುದ್ಧವಾದ ತಾತ್ಪೂರ್ತಿಕ ಅಭಿವೃದ್ಧಿಯ ವಿನಾಶಕಾರಿ ಮಾರ್ಗಗಳನ್ನು ಇಂದಿನ ರಾಜಕೀಯ ಆರ್ಥಿಕ ವ್ಯವಸ್ಥೆಯು ಅನುಸರಿಸುತ್ತಿರುವುದು ವಿಷಾದನೀಯ ಎಂದರು.
ಚುನಾವಣೆಗಳ ಮೂಲಕ ಆಯ್ಕೆಯಾಗುವ ಜನಪ್ರತಿನಿಧಿಗಳು ಮತ್ತೆ ಚುನಾಯಿತರಾಗುತ್ತೇವೋ ಇಲ್ಲವೋ ಎಂಬ ಭಯದಲ್ಲಿ ವಿನಾಶಕಾರಿ ಅಭಿವೃದ್ಧಿ ಮಾದರಿಗಳನ್ನೇ ನೆಚ್ಚಿಕೊಂಡು ಅವುಗಳನ್ನಾಧರಿಸಿದ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಾರೆ. ಈ ಕಾರಣಕ್ಕಾಗಿಯೇ ಇವತ್ತು ಸಮೃದ್ಧ ಕಾಡು ಕ್ರಮೇಣ ನಾಶವಾಗುತ್ತಲೇ ಇದೆ. ಉತ್ಕೃಷ್ಟ ಕಾಡುಗಳು ಈಗ ಉಳಿದಿಲ್ಲ. ಕುವೆಂಪು, ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಲ್ಲಿ ಚಿತ್ರಿತವಾಗಿದ್ದ ಅತ್ಯುತ್ಕೃಷ್ಟ ಕಾಡುಗಳು ಈಗ ಇಲ್ಲ. ಇದಕ್ಕೆ ಈಗಿನ ರಾಜಕೀಯ ಆರ್ಥಿಕ ವ್ಯವಸ್ಥೆಯ ವಿಧ್ವಂಸಕ ಯೋಜನೆಗಳು ಕಾರಣವಾಗಿವೆ ಎಂದು ಅವರು ತಿಳಿಸಿದರು.
ಬೆಳಕಿಗೇ ಬರುವುದಿಲ್ಲ: ಈ ನೆಲದ ನೈಸರ್ಗಿಕ ಸಮೃದ್ಧತೆಯೊಂದಿಗೇ ಬದುಕಿದ ಗ್ರಾಮೀಣ ಭಾಗ ಮತ್ತು ಸಮುದಾಯಗಳ ಮೇಲೆ ಅಭಿವೃದ್ಧಿಯ ಹೆಸರಲ್ಲಿ ನಿರಂತರ ದಾಳಿ ನಡೆದಿದೆ. ಹೀಗಾಗಿ ಇಲ್ಲಿ ಆಗುತ್ತಿರುವ ಕ್ರೌರ್ಯದ ಘಟನೆಗಳು ನಗರವಲಯದ ಜನವರ್ಗಕ್ಕೆ ಮುಖ್ಯವೆನ್ನಿಸುವುದೇ ಇಲ್ಲ. ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವು ದೃಶ್ಯಮಾಧ್ಯಮಗಳಿಂದ ವ್ಯಾಪಕ ಆದ್ಯತೆ ಪಡೆದುಕೊಂಡಿತು. ಆದರೆ, ಈ ದೇಶದ ಬುಡಕಟ್ಟು ಮಹಿಳೆಯರ ಮೇಲೆ ನಿರಂತರವಾಗಿ ಆಗುವ ಅತ್ಯಾಚಾರದ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಸರೀ ಹರವೂ ಅವರ ಅಘನಾಶಿನಿ ಮತ್ತು ಮಕ್ಕಳು, ನಗರ ಮತ್ತು ನದಿಕಣಿವೆ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಪ್ರೊ. ಡಿ.ಎಸ್. ಪೂರ್ಣಾನಂದ್ ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.