ಶಿವಮೊಗ್ಗ

ಗರಿಗೆದರುತ್ತಿದೆ ರಾಜಕೀಯ

Published On :

ಶಿವಮೊಗ್ಗ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ರಾಜಕೀಯ ಚಟುವಟಿಕೆ ನಿಧಾನವಾಗಿ
ಗರಿಗೆದರಲಾರಂಭಿಸಿದೆ.
ಬಿಜೆಪಿಯಲ್ಲಿ ನಿರಂತರವಾಗಿ ಪೂರ್ವಭಾವಿ ಸಭೆಗಳು ನಡೆಯುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಜೆಡಿಎಸ್ ಮುಖಂಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬಂಗಾರಪ್ಪ ಕುಟುಂಬಕ್ಕೆ ಸೇರಿದವರನ್ನೇ ಅಭ್ಯರ್ಥಿಯಾಗಿಸುವ ಘೋಷಣೆ ಮಾಡಿದ್ದಾರೆ.
ಈ ಮಧ್ಯೆ ಸಾರೆಕೊಪ್ಪ ಬಂಗಾರಪ್ಪ ಅವರ ರಾಜಕೀಯ ನಡೆಯನ್ನೇ ಅನುಕರಿಸಿ ರಾಜಕಾರಣ ಮಾಡುತ್ತಿರುವ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತೆ ಚಲಾವಣೆಗೆ ಬಂದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅವರ ಮೇಲೆ ರಾಷ್ಟ್ರೀಯ ಪಕ್ಷಗಳು ಚಿತ್ತ ಹರಿಸಿದ್ದು, ಅವರನ್ನು ಭೇಟೆಯಾಡಲು ಮುಂದಾಗಿವೆ. ಇನ್ನೊಂದೆಡೆ ತಮ್ಮ ಜೆಡಿಎಸ್ ಸಖ್ಯ ಕಳಚಿಕೊಂಡಿರುವ ಬಗ್ಗೆ ಅವರೇ ಸೂಚ್ಯವಾಗಿ ತಿಳಿಸಿದ್ದಾರೆ.
ಈಡಿಗ ಸಮುದಾಯ ಕೇಂದ್ರಿಕೃತ: ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿಕೊಂಡಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಡಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಒಟ್ಟು ಮತದಾರರ ಪೈಕಿ ಶೇ. 27ರಿಂದ 30ರಷ್ಟು ಈ ಸಮುದಾಯಕ್ಕೆ ಸೇರಿದ ಮತದಾರರೇ ಇರುತ್ತಾರೆ. ಒಂದು ಅಂದಾಜಿನ ಪ್ರಕಾರ 3 ಲಕ್ಷಕ್ಕಿಂತ ಹೆಚ್ಚು ಈಡಿಗ ಸಮುದಾಯದ ಮತಗಳಿವೆ. ಹೀಗಾಗಿ ಈ ಸಮುದಾಯ ಕೇಂದ್ರೀಕರಿಸಿಕೊಂಡೇ ರಾಜಕೀಯ ಚಟುವಟಿಕೆ ನಡೆಯುತ್ತಿದೆ.
ಮೂರು ವಿಧಾನಸಭಾ ಕ್ಷೇತ್ರದ ಚುಕ್ಕಾಣಿ ಹಿಡಿದಿರುವ ಜೆಡಿಎಸ್, ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಗಂಭೀರ ದೃಷ್ಟಿ ಇಟ್ಟು ರಾಜಕೀಯ ದಾಳ ಉರುಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ತಮ್ಮ ಕೋಟೆಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ಆರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಏಕಾಏಕಿ ಚಲಾವಣೆಗೆ ಬಂದವರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಸಾಗರ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ತಮ್ಮದೇ ಪ್ರಭಾವಲಯ ಕಟ್ಟಿಕೊಂಡಿರುವ ಹಾಗೂ ಈಡಿಗ ಸಮುದಾಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬೇಳೂರು ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಮುಂದಾಗಿವೆ. ಎರಡೂ ಪಕ್ಷದ ರಾಜ್ಯಮಟ್ಟದ ನಾಯಕರೇ ಬೇಳೂರು ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಹಿಮ್ಮೆಟ್ಟಿಸಲು ಕಾಂಗ್ರೆಸ್‌ಗೆ ಬೇಳೂರು ಗೋಪಾಲಕೃಷ್ಣ ಬೇಕು. ಅದೇ ರೀತಿ ಬೇಳೂರು ಬಿಜೆಪಿ ಕಡೆ ಒಲಿದರೆ ತಮ್ಮ ಶಕ್ತಿ ಕುಂದಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ವಿಶೇಷ ಗಮನ ನೀಡಿದ್ದಾರೆ.
ನಾಯಕನ ಅವಶ್ಯಕತೆ: ಇನ್ನೊಂದೆಡೆ ಬಿಜೆಪಿಯು ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಈಡಿಗ ಸಮುದಾಯಕ್ಕೆ ಸೇರಿದ ಯಾರೊಬ್ಬರಿಗೂ ಟಿಕೆಟ್ ನೀಡದೆ ಹೊಡೆತ ತಿಂದ ಹಿನ್ನೆಲೆ ಹಾಗೂ ಆ ಸಮುದಾಯಕ್ಕೆ ಸೇರಿದ ಯಾರೊಬ್ಬರಿಗೂ ಮುಂದಾಳತ್ವ ಕೊಡದ ಪರಿಣಾಮ ಆ ಪಕ್ಷಕ್ಕೂ ಒಬ್ಬ ನಾಯಕನ ಅವಶ್ಯಕತೆ ಇದೆ. ಈಡಿಗ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಬಿಎಸ್‌ವೈ ಹಿಂದೆ ಹೋಗಿದ್ದು, ಈಡಿಗ ಸಮುದಾಯದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಅವರ ಬಗ್ಗೆಯೂ ಪಕ್ಷ ಉದಾಸೀನ ತೋರಿಸಿದ್ದರಿಂದ ಹೆಚ್ಚು ನಷ್ಟವನ್ನೇ ಅನುಭವಿಸಿತು. ಈ ಕಾರಣಗಳಿಗಾಗಿಯೇ ಬೇಳೂರು ಗೋಪಾಲಕೃಷ್ಣ ಬಂದರೆ ಅಭ್ಯಂತರವಿಲ್ಲ ಎಂದು ಬಿಜೆಪಿ ನಾಯಕರೇ ಹೇಳಲಾರಂಭಿಸಿದ್ದಾರೆ.
ಬೇಳೂರು ಪಕ್ಷದ ನಾಯಕರ ಸಂಪರ್ಕದಲ್ಲಿರುವುದು ಸತ್ಯ. ಮಾತುಕತೆ ನಡೆದಿದೆ, ಅವರು ಬರಲು ಇಚ್ಛಿಸಿದ್ದಾರೆ. ನಮಗೂ ಆ ಸಮುದಾಯಕ್ಕೆ ಸೇರಿದ ನಾಯಕನ ಅವಶ್ಯಕತೆ ಇತ್ತು ಎಂದು ಬಿಜೆಪಿ ಹಿರಿಯ ನಾಯಕರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಇನ್ನೊಂದೆಡೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿದೆ. ಎಲ್ಲಿಗೆ ಹೋಗಬೇಕೆಂಬ ತೀರ್ಮಾನ ಮಾಡಿಲ್ಲ. ಸಂಕ್ರಾಂತಿ ನಂತರ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ತಮ್ಮೊಂದಿಗೆ ಯಾವೆಲ್ಲಾ ನಾಯಕರು ಮಾತನಾಡಿದ್ದಾರೆ ಎಂಬುದನ್ನು ಈಗಲೇ ತಿಳಿಸುವುದು ಸರಿಯಲ್ಲ. ಮುಂದೆ ತಿಳಿಯಲಿದೆ ಎಂದು ಹೇಳಿದರು. ಒಟ್ಟಾರೆ ನಿಧಾನವಾಗಿ ರಾಜಕೀಯ ಚಟುವಟಿಕೆ ಆರಂಭವಾಗಿದೆ.



-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.