ಶಿವಮೊಗ್ಗ

'ಕುಸಿದ ಯಕ್ಷಗಾನ ಗುಣಮಟ್ಟ'

Published On :

ಕ.ಪ್ರ. ವಾರ್ತೆ, ಸಾಗರ, ಡಿ.5
ಅತಿಯಾದ ಪ್ರದರ್ಶನದಿಂದ ಯಕ್ಷಗಾನದ ಗುಣಮಟ್ಟ ಕುಸಿದಿದೆ ಎಂದು ಹಿರಿಯ ಭಾಗವತ, ನಾರಾಣಪ್ಪ ಉಪ್ಪೂರು ಪ್ರಶಸ್ತಿ ಪುರಸ್ಕೃತ ಕೆ.ಜಿ. ರಾಮರಾವ್ ಕೆಳಮನೆ ಹೇಳಿದರು.
ಇಲ್ಲಿನ ಮಹಮ್ಮಾಯಿ ಮಹಿಳಾ ಯಕ್ಷಗಾನ ಮಂಡಳಿ ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಸಂಸ್ಥೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಿಂದೆಲ್ಲ ಬೇಸಿಗೆಯ ಆರು ತಿಂಗಳು ಮಾತ್ರ ಯಕ್ಷಗಾನ ನಡೆಯುತ್ತಿತ್ತು. ಆದರೆ, ಈಗ ಮಳೆಗಾಲದಲ್ಲಿಯೂ ಬಿಡುವಿಲ್ಲದೆ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿವೆ. ಈ ಕಾರಣದಿಂದ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನ ರಂಗಕ್ಕೆ ನಾರಾಣಪ್ಪ ಉಪ್ಪೂರರ ಕೊಡುಗೆ ದೊಡ್ಡದಿದೆ. 70ರ ದಶಕದಲ್ಲಿ ಅವರು ಶ್ರೇಷ್ಠ ಭಾಗವತರಾಗಿ ಮೆರೆದಿದ್ದಾರೆ. ಅವರ ಹೆಸರಿನ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ಇದು ಎಲ್ಲ ಕಲಾ ಪೋಷಕರಿಗೆ, ಅಭಿಮಾನಿಗಳಿಗೆ ಸಲ್ಲುತ್ತದೆ ಎಂದರು.
ಮಹಿಳೆಯರು ತಮ್ಮ ಮನೆ ಕೆಲಸದ ಬಿಡುವಿನ ನಡುವೆ ಯಕ್ಷಗಾನ ಕಲೆಯನ್ನು ಕಲಿತು ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮಹಿಳೆಯರೂ ಈ ರಂಗಕ್ಕೆ ಕಾಲಿಟ್ಟ ಮೇಲೆ ಇದರ ವ್ಯಾಪ್ತಿ ವಿಸ್ತಾರಗೊಂಡಿದೆ.
ಈ ಮಹಿಳಾ ತಂಡ ಈಗಾಗಲೇ ಅನೇಕ ಕಡೆ ಯಕ್ಷಗಾನ ಪ್ರದರ್ಶನ ನೀಡಿ ಜನಮೆಚ್ಚುಗೆ ಪಡೆದಿದ್ದಾರೆ. ಕಲೆಯ ಮೂಲಸ್ವರೂಪಕ್ಕೆ ಭಂಗ ಬಾರದಂತೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು.
ದಾನಿ ಸಿ. ಗೋಪಾಲಕೃಷ್ಣರಾವ್ ಅವರು ಕೆ.ಜಿ. ರಾಮರಾವ್ ಅವರನ್ನು ಅಭಿನಂದಿಸಿ ಮಾತನಾಡಿ, ಹಲವು ಆಯಾಮಗಳಲ್ಲಿ ಮೈದಾಳುವ ಯಕ್ಷಗಾನ ಕಲೆ ಮಕ್ಕಳು ದೊಡ್ಡವರಾದಿಯಾಗಿ ರಂಜಿಸುತ್ತದೆ.
ಇವು ನಮ್ಮ ಪೌರಾಣಿಕ ಮೌಲ್ಯಗಳ ಸಂದೇಶ ಬಿತ್ತರಿಸುತ್ತದೆ. ರಾಮರಾವ್ ಅವರು ಯಕ್ಷಗಾನ ರಂಗದಲ್ಲಿ ಬಹಳಷ್ಟು ದುಡಿದಿದ್ದಾರೆ. ರಂಗದ ಕಥಾ ನಿರೂಪಣೆಯಲ್ಲಿ ಪಳಗಿದ್ದಾರೆ. ಅವರಿಗೆ ಪ್ರಶಸ್ತಿ ಬಂದಿರುವುದು ಅಭಿಮಾನಿಗಳೆಲ್ಲರಿಗೆ ಹರ್ಷ ಉಂಟುಮಾಡಿದೆ ಎಂದರು.
ಮಹಮ್ಮಾಯಿ ಮಹಿಳಾ ಯಕ್ಷಗಾನ ಮಂಡಳಿಯ ಅಧ್ಯಕ್ಷೆ ಸರಸ್ವತಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ, ಮಂಡಳಿಯ ಗೀತಾ ಕೆ., ಅಹಲ್ಯಾ ಶ್ರೀನಿವಾಸ್ ಹಾಜರಿದ್ದರು. ನಂತರ ಮಹಿಳಾ ಮಂಡಳಿಯಿಂದ ಭೀಷ್ಮ ಪ್ರತಿಜ್ಞೆ ಯಕ್ಷಗಾನ ಪ್ರದರ್ಶನಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.