ಶಿವಮೊಗ್ಗ

ಮಜಾ ತಾಣವಾದ ಅಶ್ವಿನಿ ವನ

Published On :

ಕ.ಪ್ರ.ವಾರ್ತೆ   ಶಿವಮೊಗ್ಗ    ಡಿ.10
ರಾಜ್ಯದ, ಹೊರರಾಜ್ಯದ ಸಾವಿರಾರು ಸಸ್ಯಶಾಸ್ತ್ರ ವಿದ್ಯಾರ್ಥಿಗಳು-ಸಂಶೋಧಕರ ಖಜಾನೆಯಾಗಿದ್ದ ಯೋಜನೆಯೊಂದು ಆಡಳಿತ ನಡೆಸುವವರ ನಿರ್ಲಕ್ಷ್ಯಕ್ಕೆ ಸಿಲುಕಿ ವಿನಾಶದತ್ತ ಸಾಗಿದೆ. ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದ ಎದುರಿನಲ್ಲಿಯೇ ಇರುವ ಅಶ್ವಿನಿ ವನ ಇವತ್ತು ಸತ್ತ ಸಸಿಗಳ ಗುಡ್ಡೆಯಾಗಿದೆ.
ಐದಾರು ಕೋಟಿ ಖರ್ಚು ಮಾಡಿ ರೂಪುಗೊಂಡಿದ್ದ ಅಶ್ವಿನಿ ವನ ಇವತ್ತು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಡೀ ವನದಲ್ಲಿ ಮದ್ಯದ ಬಾಟಲಿಗಳು, ಊಟ ಮಾಡಿ ಎಸೆದ ತಟ್ಟೆಗಳು, ಪ್ಲಾಸ್ಟಿಕ್ ಕವರ್‌ಗಳು ಕಾಣುತ್ತಿವೆ. ಪಾರ್ಥೇನಿಯಂ ಸೇರಿದಂತೆ ಹಲವು ಕಳೆ ಸಸ್ಯಗಳು ವನವನ್ನು ಆವರಿಸಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಅಶ್ವಿನಿ ವನದ ಪುನಶ್ಚೇತನಕ್ಕೆ ಸಮಯವೇ ಸಿಗುತ್ತಿಲ್ಲ.
ಪಕ್ಕದಲ್ಲಿಯೇ ಇರುವ ಜಂಗಲ್ ಕ್ಯಾಂಪ್‌ಗೆ ಪ್ರತಿದಿನ ಹತ್ತಾರು ವಿಐಪಿಗಳು ಬರುತ್ತಾರೆ. ಜಂಗಲ್ ಟ್ರೇಲ್ ಪ್ಯಾಕೇಜಿನಲ್ಲಿ ಔಷಧ ಸಸ್ಯಗಳ ವೀಕ್ಷಣೆ ಎಂಬ ಅಂಶವೂ ಇದೆ. ಆದರೆ ವನ ಹಾಳಾಗಿರುವುದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಸುವರ್ಣ ಯುಗ: ಸುಮಾರು 30 ಎಕರೆ ಪ್ರದೇಶದ ಈ ಅಶ್ವಿನಿ ವನ ಯೋಜನೆ ಆರಂಭವಾಗಿದ್ದು, 1995ರ ಅಕ್ಟೋಬರ್‌ನಲ್ಲಿ. 1997ರಲ್ಲಿ ಉದ್ಘಾಟನೆಯಾಯಿತು. ಅಂದಿನ ಡಿಎಫ್‌ಓ ಶ್ರೀಕಂಠಯ್ಯರ ಮುತುವರ್ಜಿ ವಹಿಸಿ ಈ ವನ ಅಭಿವೃದ್ಧಿಪಡಿಸಿದರು. ಸಸ್ಯಶಾಸ್ತ್ರದ ತಜ್ಞ ಅಧಿಕಾರಿಗಳು, ಸಂಶೋಧಕರ ನೆರವಿನಿಂದ ಎಲ್ಲರ ಆಕರ್ಷಣೆ ಕೇಂದ್ರವಾಯಿತು.
ಆಯುರ್ವೇದ, ಮೃಗಾಯುರ್ವೇದದದ ಬಹುತೇಕ ಎಲ್ಲ ಸಸ್ಯಗಳು ಇಲ್ಲಿದ್ದವು. ಮನೆಯ ಮುಂದೆ ಹಾಗೂ ಸುತ್ತಮುತ್ತ ಬೆಳೆಸಬಹುದಾದ ಸಸ್ಯಗಳಿರುವ ಗೃಹವನ, ಸಂದೇಶ ವನ, ತಾವರೆ ಕೊಳ, ರಾಶಿ ಮತ್ತು ನಕ್ಷತ್ರ ವನ, ಸಪ್ತಋಷಿ ವನ, ನಂದನವನ, ವನಗ್ರಹ ವನ, ಶಿವಪಂಚಾಯತ್ ವನ, ಪಾಲಕರ ವನ, ಮಾನವನ ದೇಹದ ಯಾವ ಭಾಗಕ್ಕೆ ಕಾಯಿಲೆ ಬಂದರೆ ಯಾವ ಮೂಲಿಕೆ ಔಷಧಿಯಾಗುತ್ತದೆ ಎಂದು ತಿಳಿಸುವ ಬೃಹತ್ ಮಾನವಾಕಾರದಲ್ಲಿ ಬೆಳೆಸಿದ ಸಸಿಗಳ ಗುಂಪು, ಸುಗಂಧ ಸಸ್ಯಗಳು, ಔಷಧಿಯುಕ್ತ ಗಿಡಮೂಲಿಕೆಗಳು, ವಿಷವೃಕ್ಷಗಳು.... ಹೀಗೆ 22ಕ್ಕೂ ಹೆಚ್ಚು ವಿಭಾಗದಲ್ಲಿ ಈ ಸಸ್ಯಕ್ಷೇತ್ರ ಅಭಿವೃದ್ಧಿ ಹೊಂದಿತ್ತು. ರಾಜ್ಯದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೊರರಾಜ್ಯದವರೂ ಸಹ ಈ ಅಶ್ವಿನಿ ವನ ವೀಕ್ಷಣೆಗೆ ಆಗಮಿಸುತ್ತಿದ್ದರು.
ಇಂದಿನ ಪರಿಸ್ಥಿತಿ ಏನು? ಇವತ್ತು ಇಲ್ಲಿ ಮರಗಳು ಉಳಿದಿವೆಯೇ ಹೊರತು ಸಸ್ಯರಾಶಿ ನಿರ್ವಹಣೆ ಇಲ್ಲದೇ ನಾಶವಾಗಿದೆ. ಅಲ್ಲಿದ್ದ ಧ್ಯಾನಕೇಂದ್ರ ಪಿರಮಿಡ್ ಸಂಪೂರ್ಣ ಹಾಳಾಗಿದೆ. ಪಗೋಡ ಕುಸಿಯುತ್ತಿದೆ. ಕಾಲುದಾರಿಗಳು ಮುಚ್ಚಿಹೋಗುತ್ತಿವೆ. ನೀರು ಹಾಯಿಸಲು ಬೇಕಾಗಿದ್ದ ಪೈಪ್‌ಲೈನ್, 80ಕ್ಕೂ ಹೆಚ್ಚು ನೀರು ಸಿಂಪಡಿಸುವ ಸಿಲ್ವರ್ ಜೆಟ್‌ಗಳು ಕಳುವಾಗಿವೆ. ಕಾವಲುಗಾರರ ಮನೆ ಬಾಗಿಲು ಮುರಿದು ಕಳವು ಮಾಡುವ ಪ್ರಯತ್ನಗಳು ನಡೆದಿವೆ. ಅಧೋಗತಿ ಶುರುವಾಗಿದ್ದು ಕಳೆದ 8 ವರ್ಷಗಳಿಂದ. ಈ ಅವಧಿಯಲ್ಲಿ ಕೆಲಸ ಮಾಡಿದ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಜವಾಬ್ದಾರರು.
ಕಾರಣವೇನು? ಅಶ್ವಿನಿ ವನ ಶುರುವಾದ ಕೆಲವರ್ಷ ಇಲ್ಲಿ 8-10 ಸಿಬ್ಬಂದಿ ನಿರ್ವಹಣೆಗೆಂದು ನಿಯೋಜಿತರಾಗಿದ್ದರು. 8 ವರ್ಷದಿಂದ ಯಲ್ಲಪ್ಪ ಎಂಬ ದಿನಗೂಲಿಯೊಬ್ಬರನ್ನು ಹೊರತುಪಡಿಸಿ ಯಾರೂ ಇಲ್ಲ. ಇದರ ಜತೆಗೆ ವಿದ್ಯುತ್ ಶುಲ್ಕ ಕಟ್ಟದ ಕಾರಣ ನೀರು ಸರಬರಾಜಿಗೆಂದು ಹತ್ತಿರದ ತುಂಗಾನದಿಯಿಂದ ನೀರೆತ್ತಲು ಸ್ಥಾಪಿಸಿರುವ ಮೋಟಾರ್ ಸ್ಥಗಿತವಾಗಿದೆ. ಈ ನಡುವೆ ಇಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಪ್ರತಿಯೊಂದು ಮೂಲಿಕೆಯ ಪರಿಚಯವಿರುವ ಯಲ್ಲಪ್ಪನನ್ನು ಐದಾರು ತಿಂಗಳು ಬೇರೆ ಕರ್ತವ್ಯಕ್ಕೆ ಇಲಾಖೆ ಕಳುಹಿಸಿತ್ತು. ಈ ಅವಧಿಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಅಶ್ವಿನಿ ವನ ಅಧೋಗತಿ ಕಂಡಿತು.
ಅಶ್ವಿನಿ ವನ ರೂಪಿಸಲು ಶ್ರಮಪಟ್ಟಿದ್ದ ಸಸ್ಯಪ್ರೇಮಿ ವೆಂಕಟಗಿರಿ ಅವರು ಅಶ್ವಿನಿ ವನದ ಸ್ಥಿತಿಗೆ ವಿಷಾದ ವ್ಯಕ್ತಪಡಿಸಿದ ಅವರು, ಹೀಗೇ ಬಿಟ್ಟರೆ ಮುಂದಿನ ಪೀಳಿಗೆಗೆ ನಾವು ಮೋಸ ಮಾಡಿದಂತೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎನ್ನುತ್ತಾರೆ.
ಗಂಧ ಕಳವು
ಇಲಾಖೆಗೇ
ಗೊತ್ತಿಲ್ಲ
ಅಶ್ವಿನಿ ವನದಲ್ಲಿದ್ದ 50ಕ್ಕೂ ಹೆಚ್ಚು ಗಂಧದ ಮರಗಳು ಕಳುವಾಗಿವೆ. ಕೆಲವು ಮರಗಳನ್ನು ಬುಡದಲ್ಲಿಯೇ ಕತ್ತರಿಸಿ ಉರುಳಿಸಿದ್ದರೆ, ಇನ್ನೂ ಕೆಲವು ಮರಗಳನ್ನು ಬೇರುಸಮೇತ ಹೊತ್ತೊಯ್ದಿದ್ದಾರೆ. ಹಲವು ತಿಂಗಳುಗಳಿಂದ ಈ ಕಾರ್ಯಾಚರಣೆ ನಡೆದಿರುವುದು ಅಶ್ವಿನಿ ವನ ಸುತ್ತಾಡಿದಾಗ ಗಮನಕ್ಕೆ ಬರುತ್ತದೆ.
ಕಳೆದ ಐದಾರು ತಿಂಗಳು ಇಲ್ಲಿ ಅರಣ್ಯ ಇಲಾಖೆಯ ಕಾವಲುಗಾರರೇ ಇರಲಿಲ್ಲ. ಪಕ್ಕದಲ್ಲೇ ಇರುವ ಜಂಗಲ್ ಕ್ಯಾಂಪ್‌ನ ಅಧಿಕಾರಿಗಳೂ ಸಹ ಇದನ್ನು ಗಮನಿಸಿಲ್ಲ.
ಈ ಬಗ್ಗೆ ಡಿಎಫ್‌ಓ ಮಲ್ಲಿಕಾರ್ಜುನ್ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಅಲ್ಲಿ ಗಂಧದ ಮರಗಳನ್ನೇ ಹಾಕಿಲ್ಲ. ಹಾಗಾಗಿ ಕಳುವಾಗುವ ಸಾಧ್ಯತೆಯೇ ಇಲ್ಲ ಎಂದರು.
ಆದರೆ ಗಂಧದ ಮರಗಳನ್ನು ಬುಡಸಮೇತ ಕತ್ತರಿಸಿರುವ ಸಾಕ್ಷಿಗಳು ಇವರ ಹೇಳಿಕೆಯನ್ನು ಅಲ್ಲಗಳೆಯುತ್ತಿವೆ.

 ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.