ಅಮ್ಮನಘಟ್ಟಕ್ಕೆ ಕಾಯಕಲ್ಪ
ಹೊಸನಗರ: ಸಹಸ್ರಾರು ಭಕ್ತರ ಆರಾಧ್ಯ ತಾಣ ಮಾತ್ರವಲ್ಲ ಸಸ್ಯಕಾಶಿ, ಜೀವವೈವಿಧ್ಯತೆಯ ನೆಲವೀಡು ಜೇನುಕಲ್ಲಮ್ಮನ ಬೆಟ್ಟಕ್ಕೆ ಯಾವುದೆ ಕುತ್ತು ಬಾರದಂತೆ, ಅಭಿವೃದ್ಧಿಯಾಗಬೇಕಿದೆ. ನವರಾತ್ರಿ ಮತ್ತು ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಭಕ್ತರು, ಪ್ರವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕಾಗಿರುವುದು ತುರ್ತು ಅಗತ್ಯ.
ಪ್ರಾಕೃತಿಕ ಶ್ರೀಮಂತಿಕೆಯನ್ನು ಸಾದರ ಪಡಿಸುವ ಈ ಸುಂದರ ತಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸೇರಿದಂತೆ ಅಕ್ರಮ ಮರ ಕಡಿತಲೆ, ಅನೈತಿಕ ಚಟುವಟಿಕೆಯ ಆಶ್ರಯ ತಾಣವಾಗಿದೆ ಎಂಬ ಕೂಗು ಇಂದಿಗು ಕೇಳಿ ಬರುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕಾಗಿರುವುದು ಅನಿವಾರ್ಯವಾಗಿದೆ.
ಅಭಿವೃದ್ಧಿ ಬೇಕು: ಬಂಡೆಗಳನ್ನೆ ಆಲಯ ಮಾಡಿಕೊಂಡ ಜೇನುಕಲ್ಲಮ್ಮ ದೇವಿಯ ಘಟ್ಟದಲ್ಲಿ ಐತಿಹಾಸಿಕ, ಪ್ರಾಕೃತಿಕ, ಧಾರ್ಮಿಕ ಶ್ರೀಮಂತಿಕೆಗೆ ಕೊರತೆಯಿಲ್ಲ. ಆದರೆ ಅಭಿವೃದ್ಧಿಯ ಬಡತನ ಮಾತ್ರ ನಿರಾಶೆ ಗೊಳಿಸುತ್ತಿದೆ. ಸಮಿತಿಯಲ್ಲಿನ ಗುಂಪುಗಾರಿಕೆಯಿಂದಾಗಿ ಘಟ್ಟದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹದಗೆಟ್ಟ ರಸ್ತೆ, ಶೌಚಾಲಯ ಕೊರತೆ, ವಸತಿಗೃಹ ಇಲ್ಲದಿರುವುದರಿಂದ ಘಟ್ಟಕ್ಕೆ ಬರುವ ಭಕ್ತಾಧಿಗಳನ್ನು ಬಸವಳಿಯುವಂತೆ ಮಾಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲ ಹೊರರಾಜ್ಯದಲ್ಲು ಕೂಡ ಘಟ್ಟಕ್ಕೆ ನಡೆದುಕೊಳ್ಳುವ ಭಕ್ತರಿದ್ದು ಘಟ್ಟದ ಅಭಿವೃದ್ಧಿಯ ನಿರೀಕ್ಷೆ ಹೊತ್ತಿದ್ದಾರೆ.
ಈ ನಡುವೆ ಅಮನಘಟ್ಟದ ನೂತನ ವ್ವವಸ್ಥಾಪನ ಸಮತಿ ರಚನೆಗೊಂಡಿದ್ದು ಅಭಿವೃದ್ಧಿ ನಿರೀಕ್ಷೆ ಹೊತ್ತು ತಂದಿದೆ. ಅಲ್ಲದೆ ಇಲ್ಲಿರುವ ಅನೇಕ ಸವಾಲನ್ನು ಸ್ವೀಕರಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಸವಾಲು ಸಮತಿ ಮೇಲಿದೆ. ವ್ಯವಸ್ಥಾಪನ ಸಮಿತಿ ನೂತನ ಅಧ್ಯಕ್ಷರಾಗಿ ಜಿಪಂ ವಿರೋಧ ಪಕ್ಷದ ನಾಯ ಕಲಗೋಡು ರತ್ನಾಕರ ಆಯ್ಕೆಗೊಂಡಿದ್ದು ಸಹಜವಾಗಿಯೆ ನಿರೀಕ್ಷೆ ಹುಟ್ಟು ಹಾಕಿದೆ.
ಸಮಿತಿ ಸಂಕಲ್ಪ: ಜೇನು ಕಲ್ಲಮ್ಮನ ಸನ್ನಿಧಿ ಅಮ್ಮನಘಟ್ಟದಲ್ಲಿ ಕಲಗೋಡು ರತ್ನಾಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಘಟ್ಟದ ಅಭಿವೃದ್ಧಿ ಮುನ್ನೋಟದತ್ತ ಗಮನ ಹರಿಸಲಾಗಿದ್ದು ಇಂತಿದೆ.
ಶಾಸಕ ಬೇಳೂರು ಗೋಪಾಲಕೃಷ್ಣ ಎಂಎಡಿಬಿಯಿಂದ ಕೊಡಿಸಿದ 10 ಲಕ್ಷ, ಶಾಸಕ ಕಿಮ್ಮನೆ ರತ್ನಾಕರರ್ನೀಡಿದ ರು. 4 ಲಕ್ಷ, ಕುಮಾರಸ್ವಾಮಿ ನೀಡಿದ 4ಲಕ್ಷ ಮತ್ತು ಕಾಣಿಕೆ ಹುಂಡಿಯಿಂದ ಬಂದ 10 ಲಕ್ಷ ಸೇರಿ ಒಟ್ಟು ರು. 28 ಲಕ್ಷವಿದ್ದು, ಮೂಲ ಭೂತ ಸೌಕರ್ಯಗಳತ್ತ ಗಮನ ಹರಿಸುವುದು.
ಘಟ್ಟಕ್ಕೆ ಸಾಗುವ ಹಾದಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಅಭಿವೃದ್ದಿಗೆ ತುರ್ತು ಗಮನ ಹರಿಸುವುದು.
ವಸತಿಗೃಹ ನಿರ್ಮಾಣ: ರಾಜ್ಯದ ಮೂಲೆಮೂಲೆಯಿಂದ ಜನರು ಬರುತ್ತಿರುವುದರಿಂದ ಸರ್ಕಾರದ ಗಮನಸೆಳೆದು ವಸತಿಗೃಹ ನಿರ್ಮಾಣಕ್ಕೆ ಆಗ್ರಹಿಸುವುದು. ಇಲ್ಲಿನ ಪ್ರಾಕೃತಿಕ ಸಂಪತ್ತಿಗೆ ಹಾನಿಯಾಗದಂತೆ, ಪಾವಿತ್ರತೆ ಹಾಳಾಗದಂತೆ ಅಭಿವೃದ್ಧಿ ಮಾಡುವುದು. ಅನೈತಿಕ, ಅಕ್ರಮ ಚಟುವಟಿಕೆ ಕಡಿವಾಣಕ್ಕೆ ನಿರ್ದಾಕ್ಷಿಣ್ಯ ಕ್ರಮ. ಮಾಜಿ ಶಾಸಕರು ಮತ್ತು ಹಿಂದಿನ ಸಮತಿ ಸದಸ್ಯರ ವಿಶ್ವಾಸ ತೆಗೆದುಕೊಂಡು ಎಲ್ಲರು ಒಂದಾಗಿ ಅಭಿವೃದ್ಧಿಯತ್ತ ಮುನ್ನಡೆಯುವುದು.
ಸಮತಿ ಸದಸ್ಯರಾದ ತಾರಕೇಶ್ವರ್, ಚಿದಂಬರ್, ರಾಜಪ್ಪ, ಕೆ.ಎಲ್.ಸುಧೀರ್, ಪುಷ್ಪಾವತಿ ಮಂಜಪ್ಪ, ರತ್ನಮ್ಮ, ಗುರುರಾಜ ಮತ್ತು ಪ್ರಧಾನ ಅರ್ಚಕರು ಉಪಸ್ಥಿತರಿದ್ದು ಅಭಿವೃದ್ಧಿಯ ಸಂಕಲ್ಪಕ್ಕೆ ಧ್ವನಿ ಗೂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

