ತುಂಗೆಯ ಒಡಲಿಗೇ ಕನ್ನ!
- ಶ್ರೀಕಾಂತ ಭಟ್
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾ.13
ತನ್ನ ಒಡಲಿಗೇ ಕೈ ಇಟ್ಟು ಲೂಟಿ ಹೊಡೆಯುತ್ತಿರುವವರ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರದೇ ಎಲ್ಲವನ್ನೂ ನುಂಗಿಕೊಂಡು ಪ್ರಶಾಂತವಾಗಿ ಹರಿಯುತ್ತಿದ್ದಾಳೆ ತುಂಗೆ!
ಶಿವಮೊಗ್ಗ ನಗರ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಒಳನಾಡಿನಲ್ಲಿ ಪ್ರತಿನಿತ್ಯ ರಾತ್ರಿ ಅಕ್ರಮ ಮರಳು ಮಾಫಿಯಾ ಕೇಕೆ ಹಾಕುತ್ತಿದೆ. ಸರ್ಕಾರದ ಹತ್ತಾರು ಕಾಯ್ದೆ ಕಾನೂನು, ನಿಯಮಗಳೆಲ್ಲವನ್ನೂ ಬದಿಗೊತ್ತಿ ತಮ್ಮದೇ ಪ್ರಭುತ್ವ ಸ್ಥಾಪಿಸಿಕೊಂಡಿವೆ.
ನಗರ ವ್ಯಾಪ್ತಿಯಿಂದ ಕೇವಲ 1.5 ಕಿ.ಮೀ. ವ್ಯಾಪ್ತಿಯಲ್ಲಿ ಈ ಅಕ್ರಮ ಮರಳು ಜಾಲ ಕಾರ್ಯನಿರ್ವಹಿಸುತ್ತಿದೆ. ಮೋಟಾರ್ ಬೋಟ್ ಬಳಸಿ ಪ್ರತಿ ನಿತ್ಯ ಮರಳು ಮೇಲೆತ್ತಲಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಬಿಡಿಗಾಸು ಕಟ್ಟದೇ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ.
'ಕನ್ನಡಪ್ರಭ' ಓದುಗರೊಬ್ಬರು ಇಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಗಮನ ಸೆಳೆದಿದ್ದರು. ಅದರಂತೆ ಪತ್ರಿಕಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆಯ ದರ್ಶನವಾಯಿತು.
ಮಾಫಿಯಾ ಅಟ್ಟಹಾಸ: ಶಿವಮೊಗ್ಗ-ಹೊಳೆಹೊನ್ನೂರು ರಸ್ತೆಯ ಪುರಲೆ ಕೆರೆ ದಾಟಿದ ನಂತರ ಎಡಭಾಗದ ರಸ್ತೆಯಲ್ಲಿ ಸುಮಾರು 1.5 ಕಿ.ಮೀನಷ್ಟು ಚಲಿಸಬೇಕು. ಅದು ಸೀದಾ ಹೋಗುವುದು ತುಂಗಾ ನದಿ ಪಾತ್ರಕ್ಕೆ. ಅಲ್ಲೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು. ನದಿ ಪಾತ್ರಕ್ಕೆ ವಾಹನಗಳನ್ನು ಕೊಂಡೊಯ್ಯಲು ಅಲ್ಲಲ್ಲಿ ರಸ್ತೆ ಮಾಡಿಕೊಳ್ಳಲಾಗಿದೆ. ನದಿ ದಂಡೆಯನ್ನೇ ದೊಡ್ಡ ಪ್ರಮಾಣದಲ್ಲಿ ಒಡೆದುಹಾಕಿದ್ದಾರೆ. ವಾಹನ ಓಡಾಟಕ್ಕೆ ಅನುಕೂಲವಾಗುವಂತೆ ನದಿ ಮಧ್ಯದಲ್ಲಿ ತಾತ್ಕಾಲಿಕ ಸೇತುವೆಯನ್ನೂ ನಿರ್ಮಿಸಲಾಗಿದೆ. ಮರಳನ್ನು ಸುಲಭವಾಗಿ ಲೋಡ್ ಮಾಡಲು ಈ ಪ್ರದೇಶದಲ್ಲಿ ಮರಳು ಚೀಲದಿಂದ ಕಟ್ಟೋಣೆ ನಿರ್ಮಿಸಿಕೊಳ್ಳಲಾಗಿದೆ.
ಮಾಫಿಯಾ ಒಡ್ಡೋಲಗ: ರಾತ್ರಿಯೇ ತಮ್ಮ ಅಕ್ರಮ ಶುರು ಮಾಡುವ ಈ ಜನರು ಆರಂಭದಲ್ಲಿ ಪೈಪ್ ಜೋಡಿಸುವುದು, ಮರಳೆತ್ತುವ ಸ್ಥಳ ಗುರುತು ಹೀಗೆ ಬೇರೆ ಬೇರೆ ಕಾರ್ಯ ನಡೆಸುತ್ತಾರೆ. ರಾತ್ರಿ 10.30-11 ಗಂಟೆಯಾಗುತ್ತಿದ್ದಂತೆ ಮರಳೆತ್ತುವ ದಂಧೆ ಆರಂಭವಾಗುತ್ತದೆ.
ನದಿ ಮಧ್ಯದಿಂದ ಭಾರಿ ಗಾತ್ರದ ಪೈಪ್ ಮೂಲಕ ಮರಳು ಸಹಿತ ನೀರನ್ನು ದಡದಲ್ಲಿರುವ ಜರಡಿಗೆ ಬಂದು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ನೀರೆತ್ತಲು ಬಳಸುವ ಡೀಸೆಲ್ ಪಂಪನ್ನು ಮೋಟಾರ್ ಬೋಟ್ನಲ್ಲಿಟ್ಟುಕೊಳ್ಳಲಾಗಿರುತ್ತದೆ.
ಪೈಪ್ ಮೂಲಕ ಜರಡಿಗೆ ಬಂದು ಬೀಳುವ ನೀರನ್ನು ಮರಳಿನಿಂದ ಪ್ರತ್ಯೇಕಿಸಿ ಮತ್ತೆ ನದಿಗೆ ಬಿಡಲಾಗುತ್ತದೆ. ಒಂದು ಪ್ರಮಾಣದಲ್ಲಿ ಮರಳು ಸಂಗ್ರಹವಾಗುತ್ತಿದ್ದಂತೆ ಟ್ರ್ಯಾಕ್ಟರ್ಗಳ ಓಡಾಟ ಬಿರುಸಾಗುತ್ತದೆ. ಒಂದರ ಹಿಂದೆ ಒಂದರಂತೆ ಬರುವ ಟ್ರ್ಯಾಕ್ಟರ್ಗಳು ಮರಳು ತುಂಬಿಕೊಂಡು ಸ್ಟಾಕ್ ಯಾರ್ಡ್ಗಳತ್ತ ತೆರಳುತ್ತವೆ.
ಕೋಟಿ ಕೋಟಿ ವ್ಯವಹಾರ: ನದಿ ಪಾತ್ರದಲ್ಲಿ ಮರಳು ತೆಗೆದು ಕೊಡಲು ಲೋಡ್ಗೆ 1800 ನಿಗದಿ ಮಾಡಲಾಗಿದೆ. ಇದಕ್ಕೊಬ್ಬ ಮುಖ್ಯಸ್ಥನಿದ್ದಾನೆ. ಅಲ್ಲಿಂದ ಮರಳು ಮಾರುವ ಜಾಲ ಬೇರೆಯೇ ಇದೆ. 'ಕನ್ನಡಪ್ರಭ' ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ತಿಳಿದುಬಂದಂತೆ ಪ್ರತಿ ಲೋಡ್ ಮರಳಿಗೆ 4-5 ಸಾವಿರವಿದೆ. ಗುಣಮಟ್ಟದ ಮರಳು ಇದಾಗಿರುವುದರಿಂದ ಇದರ ಬೆಲೆ ತುಸು ಹೆಚ್ಚು.
ಪ್ರತಿ ನಿತ್ಯ ಇಲ್ಲಿನ ಮೂರು ಪಾಯಿಂಟ್ಗಳಿಂದ ಸರಿ ಸುಮಾರು 35ರಿಂದ 50 ಲೋಡ್ವರೆಗೆ ಮರಳು ಸಾಗಣೆಯಾಗುತ್ತದೆ ಎಂಬ ಕಣ್ಣಂದಾಜಿನ ಲೆಕ್ಕವಿದೆ. ಹಾಗಿದ್ದರೆ, ದಿನವೊಂದಕ್ಕೆ ಇದೊಂದೇ ಕಡೆಯಲ್ಲಿ 2.50 ಲಕ್ಷ ವಹಿವಾಟು ನಡೆಯುತ್ತದೆ. ತಿಂಗಳಿಗೆ ಬರೋಬ್ಬರಿ 50ರಿಂದ 60 ಲಕ್ಷ. ವರ್ಷದಲ್ಲಿ 6-7 ತಿಂಗಳು ಮರಳೆತ್ತಿದ್ದರೂ ಕನಿಷ್ಠ 3-4 ಕೋಟಿ ವ್ಯವಹಾರ ಗ್ಯಾರಂಟಿ.
ಒಟ್ಟಾರೆ ನದಿಯ ಪಾವಿತ್ರ್ಯತೆಗೆ ಧಕ್ಕೆ, ಪರಿಸರಕ್ಕೆ ಹಾನಿ, ನದಿ ಪಾತ್ರ ಹಾಳು ಸೇರಿದಂತೆ ಹತ್ತಾರು ರೀತಿಯಲ್ಲಿ ನೈಸರ್ಗಿಕ ಸಂಪತ್ತು ನಷ್ಟವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

