ಅನಾಥ ರಂಗಮಂದಿರ, ರಂಗಾಯಣ
ಕ.ಪ್ರ.ವಾರ್ತೆ ಶಿವಮೊಗ್ಗ ಜು.26
ಸಾಂಸ್ಕೃತಿಕವಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಶಿವಮೊಗ್ಗದಲ್ಲೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೋಡಿಕೊಳ್ಳುವುದಕ್ಕೆ ಅಧಿಕಾರಿಗಳೇ ಇಲ್ಲವಾಗಿದೆ. ರಂಗಾಯಣಕ್ಕೂ ಸಹ ಮುಖ್ಯಸ್ಥರಾಗಲಿ, ಆಡಳಿತಾಧಿಕಾರಿಗಳಾಗಲಿ ಇಲ್ಲ.
ಹದಿನಾಲ್ಕು ವರ್ಷಗಳ ಕುವೆಂಪು ರಂಗಮಂದಿರವನ್ನು ಜತನದಿಂದ ಕಾದು, ಅತ್ಯುತ್ಯಮ ನಿರ್ವಹಣೆಗಾಗಿ ರಾಜ್ಯದ ರಂಗಮಂದಿರಗಳಲ್ಲಿ ಒಂದು ಎಂಬ ಖ್ಯಾತಿ ಬರುವಂತೆ ಮಾಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಅವರು ವರ್ಗಾವಣೆಯಾಗಿದ್ದಾರೆ. ದಾವಣಗೆರೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಶಿವರುದ್ರಪ್ಪ ಅವರು ಈಗ ಶಿವಮೊಗ್ಗದ ಹೆಚ್ಚುವರಿ ಹೊಣೆ ಹೊತ್ತುಕೊಂಡಿದ್ದಾರೆ.
ಕುವೆಂಪು ರಂಗಮಂದಿರದ ನಿರ್ವಹಣೆ ಸಂಪೂರ್ಣವಾಗಿ ಜಿಲ್ಲಾಡಳಿತದ್ದು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಇದೇ ಕಟ್ಟಡದಲ್ಲಿರುವುದರಿಂದ ಸಹಾಯಕ ನಿರ್ದೇಶಕರೇ ಇದನ್ನು ನೋಡಿಕೊಳ್ಳುತ್ತಿದ್ದರು. ಇವರು ರಂಗಮಂದಿರ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಹೌದು.
ಖಾಯಂ ಸಿಬ್ಬಂದಿ ಇಲ್ಲ: ಈಗ ಹೆಚ್ಚುವರಿ ಹೊಣೆ ಹೊತ್ತುಕೊಂಡಿರುವ ಶಿವರುದ್ರಪ್ಪ ಅವರು ವಾರಕ್ಕೆ ಎರಡು ದಿನ ಮಾತ್ರ ಭೇಟಿ ನೀಡಬಹುದು. ಇವರ ಅನುಪಸ್ಥಿತಿಯಲ್ಲಿ ಆಡಳಿತ ನಿರ್ವಹಿಸಲು ಇಲಾಖೆಯಲ್ಲೀಗ ಖಾಯಂ ಸಿಬ್ಬಂದಿಯೇ ಇಲ್ಲ. ಸೀನಿಯರ್ ಎಲೆಕ್ಟ್ರೀಷಿಯನ್-ಸೌಂಡ್ ಸೂಪರ್ವೈಸರ್ ಆಗಿರುವ ಬಜಂತ್ರಿ ಬಿಟ್ಟರೆ ಇಲ್ಲಿರುವವರ್ಯಾರೂ ಖಾಯಂ ಸಿಬ್ಬಂದಿ ಅಲ್ಲ. ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ವಸಂತ್, ಕಾವಲುಗಾರ ರುದ್ರಪ್ಪ ಸೇರಿದಂತೆ ಒಟ್ಟು ಆರು ಜನರಿದ್ದಾರೆ.
ಶಿವಮೊಗ್ಗ ಕಚೇರಿಗೆ ಒಬ್ಬರು ಟೈಪಿಸ್ಟ್ ವರ್ಗವಾಗಿದ್ದಾರೆ. ಆದರೆ ಅವರು ಇಲ್ಲಿಗೆ ಬರದೇ ಬೇರೆಡೆ ಹೋಗುವ ಪ್ರಯತ್ನದಲ್ಲಿದ್ದು, ಅವರು ಹಾಜರಾಗುವ ಸಾಧ್ಯತೆ ಕಡಿಮೆಯೇ ಎಂದು ಮೂಲಗಳು ತಿಳಿಸುತ್ತಿವೆ.
ಬಜೆಟ್ ಘೋಷಣೆಯಾಗಿದ್ದು, ಅನುದಾನ ಬಂದ ನಂತರ ಇಲಾಖೆಗೆ ಶಾಶ್ವತ ಸಿಬ್ಬಂದಿ ಬೇಕೇಬೇಕಾಗುತ್ತದೆ. ತುರ್ತಾಗಿ ಕನಿಷ್ಠ ಒಬ್ಬ ಕ್ಲರ್ಕ್ ಹಾಗೂ ಒಬ್ಬರು ಟೈಪಿಸ್ಟ್ ಅಗತ್ಯವಿದೆ.
ಸುವರ್ಣ ಸಂಸ್ಕೃತಿ: ಇನ್ನು ರಂಗಾಯಣ ಕಚೇರಿ ಹೊಂದಿರುವ ಸುವರ್ಣ ಸಂಸ್ಕೃತಿ ಭವನದಲ್ಲಿರುವ 9 ಜನರೂ ಸಹ ಹೊರಗುತ್ತಿಗೆಯವರು. ಇವರಲ್ಲಿ ಮೂವರು ಭದ್ರತೆಗೆ, ಮೂವರು ಸ್ವಚ್:್ತೆಗೆ ಇದ್ದಾರೆ. ಇಲ್ಲಿ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯದ ಕಾರಣ ಸ್ಟೇಜ್ ಅಸಿಸ್ಟೆಂಟ್ ಇಲ್ಲ.
ರಂಗಾಯಣಕ್ಕೆ ಮೈಸೂರಿನಿಂದ ವರ್ಗವಾಗಿ ಬಂದಿರುವ 6 ಕಲಾವಿದರಿಗೆ ಯಾವ ಜವಾಬ್ದಾರಿಯನ್ನೂ ಸಹ ನೀಡಿಲ್ಲ.
ಹಾಗಾಗಿ ಮಲೆನಾಡ ಮಟ್ಟಿಗೆ ಸಾಂಸ್ಕೃತಿಕ ಹೆಗ್ಗುರುತಾಗಿರುವ ಕುವೆಂಪು ರಂಗಮಂದಿರ ಹಾಗೂ ಸುವರ್ಣ ಸಂಸ್ಕೃತಿ ಭವನ ಅನಾಥವಾಗಿವೆ. ಶಿವಮೊಗ್ಗಕ್ಕೆ ಕೂಡಲೇ ಒಬ್ಬ ಸಮರ್ಥ ಸಹಾಯಕ ನಿರ್ದೇಶಕರನ್ನು ವರ್ಗಾವಣೆ ಮಾಡಿ ಈ ಸಮಸ್ಯೆಯನ್ನು ಶೀಘ್ರ ನಿವಾರಿಸುವಂತೆ ಕಲಾವಿದರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

