ಅತ್ಯಾಚಾರ ಯತ್ನ: ಆರೋಪಿ ಬಂಧನ
ಕ.ಪ್ರ.ವಾರ್ತೆ , ಸೊರಬ , ಜು.13
ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಭೈರೆಕೊಪ್ಪ ಗ್ರಾಮದ ಬಳಿ ನಡೆದಿದೆ.
ಪಟ್ಟಣದ ಅಂಬೇಡ್ಕರ್ ಬಡಾವಣೆಯ ರಮೇಶ್ ಆಚಾರಿ ಅತ್ಯಾಚಾರಕ್ಕೆ ಪ್ರಯತ್ನಿಸಿದವನು. ಮಹಿಳೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಸಿಡಿಪಿಒ ಕಚೇರಿಗೆ ಬಂದು ಗೌರವಧನ ಪಡೆದು ತನ್ನ ಮನೆಗೆ ವಾಪಸ್ಸಾಗುವಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ರಮೇಶ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಲ್ಲದೆ, ಮಹಿಳೆಯ ಬಳಿ ಇದ್ದ ರು. 4,000 ಮತ್ತು ಮೈಮೇಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮಹಿಳೆ ನೀಡಿದ ದೂರಿನ ಅನ್ವಯ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪಿಎಸ್‌ಐ ಮಹಬಲೇಶ್ವರ ನಾಯ್ಕ್ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಖಂಡನೆ: ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಯತ್ನವನ್ನು ತಾಲೂಕು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸಂಘ ಖಂಡಿಸಿದೆ. ಸೇವೆಯೇ ಪ್ರಧಾನವಾಗಿರುವ ಕಾರ್ಯಕರ್ತೆಯರು ಪ್ರಾಮಾಣಿಕ ಸೇವೆ ಸಲ್ಲಿಸುವ ವೇಳೆ ಈ ರೀತಿ ಅಮಾನವೀಯ ವರ್ತನೆ ನಡೆದಿರುವುದು ಕಾರ್ಯನಿರತ ಕಾರ್ಯಕರ್ತೆ, ಸಹಾಯಕಿಯರು ಭೀತಿಯಿಂದ ಆತಂಕಕ್ಕೊಳಗಾಗಿದ್ದಾರೆ.
ತಾಲೂಕು ಗ್ರಾಮಾಂತರ ಪ್ರದೇಶಗಳಿಗೆ ಒಂದೆರಡು ಕಿಮೀ. ನಡೆದು ಹೋಗುವ ಅನಿವಾರ್ಯತೆ ಇದ್ದು, ಇಂತಹ ಘಟನೆಗಳು ನಡೆದರೆ ಕಾರ್ಯನಿರ್ವಹಿಸುವುದು ತೀರಾ ಕಷ್ಟದಾಯಕ. ಇಂತಹ ಯತ್ನಕ್ಕೆ ಮುಂದಾದ ಆರೋಪಿಗೆ ಉಗ್ರ ಶಿಕ್ಷೆ ನೀಡಬೇಕು.
ಮಹಿಳೆಯರ ರಕ್ಷಣೆ ಆಗಬೇಕು ಎಂದು ಆಗ್ರಹಿಸಿರುವ ಅವರು ಆರೋಪಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಸಂಘದ ತಾಲೂಕು ಅಧ್ಯಕ್ಷೆ ಸುಮಿತ್ರಮ್ಮ, ಕೆ.ಬಿ.ಸಾವಿತ್ರಮ್ಮ, ಎಂ.ಬಿ.ದೇವಕಿ, ಸುಶೀಲಮ್ಮ, ಎನ್.ಶಾಂತಮ್ಮ, ಶಕುಂತಲಾ, ಕೆ.ಗಾಯತ್ರಿ, ಕೆ.ಆರ್.ರಾಮಕ್ಕ, ವಿ.ನಾಗಮ್ಮ ಮೊದಲಾದರು ಮನವಿ ಸಲ್ಲಿಸಿದರು.
ಅಕ್ರಮ ಮದ್ಯ ಮಾರಾಟ
ಭದ್ರಾವತಿ: ಅಗ್ರಹಾರ ಮಾರಿಯಮ್ಮ ದೇವಸ್ಥಾನದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನ್ಯೂಟೌನ್ ಸಬ್ ಇನ್ಸ್ ಪೆಕ್ಟರ್ ಲತಾ ಅವರು ಅದೇ ಪ್ರದೇಶದ ವಾಸಿ ಸತ್ಯ ಎಂಬವರಿಂದ 490 ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮಟ್ಕಾ ಜೂಜಾಟ
ಭದ್ರಾವತಿ: ಓಸಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಕೂಡ್ಲಿಗೆರೆ ವಾಸಿ ಅಶೋಕ ಎಂಬವನನ್ನು ಬಂಧಿಸಿ ಆತನಿಂದ 240 ರು.ಗಳನ್ನು ವಶಪಡಿಸಿಕೊಂಡಿದ್ದಾರೆ.
ಲಾರಿ ಕಳವು
ಭದ್ರಾವತಿ: ಜಟ್‌ಪಟ್ ನಗರದಲ್ಲಿ ನಿಲ್ಲಿಸಿದ್ದ ಲಾರಿಯೊಂದು ಕಳವಾಗಿರುವ ಬಗ್ಗೆ ಹಳೇನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಶಿವಾನಂದಪ್ಪ ಮಾಳಗಿ ಎಂಬವರು ತಾವು ಜನ್ನಾಪುರ ವಾಸಿಯಾಗಿದ್ದು ತಮ್ಮ ಲಾರಿ ನಂ.ಕೆ.ಎ.14-0997ನ್ನು ಜು.10ರಂದು ಜಟ್‌ಪಟ್ ನಗರದಲ್ಲಿ ನಿಲ್ಲಿಸಿದ್ದು ಕಾಣೆಯಾಗಿದೆ ಎಂದು ದೂರು ನೀಡಿದ್ದಾರೆ. ಹಳೇನಗರ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ.
ಮಹಿಳೆಯಿಂದ ಅಕ್ರಮ ಮದ್ಯ ಮಾರಾಟ
ಭದ್ರಾವತಿ: ನ್ಯೂಟೌನ್ ಮಾರಿಯಮ್ಮ ದೇವಸ್ಥಾನದ ಬಳಿ ಶಾಂತಿ ಎಂಬ ಮಹಿಳೆ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಅದನ್ನು ಮಾರಾಟ ಮಾಡುವಾಗ ನ್ಯೂಟೌನ್ ಪೊಲೀಸರು ಆಕೆಯನ್ನು ಬಂಧಿಸಿ ಸುಮಾರು 650 ರು.ಗಳ ಮೌಲ್ಯದ 15 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅದೇ ರೀತಿ ಹಳೇನಗರ ಪೊಲೀಸರು ತರೀಕೆರೆ ರಸ್ತೆಯ ರೆಸ್ಟೋರೆಂಟೊಂದರಲ್ಲಿ ಕ್ಯಾಷಿಯರ್ ಕೆಲಸ ಮಾಡುವ ಜಗದೀಶ ಎಂಬವನು ಅಕ್ರಮವಾಗಿ ಮದ್ಯ ಮಾರಾಟು ಮಾಡುತ್ತಿದ್ದು ಹಳೇನಗರ ಪೊಲೀಸರು ದಾಳಿ ನಡೆಸಿ ಸುಮಾರು 1015 ರು.ಗಳ ಮೌಲ್ಯದ 29 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

