ನಕ್ಸಲರ ಮೇಲೆ ವಿಶೇಷ ನಿಗಾ
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.10
ಛತ್ತೀಸ್ಘಡ ಸೇರಿದಂತೆ ದೇಶದ ವಿವಿಧೆಡೆ ನಕ್ಸಲರು ನಡೆಸಿದ ನರಮೇಧದಿಂದ ಎಚ್ಚೆತ್ತುಕೊಂಡ ರಾಜ್ಯ ಪೊಲೀಸ್ ಇಲಾಖೆ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ವಿಶೇಷ ನಿಗಾ ವಹಿಸಿದೆ.
ಇದರ ಒಂದು ಭಾಗವಾಗಿ ಪೊಲೀಸರಿಗೆ ವಿಶೇಷ ಮಾರ್ಗದರ್ಶನ ನೀಡುವ ಕಾರ್ಯ ನಡೆದಿದ್ದು, ವಿಶೇಷವಾಗಿ ನಕ್ಸಲರಿಂದ ಎದುರಾಗಬಹುದಾದ ಸಮಸ್ಯೆ, ಅವಘಡಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಲು ಪೊಲೀಸ್ ಅಧಿಕಾರಿಗಳ ವಿಶೇಷ ತಂಡವೊಂದು ಯತ್ನಿಸಿದೆ.
ಛತ್ತೀಸ್ಘಡದಲ್ಲಿ ಮೇ 25ರಂದು ಕಾಂಗ್ರೆಸ್ ರ್ಯಾಲಿ ಮೇಲೆ ಬಹಿರಂಗವಾಗಿ ದಾಳಿ ನಡೆಸಿದ ನಕ್ಸಲರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ನಕ್ಸಲ್ ಪೀಡಿತ ರಾಜ್ಯ ಸರ್ಕಾರಗಳಿಗೆ ಹಲವು ಮಾರ್ಗದರ್ಶನ ಮಾಡಿತ್ತು. ಅದರಂತೆ ರಾಜ್ಯವೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ವ್ಯವಸ್ಥೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದೆ.
ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಗೆ ಅಧಿಕಾರಿಗಳ ತಂಡ ಆಗಮಿಸಿದ್ದು, ಇಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಾಲೋಚನೆ ನಡೆಸಿದೆ.
ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಗುಪ್ತಚರ ವಿಭಾಗವನ್ನು ಬಲಪಡಿಸಲು ವಿಶೇಷ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗುಪ್ತಚರ ವಿಭಾಗ ಸಮರ್ಥವಾಗಿದ್ದರೆ ನಕ್ಸಲರ ಚಲನವಲನ ಗ್ರಹಿಸಬಹುದು. ಇದರಿಂದ ಪರಿಸ್ಥಿತಿ ಕೈಮೀರದಂತೆ ತಡೆಯಲು ಎಲ್ಲ ಅವಕಾಶ ಇರುತ್ತದೆ. ಈ ಕಾರಣಕ್ಕೆ ಗುಪ್ತಚರ ವಿಭಾಗ ಗಟ್ಟಿಗೊಳಿಸುವುದು, ಈ ತಂಡಕ್ಕೆ ವಿಶೇಷ ಸವಲತ್ತು, ಸೌಲಭ್ಯ ಕಲ್ಪಿಸುವುದೂ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಕೇಸ್ ಸ್ಟಡಿ ಪಾಠ: ಸ್ಥಳೀಯ ಪೊಲೀಸರಿಗೆ ಇನ್ನೊಂದು ಪ್ರಮುಖ ಪಾಠವೆಂದರೆ ಸಾಮ್ಯತೆಯ ಅವಲೋಕನದ ಪರಿಚಯ.
ಇತ್ತೀಚಿನ ಪ್ರಮುಖ ನಕ್ಸಲ್ ದಾಳಿಯಲ್ಲಿ ಕೆಂಪು ಉಗ್ರರ ಕೈಚಳಕ, ಚಲನವಲನ, ಆಗು ಹೋಗುಗಳು, ಅವಘಡಕ್ಕೆ ಬಳಸುವ ಉಪಕರಣ ಇತ್ಯಾದಿಗಳ ಕುರಿತು ಕೇಸ್ ಸ್ಟಡಿ ಮಾಡುವ ಮೂಲಕ ಸ್ಥಳೀಯ ಪೊಲೀಸರನ್ನು ಮಾಹಿತಿ ಪೂರ್ಣರನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಚಟುವಟಿಕೆ: ಶಿವಮೊಗ್ಗ ಹಾಗೂ ಚಿಕ್ಕಮಗಳೂರು, ಕೊಡಗು, ಉಡುಪಿ ವ್ಯಾಪ್ತಿಯಲ್ಲಿ ಕಳೆದೊಂದು ದಶಕದಿಂದಲೂ ನಕ್ಸಲರು ಸಕ್ರಿಯರಾಗಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ನಕ್ಸಲ್ ಚಟುವಟಿಕೆ ಯಶಸ್ಸು ಕಾಣದೇ ಹೋದರೂ, ಅವರ ಅಸ್ತಿತ್ವ ಇನ್ನೂ ಇದೆ. ಬೂದಿ ಮುಚ್ಚಿದ ಕೆಂಡದಂತೆ ಆಗಿಂದಾಗ್ಗೆ ನಕ್ಸಲರು ಬುಸುಗುಡುತ್ತಲೇ ಇದ್ದಾರೆ. ಮತ್ತೊಂದಿಷ್ಟು ದಾಳಿ ಮುನ್ಸೂಚನೆಗಳೂ ಇವೆ. ಈ ಕಾರಣಕ್ಕೆ ಸ್ಥಳೀಯ ಪೊಲೀಸ್ ವ್ಯವಸ್ಥೆಯನ್ನು ಚುರುಕುಗೊಳಿಸುವ ಕಾರ್ಯ ನಡೆದಿದೆ.
ನಗರದೊಳಗೂ ಚಲನವಲನ: ನಕ್ಸಲರ ವಿವಿಧ ಚಟುವಟಿಕೆ ನಗರ ಪ್ರದೇಶಗಳೊಳಗೂ ನಡೆಯುತ್ತಿದ್ದು, ಇದರ ಮೇಲೆ ಗಂಭೀರ ದೃಷ್ಟಿ ಹರಿಸಲು ಪೊಲೀಸ್ ವಿಶೇಷ ತಂಡ ಸ್ಥಳೀಯ ಪೊಲೀಸರಿಗೆ ಸಲಹೆ ನೀಡಿದೆ.
ರಾಜ್ಯದ ಹೊರತಾಗಿ ನಕ್ಸಲರು ಪಟ್ಟಣ ಪ್ರದೇಶದೊಳಗೂ ದಾಳಿ ನಡೆಸುತ್ತಿದ್ದು, ಇಲ್ಲೂ ನಡೆಯಬಾರದೆಂಬ ದೃಷ್ಟಿಯಿಂದ ನಗರ ವ್ಯಾಪ್ತಿಯೊಳಗೂ ನಿಗಾ ಇಡಲು ಉದ್ದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

