ಶಿವಮೊಗ್ಗ

ಈಶ್ವರಪ್ಪ ಸಾಧನೆ ಶೂನ್ಯ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ
ಈಶ್ವರಪ್ಪ ಅವರು ಮಾಡಿರುವ ಅಭಿವೃದ್ಧಿ ಶೂನ್ಯ, ಶೂನ್ಯ, ಶೂನ್ಯ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.
 ನಗರದ ಮಿಳಘಟ್ಟ, ಆರ್‌ಎಂಎಲ್ ನಗರ, ಸೀಗೆಹಟ್ಟಿ ಬಡಾವಣೆಗಳಲ್ಲಿ ಬುಧವಾರ ಸಂಜೆ ಕೆಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ವಿರುದ್ಧ ಟೀಕಾಪ್ರಹಾರವನ್ನೇ ಮಾಡಿದರು.
ಜನ ಮನೆಗೆ ಕಳಿಸುತ್ತಾರೆ: ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದರೂ ಸಿಎಂ ಶೆಟ್ಟರ್ ಸುಮ್ಮನೆ ಕುಳಿತಿದ್ದಾರೆ. ಈಗಾಗಲೇ 13 ದಿನ ಆಯ್ತು ಎಂದು ಟೀಕಿಸಿದ ಅವರು, ಈಶ್ವರಪ್ಪ ಅವರ ವಿರುದ್ಧ ಹಗರಣಗಳ ಮೇಲೆ ಹಗರಣ ಹೊರಬರುತ್ತಿದ್ದು, ಅವರು ಜನತೆಯ ಕ್ಷಮೆ ಕೇಳಬೇಕಿತ್ತು. ಆರೋಪಗಳನ್ನು ಎದುರಿಸುತ್ತಿರುವ ಅವರು ಜನರ ಮುಂದೆ ಹೇಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು. ಇವರನ್ನು ಶಿವಮೊಗ್ಗದ ಜನರೇ ಮನೆಗೆ ಕಳಿಸುತ್ತಾರೆ ಎಂದರು.
 ಈಶ್ವರಪ್ಪ ಅವರು ಗಡ್ಕರಿ ಮಾದರಿ ಬೋಗಸ್ ಕಂಪನಿ ಮಾಡಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಗಣಿ ಅಕ್ರಮದಲ್ಲಿ ಇವರ ಪಾಲು ಇದೆ. ರಾಜ್ಯದ ವಿವಿಧೆಡೆ ಅಕ್ರಮ ಅಸ್ತಿ ಇದೆ ಎಂದು ಆರೋಪಿಸಿದರು.
ಕಮಲದಳ ಉದುರುತ್ತಿದೆ: ಕಮಲದ ದಳ ಒಂದೊಂದೇ ಉದುರಿ ಹೋಗುತ್ತಿದೆ. ಗೆಲ್ಲುವ ಸಾಧ್ಯತೆಯೇ ಇಲ್ಲ. ಬೇರೆ ಪಕ್ಷದ ರಾಷ್ಟ್ರೀಯ ನಾಯಕರು ಬಂದರೆ ಸಾವಿರ ಜನ ಸೇರಿದರೆ ಹೆಚ್ಚು. ನಾನು ಹೋದಲ್ಲಿ 10 ಸಾವಿರ ಜನ ಸೇರುತ್ತಾರೆ. ಇದೇ ನಮ್ಮಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಹುಟ್ಟಿಸಿದೆ ಎಂದರು.
ಈಶ್ವರಪ್ಪ ಅವರು ಹಣದ ಬಲ, ಜಾತಿ ವಿಷಬೀಜ ಬಿತ್ತಿ ಗೆಲ್ಲುವ ಹುನ್ನಾರ ನಡೆಸಿದ್ದಾರೆ. ನನ್ನ ಅವಧಿಯಲ್ಲಿ ಅಭಿವೃದ್ಧಿ ದಿಸೆಯಲ್ಲಿ ಏನು ಮಾಡಿದ್ದೇವೆ ಎಂಬುದನ್ನು ನೋಡಿ ಮತ ನೀಡಿ. ಹಣದ ಆಸೆಗೆ ಬಲಿಯಾಗಬೇಡಿ ಎಂದರು.
 ಅಭ್ಯರ್ಥಿ ರುದ್ರೇಗೌಡ, ಕೆಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್ ಸೇರಿದಂತೆ ಹಲವು ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.