ಶಿವಮೊಗ್ಗ

ಬಾಲಕಾರ್ಮಿಕ ಪದ್ಧತಿ ಬೇಡ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಜೂ, 12
ಬಾಲಕಾರ್ಮಿಕ ಪದ್ಧತಿ ದೇಶದಲ್ಲಿ ಮಾತ್ರವಲ್ಲದೇ, ವಿಶ್ವದ್ಯಂತ ದೊಡ್ಡ ಪಿಡುಗಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ  ಆರ್.ಎಂ. ಶೆಟ್ಟರ್ ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು, ಬಡತನ, ಅಜ್ಞಾನ ಹಾಗೂ ಅನಕ್ಷರತೆಯಿಂದ ಬಾಲಕಾರ್ಮಿಕ ಪದ್ಧತಿ ಜಾರಿಯಲಿದೆ. ಇದನ್ನು ಬುಡ ಸಮೇತ ಕೀಳಲು ಎಲ್ಲರೂ ಸಹಕರಿಸಬೇಕು ಎಂದರು.
ವಿಷ ವರ್ತುಲ: ಬಾಲ ಕಾರ್ಮಿಕ ಪದ್ಧತಿ ಒಂದು ವಿಷ ವರ್ತುಲವಿದ್ದಂತೆ. ಯಾವ ಕಾರಣಕ್ಕೆ ಬಾಲ ಕಾರ್ಮಿಕರಾಗುತ್ತಾರೋ ಮುಂದೆ ಅದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬಡತನ, ಅಜ್ಞಾನದಿಂದ ಬಾಲ ಕಾರ್ಮಿಕರಾಗುತ್ತಾರೆ ಎಂದಾದರೆ ಸಮಸ್ಯೆ ಮತ್ತೆ ಮುಂದುವರಿಯುತ್ತದೆ. ಆದರಿಂದ ಈ ವಿಷ ವರ್ತುಲದಿಂದ ಬಿಡಿಸಿಕೊಳ್ಳಬೇಕು. ಇದಕ್ಕೆ ಸಾಮಾಜಿಕ ಕಳಕಳಿಯೂ ಮುಖ್ಯ ಎಂದರು.
 ಶಾಲೆಗೆ ಸೇರದ 6ರಿಂದ 14ವಯೋವಾನದ ಯಾವುದೇ ಮಗು ಬಾಲ ಕಾರ್ಮಿಕ ಎಂದೇ ಪರಿಗಣಿಸಬೇಕು. ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಪ್ರತಿಯೊಂದು ಮಗು ಪಡೆದಾಗ ಮಾತ್ರ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬಹುದು ಎಂದರು.
ಪೋಷಕರ ಪಾತ್ರ: ಬಾಲ್ಯದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಶಿಕ್ಷಣವನ್ನು ಕೊಟ್ಟರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ಈ ವಿಷಯದಲ್ಲಿ ಪೋಷಕರ ಪಾತ್ರ ಪ್ರಮುಖವಿದೆ ಎಂದರಲ್ಲದೇ, ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕೇವಲ ಆಚರಣೆಯಾಗದೆ ಪ್ರತಿಯೊಬ್ಬರೂ ಇದನ್ನು ಕೃತಿಯಲ್ಲಿ ತರಬೇಕು. ಇಂತಹ ಘಟನೆಗಳನ್ನು ಕಂಡರೆ ತಕ್ಷಣ ಸಂಬಂಧಪಟ್ಟವರಿಗೆ ತಿಳಿಸುವ ಮೂಲಕ ಸಾಮಾಜಿಕ ಬದ್ಧತೆ ಮೆರೆಯಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
 ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗಲು ಕಾರಣವಾಗಿದ್ದು, ಕುಟುಂಬದ ಉದ್ಯೋಗ ನೈಪುಣ್ಯತೆ ತಮ್ಮ ಮಕ್ಕಳಿಗೂ ಬರಲಿ ಎಂಬ ಪೋಷಕರ ಹಂಬಲದಿಂದಲೂ ಕಾರ್ಮಿಕ ಪದ್ಧತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಟುಂಬ ಕಾರ್ಯದಲ್ಲಿ ಚಿಕ್ಕಮಕ್ಕಳನ್ನು ತೊಡಗಿಸುತ್ತಿರುವುದು ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣ ಕಡ್ಡಾಯ: 14 ವರ್ಷ ವಯಸ್ಸಿನ ಒಳಗಿನ ಮಕ್ಕಳನ್ನು ಗಣಿಗಾರಿಕೆ, ಕಟ್ಟಡ ನಿರ್ಮಾಣಕ್ಕೆ ಹೀಗೆ ಯಾವುದೇ ರೀತಿಯ ಕೆಲಸದಲ್ಲಿ ದುಡಿಸಿಕೊಳ್ಳುವುದಕ್ಕೆ ಸಂವಿಧಾನ ನಿಷೇಧ ಮಾಡಿದ್ದು, ಅಂತಹ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ತಿಳಿಸಿದೆ ಎಂದು ವಿವರಿಸಿದರು.
 ಬಾಲಕಾರ್ಮಿಕ ಪದ್ಧತಿ ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹವಾಗಿದ್ದು, ಇದನ್ನು ಸಮಾಜದಿಂದ ತೊಲಗಿಸಬೇಕು. ಆದರಿಂದ ವರ್ಷಕ್ಕೆ ಒಂದು ದಿನ ಕಾರ್ಯಕ್ರಮ ಆಯೋಜನೆ ಮಾಡಿಕೊಂಡರೆ ಯಾವುದೇ ಪ್ರಯೋಜನವಿಲ್ಲ.ಇದನ್ನು ಪ್ರತಿನಿತ್ಯ ಇಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಶೇಕಡಾ ಪ್ರಮಾಣದಲ್ಲಿ ತಡೆಗಟ್ಟ ಬಹುದು ಎಂದರು.
ಸಮರ್ಪಕ ಬಳಕೆ: ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದೇ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರಮುಖ ಮಾರ್ಗ ಎಂದರು.
 ನ್ಯಾಯವಾದಿ ಸೀತಾರಾಮಸ್ವಾಮಿ ವಿಷಯ ಮಂಡಿಸಿ, ದೇಶದ ಕೃಷಿ ಚಟುವಡಿಕೆಯಲ್ಲಿ ಶೇ.80ರಷ್ಟು ಬಾಲ ಕಾರ್ಮಿಕರಿರುವುದು ಆತಂಕದ ವಿಷಯ. ಪರಿಣಾಮ ಮಕ್ಕಳು ಮನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಕುಂಠಿತವಾಗಿ ಬೌದ್ಧಿಕವಾಗಿ ಸೊರಗುತ್ತಾರೆ. ಇದರಿಂದ ದೇಶದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದರು.
ವೇದಿಕೆಯಲ್ಲಿ ಪ್ರಧಾನ ಹೆಚ್ಚುವರಿ ನ್ಯಾಯಾಧೀಶ ರವಿ ಎಂ. ನಾಯ್ಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸೆಂಥಿಲ್, ಡಿಡಿಪಿಐ ಎನ್.ಎಸ್. ಕುಮಾರ್, ಕಾರ್ಮಿಕ ಅಧಿಕಾರಿ ಎಂ.ಪಿ. ವಿಶ್ವನಾಥ್, ಅಲ್ಪಸಂಖ್ಯಾತ ಅಭಿವೃದ್ಧಿ ಅಧಿಕಾರಿ ನಜೀಬುಲ್ಲಾ ಖಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮೀಕಾಂತಮ್ಮ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ. ಶ್ರೀನಿವಾಸ್, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು, ಜಿಲ್ಲಾ ವೈದ್ಯಾಧಿಕಾರಿ ಶಿವಣ್ಣರೆಡ್ಡಿ  ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.