ಶಿವಮೊಗ್ಗ

ಮಿತಿ ಮೀರಿದ ಪುಂಡರ ಹಾವಳಿ

Published On :

ಶಿವಮೊಗ್ಗ: ನಗರದ ಲಕ್ಷ್ಮಿ ಚಿತ್ರಮಂದಿರದ ಹಿಂಭಾಗದ ಪ್ರದೇಶ, ಗಾಂಧಿ ನಗರ ವ್ಯಾಪ್ತಿಯಲ್ಲಿ ಪುಂಡ ಪೋಕರಿಗಳ ಹಾವಳಿ ಮಿತಿ ಮೀರಿದ್ದು, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ರಾತ್ರಿ 10 ದಾಟಿತೆಂದರೆ ಇಲ್ಲಿ ಪುಂಡರ ಹಾವಳಿ ಆರಂಭವಾಗುತ್ತದೆ. ರಸ್ತೆಯಲ್ಲಿ ಬರುವ ಪ್ರಯಾಣಿಕರ ಮೇಲೆ ಬೇಕೆಂತಲೇ ಬಿದ್ದು ಅವರ ಜೇಬನ್ನೂ ಖಾಲಿ ಮಾಡಿ ಕಳುಹಿಸಿದ್ದಾರೆ. ಪ್ರತಿರೋಧ ತೋರಿದರೆ ಪೆಟ್ಟು ಖಚಿತ, ಪರಿಸ್ಥಿತಿ ಹೀಗಿರುವಾಗ ರಸ್ತೆ ಸಂಚಾರಿಗಳು ಅನಿವಾರ್ಯವಾಗಿ ಈ ಪುಂಡರಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ 10ರ ನಂತರ ಅಲ್ಲಿ ಜನ ಸಂಚಾರ ವಿರಳವಾಗುತ್ತದೆ. ಇಂತಹ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ಒಬ್ಬಂಟಿಗಳ ಮೇಲೆ ದಾಳಿ ನಿರಂತರವಾಗುತ್ತಿದೆ. ಸಾರ್ವಜನಿಕರ ಮಾಹಿತಿಯಂತೆ ಕನ್ನಡಪ್ರಭ ಮಾಹಿತಿ ಕಲೆ ಹಾಕಿದ್ದು, ಕಳೆ ಹತ್ತು ದಿನಗಳಿಂದೀಚೆಗೆ ನಾಲ್ಕಕ್ಕೂ ಹೆಚ್ಚು ಪ್ರಕರಣ ನಡೆದಿದೆ.
ಘಟನೆ-1
ಎಕ್ಸಿಕ್ಯುಟಿವ್ ವೃತ್ತಿ ಮಾಡುವ ರಮೇಶ್ (ಹೆಸರು ಬದಲಿಸಲಾಗಿದೆ) ಎಂದಿನಂತೆ ಹೊರ ಊರಿನಲ್ಲಿ ಕೆಲಸ ನಿರ್ವಹಿಸಿ ರಾತ್ರಿ ಇದೇ ರಾತ್ರಿಯಲ್ಲಿ ಸಂಚರಿಸುತ್ತಾರೆ. ಕಳೆದ ಶನಿವಾರ ಇವರು ಇದೇ ದಾರಿಯಲ್ಲಿ ವಾಹನದಲ್ಲಿ ಬರುತ್ತಿದ್ದಾಗ ಗುಂಪೊಂದು ಇವರ ವಾಹನಕ್ಕೆ ಅಡ್ಡ ಬಂದಿತು. ಅವರು ಹಾಗೂ ಹೀಗೂ ಅವರನ್ನು ತಪ್ಪಿಸಿಕೊಂಡು ಹೊರಡಲು ಯತ್ನಿಸಿದಾಗ, ವಾಹನ ತಂದು ಡಿಕ್ಕಿ ಹೊಡೆಸುತ್ತಿಯಾ ಎಂದು ಆ ವ್ಯಕ್ತಿಯನ್ನು ಗದರಿಸಿದೆ. ಅಲ್ಲದೇ ದುಡ್ಡು ಕೊಡದೇ ಹೋದರೆ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಸಿದೆ.
ಪ್ರತಿ ದಿನ ಕೆಲಸದ ಒತ್ತಡದ ನಡುವೆ ಪೊಲೀಸ್ ಠಾಣೆಗೆ ಅಲೆಯುವುದು ಏಕೆಂದು ಅನಿವಾರ್ಯವಾಗಿ ಆ ವ್ಯಕ್ತಿ ಜೇಬಿನಲ್ಲಿದ್ದ 500ಕ್ಕೂ ಹೆಚ್ಚು ಮೊತ್ತವನ್ನು ಆ ಪುಂಡರಿಗೆ ಕಕ್ಕಿಬಂದಿದ್ದಾಯಿತು.
ಘಟನೆ-2
ರೈಲ್ವೆ ನಿಲ್ದಾಣಕ್ಕೆ ಹೋಗಿ ಇದೇ ರಸ್ತೆಯಲ್ಲಿ ಬರುತ್ತಿದ್ದ ವಿನೋಬ ನಗರ ವಾಸಿಯೊಬ್ಬರ ಮೇಲೂ ಇದೇ ರೀತಿ ದಾಳಿ ನಡೆದಿದೆ. ಏಕಾಏಕಿ ಅಡ್ಡ ಬಂದ ತಂಡ ಅವರನ್ನು ಬೆದರಿಸಿದೆ. ತಂಡದ ಸದಸ್ಯರೆಲ್ಲಾ ಪಾನಮತ್ತರಾಗಿದ್ದರು. ಅವರೆಲ್ಲಾ ಸೇರಿ ಹಣಕೀಳಲು ಹೋದಾಗ ಪ್ರತಿರೋಧ ತೋರಿದ ವಾಹನ ಸವಾರನ ಮೇಲೆ ಹಲ್ಲೆಯನ್ನೂ ನಡೆಸಲಾಗಿದೆ. ಕೈಯಲ್ಲಿದ್ದ ಉಂಗುರವನ್ನೂ ಕಸಿದು ಮನೆಗೆ ಕಳುಹಿಸಿದ ಪ್ರಸಂಗ ನಡೆಯಿತು ಎಂದು ಪ್ರತ್ಯಕ್ಷದರ್ಶಿ ಹಾಗೂ ಸ್ಥಳೀಯ ನಿವಾಸಿ 'ಕನ್ನಡಪ್ರಭ'ಕ್ಕೆ ವಿವರಿಸಿದರು.
ಘಟನೆ-3
ನಿರ್ಮಲ ನರ್ಸಿಂಗ್ ಹೋಂ ವ್ಯಾಪ್ತಿಯಲ್ಲಿ ಪುಂಡರ ತಂಡವೊಂದು ರಸ್ತೆಯಲ್ಲಿ ಸಂಚರಿಸುವವರನ್ನು ಕೆಣಕುವುದು, ಮಹಿಳೆಯರಿಗೆ ಚುಡಾಯಿಸುವ ಕಾರ್ಯ ಮಾಡುತ್ತಿರುತ್ತದೆ. ಕಳೆದ ಮಂಗಳವಾರ ಮಹಿಳೆಯೊಬ್ಬರ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪುಂಡರ ತಂಡ ತೀರಾ ಆವಾಚ್ಯ ಶಬ್ದಗಳಿಂದ ಬಹಿರಂಗವಾಗಿ ನಿಂದಿಸಲು ಪ್ರಾರಂಭಿಸಿತು. ಹೀಗಾಗಿ ಅನಿವಾರ್ಯವಾಗಿ ಆ ಮಹಿಳೆಯ ಅಲ್ಲಿಂದ ಕಾಲ್ಕೀಳಬೇಕಾಗಿಬಂತು.
ರಕ್ಷಣೆ ಕೊಡಿ: ಇದು ಮೂರು ಘಟನೆಗಳು ಉದಾಹರಣೆಯಷ್ಟೇ. ಇತ್ತೀಚಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ಅಲ್ಲಲ್ಲಿ ಮರುಕಳಿಸುತ್ತಲೇ ಇದೆ. ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳೇ ಹೇಳುವ ಪ್ರಕಾರ, ಪೊಲೀಸರ ಮೊರೆ ಹೋಗೋಣ ಎಂದರೆ ಸಮಸ್ಯೆಯೇ ಹೆಚ್ಚು. ದೂರು ನೀಡಿದರೆ ಮತ್ತೊಂದಿಷ್ಟು ಅಲೆದಾಡಿಸುತ್ತಾರೆ. ಹೀಗಾಗಿ ಓಡಾಡುವ ದಾರಿಯನ್ನೇ ಬದಲಿಸಬೇಕಾಗಿ ಬಂದಿದೆ ಎಂದು ತಿಳಿಸಿದರು.
ಸ್ಥಳೀಯರನ್ನು ಕನ್ನಡಪ್ರಭ ಮಾತನಾಡಿಸಿದಾಗ ಇನ್ನಷ್ಟು ಮಾಹಿತಿ ಹೊರಬಿತ್ತು. ಸರ ಅಪಹರಣವೂ ಈ ಭಾಗದಲ್ಲಿ ಸಾಕಷ್ಟು ನಡೆದಿಯಂತೆ. ವೈಯಕ್ತಿಕ ಅನೇಕರು ದೂರು ಕೊಡಲು ಮುಂದೆ ಬರುತ್ತಿಲ್ಲ. ಅದೇ ರೀತಿ ಸರ ಅಪಹರಣ ವಿಫಲ ಪ್ರಯತ್ನಗಳೂ ನದೆಯುತ್ತಿವೆ. ರಕ್ಷಣಾ ಇಲಾಖೆಯವರು ಮಾತ್ರ ತಣ್ಣಗೆ ಕುಳಿತಿದ್ದಾರೆ ಎಂದು ಆಪಾದಿಸುತ್ತಾರೆ. ಪೊಲೀಸರನ್ನು ಈ ಬಗ್ಗೆ ಪ್ರಶ್ನಿಸಿದರೆ, ಸಿಬ್ಬಂದಿ ಕೊರತೆಯ ವಿಷಯ ಪ್ರಸ್ತಾಪಿಸುತ್ತಾರೆ.
ಒಟ್ಟಾರೆ ಶಿವಮೊಗ್ಗದ ಎಲೈಟ್ ಏರಿಯಾದಲ್ಲಿ ಒಂದಾದ ಗಾಂಧಿನಗರ, ಲಕ್ಷ್ಮೀ ಚಿತ್ರಮಂದಿರ ವ್ಯಾಪ್ತಿಯಲ್ಲಿ ಪುಂಡ ಪೋಕರಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.