ಮುಗಿಯದ ಪುಟ್ಟಮಕ್ಕಳ ಕಷ್ಟ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.1
ಕೊಡುವ 500ಕ್ಕೆ ಕಟ್ಟಡವೊಂದನ್ನು ಬಾಡಿಗೆ ಪಡೆದು, ಚಿಣ್ಣರನ್ನು ಕೂರಿಸಿ ಅಂಗನವಾಡಿ ನಡೆಸುವುದು ಸಾಧ್ಯವೇ- ಇಂತಹ ಪರಿಸ್ಥಿತಿ ನಗರ ಪ್ರದೇಶದಲ್ಲಿ ಇದೆ.
ಅಂಗನವಾಡಿ ಶಿಕ್ಷಣದ ಬಗ್ಗೆ ಹೆಚ್ಚು ಕೇಂದ್ರೀಕರಿಸುವಂತೆ ಸೂಚಿಸುವ ನೀತಿಯೇ ಸರ್ಕಾರದಲ್ಲಿದೆ. ಇದಕ್ಕಾಗಿ ಕೋಟಿಗಟ್ಟಲೆ ವೆಚ್ಚ ಮಾಡುತ್ತಿದೆ. ಪೌಷ್ಠಿಕ ಆಹಾರ ನೀಡುವ ಯೋಜನೆ ಇದೆ. ಆದರೆ, ಪಟ್ಟಣ ಪ್ರದೇಶದಲ್ಲಿ ಕಟ್ಟಡದ್ದೇ ದೊಡ್ಡ ಸಮಸ್ಯೆ.
ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ನಡೆಸಲು ಕಟ್ಟಡ ಬಾಡಿಗೆ ಪಡೆದರೆ 300 ಸಿಗುತ್ತದೆ. ಪಟ್ಟಣ ಪ್ರದೇಶದಲ್ಲಿ 500 ನಿಗದಿಪಡಿಸಲಾಗಿದೆ. ಈ ದರಕ್ಕೆ ಕಟ್ಟಡಗಳು ಬಾಡಿಗೆಗೆ ಸಿಗುವುದೇ ಕಷ್ಟ. ಯಾವುದಾದರೂ ಮನೆಯ ಕಟ್ಟೆಯ ಮೇಲೆಯೋ, ದೇವಸ್ಥಾನದ ಜಗುಲಿಯಲ್ಲೋ ಅಂಗನವಾಡಿಗಳು ನಡೆಯಬೇಕಾಗಿದೆ.
ಇಂತಹ ಪರಿಸ್ಥಿತಿ ಶಿವಮೊಗ್ಗ ನಗರದಲ್ಲಿಯೇ ಇದೆ. ಶೇ.70ರಷ್ಟು ಕಟ್ಟಡಗಳು ಇಂತಹ ಬಾಡಿಗೆ ಸ್ಥಳದಲ್ಲಿಯೇ ಇವೆ. ಶಾಲೆ ಇತ್ಯಾದಿ ಸರ್ಕಾರಿ ಕಟ್ಟಡಗಳ ಜತೆಗಿರುವುದು ಕಡಿಮೆಯೇ.
ಸಮಸ್ಯೆ ಇದು: ಅಂಗನವಾಡಿ ಕಟ್ಟಡ ನಿರ್ಮಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನ ಸಿಗುವುದು ಸುಲಭ. ಆದರೆ ನಗರ ಪ್ರದೇಶದಲ್ಲಿ ನಿವೇಶನ ಸಿಗುವುದು ಕಷ್ಟ. ಮಾರುಕಟ್ಟೆ ದರ ತೆತ್ತು ನಿವೇಶನ ಪಡೆಯುವುದೂ ಕಷ್ಟ- ಇದು ಒಂದು ಸಮಸ್ಯೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯ್ತಿ ಅಡಿಯಲ್ಲಿ ಬರುತ್ತದೆ. ಪಟ್ಟಣ ಪ್ರದೇಶದ ಆಡಳಿತ ನಗರಾಭಿವೃದ್ಧಿ ಇಲಾಖೆಗೆ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಜಿಲ್ಲಾ ಪಂಚಾಯ್ತಿಯು ನಗರ ಪ್ರದೇಶದಲ್ಲಿರುವ ಅಂಗನವಾಡಿ ಕಟ್ಟಡ ಅಭಿವೃದ್ಧಿಗೆ ನೆರವು ನೀಡುವುದು ಅಸಾಧ್ಯ. ತಮ್ಮ ನಿಯಂತ್ರಣದಲ್ಲಿ ಬಾರದ ಅಂಗನವಾಡಿ ಕಟ್ಟಡಗಳಿಗೆ ನೆರವು ಒದಗಿಸುವುದಕ್ಕೆ ನಗರ ಸ್ಥಳೀಯ ಸಂಸ್ಥೆಗಳು ಮನಸ್ಸು ಮಾಡುತ್ತಿಲ್ಲ.- ಇದು ಇನ್ನೊಂದು ಸಮಸ್ಯೆ.
ಹಾಗಾಗಿ ನಗರ, ಪಟ್ಟಣ ಪ್ರದೇಶದ ಚಿಣ್ಣರ ಗೋಳು ಕೇಳುವವರೇ ಇಲ್ಲವಾಗಿದೆ. ಅತ್ಯಂತ ಕನಿಷ್ಠ ಸೌಲಭ್ಯದ ಕಟ್ಟಡದಲ್ಲಿ ಬಹುತೇಕ ಅಂಗನವಾಡಿಗಳು ನಡೆಯುತ್ತಿವೆ.
ಕ್ರಮ ಏನು: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು -ಕನ್ನಡಪ್ರಭ- ಸಂಪರ್ಕಿಸಿದಾಗ, ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಅನುದಾನ ನೀಡುವುದಕ್ಕೆ ತಾಂತ್ರಿಕ ತೊಂದರೆ ಇದೆ. ಆದ್ದರಿಂದ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಸದ್ಯವೇ ಪತ್ರ ಬರೆಯಲಾಗುವುದು ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಈ ವಿಷಯದ ಬಗ್ಗೆ ಆಸಕ್ತಿ ವಹಿಸಿದ್ದು, ನಾನು ನಗರಸಭೆ ಸದಸ್ಯನಾಗಿದ್ದಾಗಲೇ ಈ ರೀತಿಯ ಹಲವು ಸಮಸ್ಯೆಗಳನ್ನು ನೋಡಿದೆ. ಈ ಬಗ್ಗೆ ಗಂಭೀರ ಚರ್ಚೆ ಅಗತ್ಯ. ನಗರಸಭೆ ನೂತನ ಸಮಿತಿ ರಚನೆಯಾದ ಕೂಡಲೇ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ಆದರೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಲೋಕೇಶ್ವರಪ್ಪ ಅವರನ್ನು ಸಂಪರ್ಕಿಸುವ ಪ್ರಯತ್ನ ಸಾಧ್ಯವಾಗಲಿಲ್ಲ. ಕಳೆದೊಂದು ವಾರದಿಂದ ಅವರ ಫೋನ್ ರಿಂಗ್ ಆಗುತ್ತಿದೆಯೇ ಹೊರತು ಅತ್ತಕಡೆಯಿಂದ ಯಾವುದೇ ಸ್ಪಂದನೆ -ಕನ್ನಡಪ್ರಭ-ಕ್ಕೆ ಸಿಗಲಿಲ್ಲ.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

