ಹೊಸಹಳ್ಳಿಯಲ್ಲಿ ಗಮಕ ಹಬ್ಬ
ಕ.ಪ್ರ.ವಾರ್ತೆ , ಶಿವಮೊಗ್ಗ , ಜೂ.23
ಶಿವಮೊಗ್ಗಕ್ಕೆ ಹೊಂದಿಕೊಂಡ ಎರಡು ಪುಟ್ಟ ಗ್ರಾಮಗಳಿಗೆ ಪ್ರತ್ಯೇಕ ಕಿರೀಟ ಉಂಟು. ಒಂದು ಸಂಸ್ಕೃತ ಗ್ರಾಮವೆಂದು ಹೆಸರಾದರೆ ಮತ್ತೊಂದು ಗಮಕ ಗ್ರಾಮ. ಇದೇ ಗಮಕ ಗ್ರಾಮ ಹೊಸಹಳ್ಳಿಯಲ್ಲೀಗ ಕಳೆದ 35 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಗಮಕ ಸಪ್ತಾಹ ಎಂಬ ಅಪರೂಪದ ಕಾರ್ಯಕ್ರಮ ಈ ಬಾರಿಯೂ ಮುಂದುವರಿದಿದೆ.
ಗಮಕ ಕಲಾ ಪರಿಷತ್ 35ನೇ ವಾರ್ಷಿಕ ಗಮಕ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ಮೂಲಕ ಅಳಿಯುತ್ತಿರುವ ಗಮಕ ಕಲೆಯ ಬಗ್ಗೆ ಜನ ಸಾಮಾನ್ಯರ ಗಮನ ಸೆಳೆಯುವ ಗಂಭೀರ ಪ್ರಯತ್ನ ಇದಾಗಿದೆ.
ಹಿನ್ನೆಲೆ: ಕವಿ ಬರೆದಿರುವ ಕಾವ್ಯವನ್ನು ಸಹೃದಯನಿಗೆ ಮುಟ್ಟಿಸುವ ಒಂದು ಮಾಧ್ಯಮವೇ ಗಮಕ. ರಾಗದ ಮುಖಾಂತರ ಜನ ಸಾಮಾನ್ಯರ ಮನಸ್ಸು ಸೆಳೆದು, ಕಾವ್ಯವನ್ನು ಅರ್ಥೈಸುವವ ಗಮಕಿ. ಗಮಕಿಯ ಹೆಗಲಿಗೆ ಹೆಗಲು ಕೊಡುವವರು ವ್ಯಾಖ್ಯಾನಕಾರರು. ಅದೇ ರೀತಿ ವಿಸ್ತಾರವಾಗಿ ಅರ್ಥಪೂರ್ಣವಾಗಿ ಸಾಹಿತ್ಯದ ತಿರುಳನ್ನು ತಿಳಿಸುವವರು ಅವರು. ಕರ್ನಾಟಕದ ಹೆಮ್ಮೆಯ ಕಲೆ ಎಂಬ ಗರಿಯೂ ಈ ಕಲೆಗುಂಟು.
ಇಂತಹ ಅಪರೂಪದ ಕಲಾ ಮಾಧ್ಯಮವನ್ನು ಪಸರಿಸುವ ಕೆಲಸ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುತ್ತಿದ್ದರೂ, ಪರಿಣಾಮ ಸಾಕಷ್ಟಿಲ್ಲ. ರಾಜ್ಯದಲ್ಲಿ ನಶಿಸುತ್ತಿರುವ ಗಮಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಹೊಸಹಳ್ಳಿಯ ಗಮಕ ಕಲಾ ಪರಿಷತ್ ಮೂರುವರೆ ದಶಕದಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂಬುದು ಪರಿಷತ್ ಕಾರ್ಯದರ್ಶಿ ಎಚ್.ಎಸ್. ಗೋಪಾಲ ಅವರ ವಿವರಣೆ.
ಮೊದಲು ದೊಡ್ಡ ಗಮಕಿ ಸೂರ್ಯನಾರಾಯಣ ಅವಧಾನಿ ಇಲ್ಲಿ ಗಮಕ ಕಲಾ ಪರಿಷತ್ ಹುಟ್ಟುಹಾಕಿದರು. 35 ವರ್ಷದಿಂದ ಪರಿಷತ್ ಗಮಕ ಕಲೆಯ ಏಳ್ಗೆಗಾಗಿ ವಿವಿಧ ಕಾರ್ಯಕ್ರಮ ರೂಪಿಸುತ್ತಲೇ ಬಂದಿದೆ. ಪ್ರಮುಖವಾಗ ವರ್ಷದಲ್ಲಿ ಒಮ್ಮೆ ಏಳು ದಿನಗಳ ಕಾಲ ಗಮಕ ಕಾರ್ಯಕ್ರಮ ಏರ್ಪಡಿಸುತ್ತಲಿದೆ. ಜೊತೆಗೆ ಗಮಕ ವಾಚನ, ವ್ಯಾಖ್ಯಾನ ಸ್ಪರ್ಧೆ, ಗಮಕ ಕಾರ್ಯಕ್ರಮವನ್ನು ವಿಡಿಯೋ ದಾಖಲೀಕರಣ ಮಾಡಲಾಗಿದೆ, ಪ್ರಸಿದ್ಧ ಗಮಕಿಗಳಿಗೆ ಅಭಿನಂದನಾ ಗ್ರಂಥ ಅರ್ಪಿಸಲಾಗಿದೆ, ಪ್ರತಿ ವರ್ಷ ನಡೆಯುವ ಗಮಕ ಕಾರ್ಯಕ್ರಮದಲ್ಲಿ ಒಬ್ಬ ವಿಶೇಷ ಗಮಕಿಯನ್ನು ಗುರುತಿಸಿ ಸನ್ಮಾನವನ್ನೂ ಮಾಡಲಾಗುತ್ತಿದೆ ಎಂದು ಗೋಪಾಲ್ 35 ವರ್ಷದ ಸಾಹಸಗಾಥೆಯನ್ನು ಕನ್ನಡಪ್ರಭಕ್ಕೆ ವಿವರಿಸಿದರು.
ಹಿಂದೆ ರಾಜಾಶ್ರಯದಲ್ಲಿ ಗಮಕಿಗಳಿರುತ್ತಿದ್ದರು. ರಾಜಾಶ್ರಯ ತಪ್ಪಿದ ನಂತರ ಕಲೆ ಕ್ಷೀಣಿಸುತ್ತಾ ಬಂದು. ಇದು ಕರ್ನಾಟಕ ಶ್ರೇಷ್ಠ ಕಲೆ. ಕುಮಾರವ್ಯಾಸ, ಲಕ್ಷ್ಮೀಶ, ರಾಘವಾಂಕನನ್ನು ಜನ ಸಾಮಾನ್ಯರಿಗೆ ಪರಿಚಯಿಸಿದ್ದೇ ಗಮಕಿಗಳು ಎಂಬ ಹೆಮ್ಮೆ ಇದೆ ಎಂದು ವಿವರಿಸುವ ಗೋಪಾಲ್, ಇಂತಹ ಅಪರೂಪದ ಕಲೆಯನ್ನು ಉಳಿಸಲೋಸಗ ಗಮಕ ಪರಿಷತ್ ಕಾರ್ಯಕ್ರಮ ರೂಪಿಸುತ್ತಲೇ ಇದೆ ಎಂದು ಹೇಳಿದರು.
ಗಮನಕ್ಕೆ ಏನು ಬೇಕು: ಗಮಕ ಕಲಾವಿದರಿಗೆ ಸರ್ಕಾರ ಹಾಗೂ ಸಮಾಜದ ಪ್ರೋತ್ಸಾಹ ಬೇಕಾಗಿದೆ, ಗಮಕಿಗಳನ್ನು ಪ್ರೋತ್ಸಾಹಿಸಿದರೆ ಗಮಕ ಕಲೆ ಮುಂದುವರಿಯುವುದು. ಅದೇ ರೀತಿ ರಾಜ್ಯ ಗಮಕ ಕಲಾ ಪರಿಷತ್ಗೆ ಸರ್ಕಾರ ಆರ್ಥಿಕ ಸಹಕಾರ ಕೊಡಬೇಕು. ಆ ಮೂಲಕ ಗಮಕ ಸಂಬಂಧಿ ಚಟುವಟಿಕೆಯನ್ನು ನಡೆಸಬಹುದಾಗಿದೆ. ಗೋಷ್ಠಿ, ಕಾರ್ಯಕ್ರಮಗಳು, ತರಬೇತಿ, ಕಾರ್ಯಾಗಾರಗಳನ್ನು ನಡೆಸುವ ಮೂಲಕ ಕಲೆಯನ್ನು ವಿಸ್ತರಿಸುವ ಅಗತ್ಯವಿದೆ. ಶಾಲೆಗಳಲ್ಲಿ ಗಮಕವನ್ನು ವಿಷಯವಾಗಿ ಇಟ್ಟರೆ ಗಮಕ ಕಲೆ ಮುಂದುವರಿಯುವ ಜೊತೆಗೆ ಗಮಕಿಗಳಿಗೂ ಆರ್ಥಿಕವಾಗಿ ಸಹಕಾರ ಕೊಟ್ಟಂತಾಗುತ್ತದೆ. ವಿದ್ಯಾರ್ಥಿಗಳಲ್ಲೂ ಆಸಕ್ತಿ ಹೆಚ್ಚಿಸಬಹುದು ಎಂದು ಗೋಪಾಲ್ ಸರ್ಕಾರದ ಮುಂದೆ ಬೇಡಿಕೆ ಇಡುತ್ತಾರೆ.
ಗಮಕ ಸಪ್ತಾಹದಲ್ಲಿ...ಇಂದು
ಡಾ. ಮತ್ತೂರು ಸನತ್ಕುಮಾರ(ಗಮಕ), ವೇ.ಕೇಶವ ಅವಧಾನೀ(ವ್ಯಾಖ್ಯಾನ). ಜೂ.25- ಶೋಭಾ ಶಶಿಧರ್ ಬೆಂಗಳೂರು (ಗಮಕ), ಡಾ.ಡಿ.ಆರ್.ಪಾಂಡುರಂಗ ಉಡುಪಿ (ವ್ಯಾಖ್ಯಾನ). ಜೂ.26- ಸಾವಿತ್ರೀ ರಾಮಸ್ವಾಮಿ ಹೊಸಹಳ್ಳಿ (ಗಮಕ), ಡಾ. ವಾಸುದೇವ ಹೊಸಹಳ್ಳಿ(ವ್ಯಾ). ಜೂ.27- ಎಚ್.ಕೇಶವಮೂರ್ತಿ ಹೊಸಹಳ್ಳಿ, ವೇ. ಮಾರ್ಕಂಡೇಯ ಅವಧಾನಿ ಮತ್ತೂರು. ಜೂ. 28- ಅನಂತನಾರಾಯಣ, ಚನ್ನಕೇಶವ ಶಾಸ್ತ್ರಿ ಬೆಂಗಳೂರು. ಜೂ.29- ನಿರ್ಮಲಾ ಪ್ರಸನ್ನ ಬೆಂಗಳೂರು, ಡಾ. ಪ್ರಸನ್ನ. ಸಪ್ತಾಹವು ಹೊಸಹಳ್ಳಿಯ ಗಮಕ ಭವನದಲ್ಲಿ ಸಂಜೆ 6.30ರಿಂದ ಆರಂಭವಾಗಲಿದೆ. ಜೂ.30ರಂದು ಸಮಾರೋಪ ನಡೆಯುವುದು.
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

