'ಮನಸಿನ ದನಿ ಕವನದಲ್ಲಿರಲಿ'
ವಸದೇವ ಭೂಪಾಲಂ ವೇದಿಕೆ
ತಾಯಿ ಮಲಗಿರುವ ಮಗುವನ್ನು ನಿದ್ದೆಗೆಡದ ರೀತಿಯಲ್ಲಿ ತಟ್ಟುವ ಆಪ್ಯಾಯತೆ, ತನಗೆ ಸೇರಿದ್ದು ಎಂಬ ಭಾವವೇ ಕವಿತೆ ಎಂದ ಹಿರಿಯ ಕವಯಿತ್ರಿ ಪ್ರೊ. ಚ. ಸರ್ವಮಂಗಳ, ಕಾವ್ಯ ಮನಸಿನ ಕದವನ್ನು ತೆರೆಸುವಂತಿರಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 'ಹಾಲು ಹಳ್ಳ ಹರಿಯಲಿ' ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಅವರು, ನನ್ನ ಮನಸಿನ ದನಿ ನನ್ನ ಕವನದಲ್ಲಿರಬೇಕು. ನನಗೆ ನಾನು ಸಾಚಾ ಆಗಿರಬೇಕು. ಯಾರಿಗೂ, ಯಾವುದಕ್ಕೂ ಸುಳ್ಳಾಗಬಾರದು. ನನಗೂ ಸಹ ಎಂದರು.
ಪರ್ಯಟನ ಕವನ ವಾಚನ: ನಂತರ ಅವರು ವಾಚಿಸಿದ 'ಹಿತ್ತಲ ಕಳ್ಳ' ಕವನವೂ ಸಹ ಅವರು ಬಾಲ್ಯಕಾಲದಲ್ಲಿ ಶಿವಮೊಗ್ಗದ ಗೋಣಿಗರ ಬೀದಿ (ಇವತ್ತಿನ ಕಾಮಾಕ್ಷಿ ಬೀದಿ)ಯಲ್ಲಿದ್ದ ಅವರ ಮನೆಯ ಸುತ್ತಮುತ್ತಲಿನ ಪರಿಸರವನ್ನು ಆಪ್ಯಾಯವಾಗಿ ಹೇಳಿದ್ದು ಅವರ ನಿಲವನ್ನು ನಿಚ್ಚಳಗೊಳಿಸಿತ್ತು.
ಡಾ. ಕುಮಾರ ಚಲ್ಯ ಅವರು 'ಬರುವುದಾದರೆ ಮುಂಡಿಗೆಯ ಬಿಡಿಸು' ಕವನ ವಾಚಿಸಿ, ಸ್ಥಾವರದ ಒಳಗಿದ್ದು ದೇವರಿಗೆ ಅಡ್ಡ ಕೂತವರನ್ನು ಊರಾಚೆ ಮಸಣಕೆ ಬಿಟ್ಟು ಬರಬೇಕು- ಎನ್ನುತ್ತಾ ಬಸವಣ್ಣನವರ ಆದರ್ಶವನ್ನು ವ್ಯಕ್ತಪಡಿಸಿದರು. 'ಪರ್ಯಟನ' ಎಂಬ ಇನ್ನೊಂದು ಕವನವನ್ನೂ ವಾಚಿಸಿದರು.
ಶೇಷಾದ್ರಿ ಕಿನಾರ ಅವರು 'ದಾಹ' ಕವನದ ಮೂಲಕ 'ಹೊಳೆಯ ನೀರು ಬತ್ತಿತು, ಮರಳ ದಿಣ್ಣೆ ಉರುಳಿತು' ಎನ್ನುತ್ತಾ 'ಈಗ ಕಾಡು ಕಡಿದರು, ಮರ ಉರುಳಿಸಿದರು, ಕಾಡೆಲ್ಲಾ ಊರಾಗಿ ಬರಿ ನೆಲ ನೆಲ ನೆಲ ಎನ್ನುತ್ತಾ ಅಭಿವೃದ್ಧಿಯ ಇನ್ನೊಂದು ಮುಖವನ್ನು ಬಿಚ್ಚಿಟ್ಟರು. ನಂತರ 'ಕೃಷ್ಣ ಕವನಗಳು' ಮೂಲಕ ಕೃಷ್ಣನನ್ನು ಇನ್ನಷ್ಟು ಆತ್ಮೀಯವಾಗಿ ಪರಿಚಯಿಸಿದರು.
ತಾಜುಮಾ ಅವರು 'ನೈದ ಮಲ್ಲಿಗೆಯ ಜಡೆ' ಹಾಗೂ 'ಆಭರಣ' ಕವನದ ಮೂಲಕ ಸ್ತ್ರೀಸಂವೇದನೆಯನ್ನು ಮುಖವನ್ನು ತೋರಿದರು.
ಪ್ರೊ. ಪದ್ಮಪ್ರಸಾದ್ ಅವರು 'ದೂರ ಹತ್ತಿರ' ಕವನ ವಾಚಿಸುತ್ತಾ ಮೋಡದ ನಡುವೆ ಸಾಗುವ ವಿಮಾನಕ್ಕೆ ಸನಿಹವೋ ದೂರವೋ ಮೋಡಗಳು ಎಂಬ ಹಲವು ಪ್ರಶ್ನೆಗಳನ್ನೆತ್ತಿ, 'ದೂರ ಸನಿಹಗಳು ಭಾವನೆಯಲ್ಲಿವೆ' ಎಂದರು. 'ಫೋನು ಮಾಡುವ ಹುಡುಗಿ'ಯನ್ನು ಕಂಡು ಇಂಥ ಲಿಪ್ತಿಯಲ್ಲಿ ನಾವೆಲ್ಲಾ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದರು.
ಪ್ರೀತಿ ಎಂದರೆ ಸೋಲು: ಶಾಯರಿ ಕವಿ ಅಸಾದುಲ್ಲಾ ಬೇಗ್ ಅವರು 'ಅಪ್ಪ ಮತ್ತು ನಾನು' ಕವನ ವಾಚಿಸಿ ಪ್ರೀತಿ ಎಂದರೆ ಸೋಲು ಎಂದರ್ಥ, ಅಪ್ಪ ನನ್ನೊಂದಿಗೆ ಆಟದಲ್ಲಿ ಎಂದೂ ಗೆಲ್ಲಲಿಲ್ಲ ಎನ್ನುತ್ತಾ ಅಪ್ಪನ ಪ್ರೀತಿಯ ಅಗಾಧತೆ ಪರಿಚಯಿಸಿದರು. ಜತೆಗೆ ಕೆಲ ಶಾಯಿರಿಗಳನ್ನೂ ವಾಚಿಸಿದರು. ಪ್ರೊ. ಸ. ಉಷಾ ಅವರು 'ದೀಪ' ಕವನದ ಮೂಲಕ ದೀಪಾವಳಿಯ ಹಲವು ನೆನಪುಗಳನ್ನು ಹಂಚಿಕೊಂಡರು.
ಪ್ರೊ. ಸತ್ಯನಾರಾಯಣ ರಾವ್ ಅಣತಿ ಅವರು ಲಂಡನ್ನಲ್ಲಿ ಮಹಾತ್ಮ ಗಾಂಧೀಜಿ ಅವರ ವಸ್ತುಗಳನ್ನು ಹರಾಜು ಹಾಕಿದ ಪ್ರಸಂಗಕ್ಕೆ ಪ್ರತಿಕ್ರಿಯಿಸಿ 'ರಕ್ತದ ಬೆಲೆ' ಕವನ ವಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

