'ಪುಣ್ಯ ಅಪವಿತ್ರವಾಗಿದೆ'
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ. 25
ಇಂದು ಪುಣ್ಯ, ಪಾಪಗಳ ಕಾಲವಲ್ಲ. ಪುಣ್ಯ ಎಂಬುದು ಅಪವಿತ್ರವಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಕರ್ನಾಟಕ ಸಂಘ ಸೋಮವಾರ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಜಾಗತೀಕರಣ ಮತ್ತು ಸಾಹಿತ್ಯ ವಿಷಯ ಕುರಿತಂತೆ ಮಾತನಾಡಿದ ಅವರು, ರಾಜಕೀಯ ವ್ಯಕ್ತಿಗಳು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪುಣ್ಯ ಪಡೆದು ಪಾಪವನ್ನು ಕ್ಷೇತ್ರಗಳಿಗೆ ನೀಡುತ್ತಿದ್ದಾರೆ. ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಎಂಬ ಕ್ಷೇತ್ರದಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂದು ಲೇವಡಿ ಮಾಡಿದರು.
ವಿಶ್ವಾಸ ಕುಸಿತ: ಇಂದು ಧಾರ್ಮಿಕ ಕ್ಷೇತ್ರಗಳು ವಿಶ್ವಾಸ ಕಳೆದುಕೊಳ್ಳುತ್ತಿವೆ. ವಿಧಾನಸೌಧ ಮತ್ತು ಮಠಗಳು ಪರಸ್ಪರ ಬದಲಾವಣೆ ಮಾಡಿಕೊಳ್ಳುವ ಸ್ಥಿತಿ ತಲುಪಿವೆ ಎಂದ ಅವರು, ಜಾತಿ, ಧರ್ಮ ಹಾಗೂ ಪಕ್ಷವನ್ನು ಮೀರಿ ನಡೆಯುವ ನಾಯಕತ್ವದ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತಿದೆ ಎಂದರು.
ಭಾರತಕ್ಕೆ ಜಾಗತೀಕರಣ ಎಂಬ ಭೂತ ಹಿಡಿದಿದ್ದು, ಇದರಿಂದ ಜನವಿರೋಧಿ ನೀತಿ ಎದುರಿಸುವ ಸನ್ನಿವೇಶ ಎದುರಾಗಿದೆ. ಜಾಗತೀಕರಣದ ಪರಿಣಾಮ ಸಣ್ಣ, ಗುಡಿ ಕೈಗಾರಿಕೆಗಳು, ಸರ್ಕಾರಿ ಶಾಲೆಗಳು, ಅದರಲ್ಲಿಯೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಸ್ಥಿತಿ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾಗತೀಕರಣ ಎಂದರೆ ಬಂಡವಾಳ ಮತ್ತು ಬಡ್ಡಿ ಯುದ್ಧ. ಭಾರತಕ್ಕೆ ಬಂಡವಾಳ ಭಕ್ತನಂತೆ ಬಂದಿಲ್ಲ. ದೇವರಂತೆ ಬಂದಿದೆ. ಅದಕ್ಕೆ ಎಲ್ಲರೂ ಈ ದೇವರ ಪಾದಪೂಜೆ ಮಾಡಲು ಸಿದ್ಧರಾಗಿದ್ದಾರೆ. ಬಂಡವಾಳ ಶಾಹಿಗಳಿಗೆ ಸರ್ಕಾರ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿವೆ. ದೇಶದ ಅರ್ಥಿಕ ವ್ಯವಸ್ಥೆಯ ದಿಕ್ಕನೇ ಬದಲಾಯಿಸಲು ಮುಂದಾಗಿವೆ. ಈ ವ್ಯವಸ್ಥೆ ಹೀಗೆಯೇ ಮುಂದುವರೆದರೆ ದೇಶದ ಸಂಸ್ಕೃತಿ ಸ್ಥಾನಪಲ್ಲಟ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದ್ಯಮ ಪ್ರಧಾನ ರಾಷ್ಟ್ರ: ಭಾರತ ಉದ್ಯಮಶೀಲ ರಾಷ್ಟ್ರವಾಗುವುದಕ್ಕಿಂತ ಉದ್ಯಮ ಪ್ರಧಾನ ರಾಷ್ಟ್ರವಾಗಿದೆ. ದೇಶದಲ್ಲಿ ಬಂಡವಾಳ ಶಾಹಿಗಳಿಂದ ಸ್ಪರ್ಧೆ ಹೆಚ್ಚಾಗಿದೆ ಎಂದರಲ್ಲದೇ, ಜಾಗತೀಕರಣವೇ ಬೇರೆ ಜಾಹಿರಾತೀಕರಣವೇ ಬೇರೆ. ಆದರೆ, ಇಂದು ಜಾಗತೀಕರಣ ಮತ್ತು ಜಾಹಿರಾತೀಕರಣ ಸೇರಿಕೊಂಡು ಸಾಮಾಜಿಕ ಪ್ರಕ್ರಿಯೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ, ಸರ್ಜಾ ಶಂಕರ್ ಹರಳೀಮಠ, ಎಚ್.ಎಸ್. ನಾಗಭೂಷಣ್, ಉಮೇಶ್ ಮೊದಲಾದರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

