ನಗರೋತ್ಥಾನ; 100 ಕೋಟಿ ಮೀಸಲು
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.10
ನಗರ ಪಾಲಿಕೆಯಾಗುವ ಹೊಸ್ತಿಲಲ್ಲಿರುವ ಶಿವಮೊಗ್ಗ ನಗರಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿ 100 ಸಿಸಿ ಕ್ಯಾಮರಾ ಅಳವಡಿಸುವ ಯೋಜನೆ ಸಿದ್ಧವಾಗಿದೆ. ಸಂಚಾರ ವ್ಯವಸ್ಥೆ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಶಂಕರಮಠ ವೃತ್ತ, ಎಂಆರ್ಎಸ್ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ನಿರ್ಧರಿಸಲಾಗಿದೆ. ವಿವಿಧ ರಸ್ತೆಗಳ ಅಭಿವೃದ್ಧಿಯನ್ನೂ ಕೈಗೊಳ್ಳಲಾಗುವುದು.
ಈ ಬಾರಿಯ ರಾಜ್ಯ ಬಜೆಟ್ನಲ್ಲಿ ನಗರಾಭಿವೃದ್ಧಿಗೆ ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ನಗರೋತ್ಥಾನ 2ನೇ ಹಂತದ ಕಾಮಗಾರಿಗೆ 100 ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಸಂಬಂಧ ಕ್ರಿಯಾಯೋಜನೆಗೆ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ನಗರಾಭಿವೃದ್ಧಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರ ಅಧ್ಯಕ್ಷತೆಯ ಸಭೆಯಲ್ಲಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್ ಹಾಗೂ ಶಾರದಾ ಪೂರ್ಯಾನಾಯ್ಕ್ ಸೂಚಿಸಿದ ಬದಲಾವಣೆಯೊಂದಿಗೆ ಒಪ್ಪಿಗೆ ಸೂಚಿಸಲಾಯಿತು. ಈ ಕ್ರಿಯಾಯೋಜನೆ ಬೆಂಗಳೂರಿನಲ್ಲಿ ಶುಕ್ರವಾರ ನಡೆಯಲಿರುವ ರಾಜ್ಯ ನಗರಾಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚೆಗೆ ಬರಲಿದೆ. ಅಲ್ಲಿ ಒಪ್ಪಿಗೆ ಸಿಕ್ಕ ನಂತರ ಅನುಷ್ಠಾನವಾಗಲಿದೆ.
ಟ್ರಾಫಿಕ್ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಜಿಲ್ಲೆಯ ಇತರೆ ಪಟ್ಟಣಗಳಲ್ಲಿಯೂ ಸಹ ಸಿಸಿ ಕ್ಯಾಮರಾ ಅಳವಡಿಸುವ ಅವಶ್ಯಕತೆ ಇದೆ ಎಂದು ಎಸ್ಪಿ ಕೌಶಲೇಂದ್ರಕುಮಾರ್ ಹೇಳಿದಾಗ, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ತಮ್ಮ ಅನುದಾನದಲ್ಲಿಯೇ ನೀಡುವುದಾಗಿ ಸಭೆಯಲ್ಲಿದ್ದ ಶಾಸಕ ಅಪ್ಪಾಜಿಗೌಡ, ಸಚಿವ ಕಿಮ್ಮನೆ ರತ್ನಾಕರ್ ಒಪ್ಪಿಗೆ ನೀಡಿದರು.
ಅಸಮಾಧಾನ: ಈ ಸಂದರ್ಭ ಶಾರದಾ ಪೂರ್ಯಾನಾಯ್ಕ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ 3 ವಾರ್ಡ್ಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸುವಾಗ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಬೆಳಿಗ್ಗೆ ಸೂಳೆಬೈಲು ಪ್ರದೇಶಕ್ಕೆ ಭೇಟಿ ನೀಡಲು ತಮ್ಮದೊಂದಿಗೆ ಆಗಮಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸೂಳೆಬೈಲು ಪ್ರದೇಶ ಹಿಂದುಳಿದಿದೆ. ಇದುವರೆಗೆ ಇಲ್ಲಿ ಅಭಿವೃದ್ಧಿ ಕಾಮಗಾರಿಗಳೇ ನಡೆದಿಲ್ಲ. ಈಗ ರಸ್ತೆ ಮಾಡುವ ಹಂತದಲ್ಲಿ ಈ ಪ್ರದೇಶವಿದೆ. ಇನ್ನು ಒಳಚರಂಡಿ ಕಾಮಗಾರಿ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹರೀಶ್, ಪಿಡಿ ರಾಜಪ್ಪ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

