ಮತದಾರ ನೀಡಿದ ಸ್ವಾರಸ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 8
ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದ ಜಯ ದಾಖಲಾಗಿದೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಕೆಜೆಪಿಯ ಬಿ.ಆರ್. ಜಯಂತ್ ಅವರನ್ನು 41,248 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಾಗೋಡು ತಿಮ್ಮಪ್ಪ 71,960 ಮತಗಳನ್ನು ಪಡೆದರೆ, ಜಯಂತ್ 30,712 ಮತಗಳನ್ನು ಪಡೆದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಮೆ ಅಂತರದ ಗೆಲವು ದಾಖಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ 39,355 ಮತಗಳನ್ನು ಪಡೆದರೆ ಅವರ ಸಮೀಪ ಪ್ರತಿಸ್ಪರ್ಧಿ ಕೆಜೆಪಿಯ ಎಸ್. ರುದ್ರೇಗೌಡ 39,077 ಮತಗಳನ್ನು ಗಳಿಸಿದ್ದಾರೆ. ಇವೆರೆಡು ಸಂಗತಿಗಳು ಜಿಲ್ಲೆಯ ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದ ಈ ಬಾರಿಯ ಗೆಲುವಿನ ದಾಖಲೆಗಳು.
ಮೂವರು ಹೊಸಬರು
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ನೂತನವಾಗಿ ಆಯ್ಕೆಯಾದವರ ಪೈಕಿ ಮೂವರು ಹೊಸ ಮುಖ. ಶಿವಮೊಗ್ಗ ವಿಧಾಸಭಾ ಕ್ಷೇತ್ರದಿಂದ ಜಯಗಳಿಸಿದ ಕಾಂಗ್ರೆಸ್ನ ಕೆ.ಬಿ. ಪ್ರಸನ್ನಕುಮಾರ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಜಯಶಾಲಿಯಾದ ಶಾರದಾ ಪೂರ್ಯಾನಾಯ್ಕ ಹಾಗೂ ಸೊರಬ ಕ್ಷೇತ್ರದಿಂದ ವಿಜಯ ಸಾಧಿಸಿದ ಎಸ್. ಮಧು ಬಂಗಾರಪ್ಪ ಜಿಲ್ಲೆಯಿಂದ ಪ್ರಪ್ರಥಮವಾಗಿ ವಿಧಾನಸಭೆ ಪ್ರವೇಶಿಸುತ್ತಿರುವ ಶಾಸಕರಾಗಿದ್ದಾರೆ.
ಮೂಲೆ ಗುಂಪಾದರು
ಪ್ರಸ್ತುತ ಚುನಾವಣಾ ಫಲಿತಾಂಶದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ವಿಧಾಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಬೇಳೂರು ಗೋಪಾಲಕೃಷ್ಣ ಹಾಗೂ ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿದ ಸಿ.ಎಂ. ಇಬ್ರಾಹಿಂ ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತೀಯ ನಿಲವನ್ನು ತಳೆದ ಬೇಳೂರು ಜೆಡಿಎಸ್ ಟಿಕೆಟ್ನಿಂದ ಸ್ಪರ್ಧಿಸಿದ್ದರು. ಬಹಳ ವರ್ಷಗಳಿಂದ ಭದ್ರಾವತಿಯಲ್ಲಿ ಅಜ್ಞಾತವಾಸಕ್ಕೆ ತೆರಳಿದ್ದ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಪಟ್ಟಣದಲ್ಲಿ ಕಾಂಗ್ರೆಸ್ಗೆ ಮತ್ತೊಂದು ಹೆಸರಾದ ಶಾಸಕ ಬಿ.ಕೆ. ಸಂಗಮೇಶ್ವರ್ ಅವರೇ ಆಹ್ವಾನ ನೀಡಿದರೆಂದು ಹೇಳುತ್ತಾ ಭದ್ರಾವತಿಯ ಕಾಂಗ್ರೆಸ್ ಟಿಕೆಟ್ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ, ಗೆಲ್ಲುವಲ್ಲಿ ವಿಫಲವಾದರು. ಈ ಮೂಲಕ ಮೂಲೆಗುಂಪಾಗುವ ವರ್ಗಕ್ಕೆ ಸೇರಿಕೊಂಡರು.
ಮನೆಯಂಗಳದಲ್ಲೇ 3ನೇ ಸ್ಥಾನ
ಈಶ್ವರಪ್ಪನವರು ಮನೆಯಂಗಳದಲ್ಲೇ ಸೋಲಪ್ಪಿದ್ದಾರೆ. ಅಂದರೆ, ಅವರ ಮನೆ ಇರುವ ಶಿವಮೊಗ್ಗ ಗುಂಡಪ್ಪ ಶೆಡ್ ವ್ಯಾಪ್ತಿಯಲ್ಲಿ ಬಿಜೆಪಿಗೆ ಮತದಾರ ಮೂರನೇ ಸ್ಥಾನ ದಯಪಾಲಿಸಿದ್ದಾನೆ. ಈ ಭಾಗದಲ್ಲಿ ಬರುವ ಮತದಾರರ ಪೈಕಿ ಹೆಚ್ಚಿನವರು ಅಂದರೆ 211 ಮಂದಿ ಕಾಂಗ್ರೆಸ್ಗೆ ಮತ ಹಾಕಿದರೆ, 187 ಮಂದಿ ಕೆಜೆಪಿಯತ್ತ ವಾಲಿದ್ದಾರೆ. ಬಿಜೆಪಿಗೆ ಇಲ್ಲಿ ಸಿಕ್ಕಿದ್ದು 121 ಮತ ಮಾತ್ರ.
ಐದು ಶಾಸಕರಿಗೆ ಸೋಲು
ಈ ಬಾರಿ ನಾಲ್ವರು ಹಾಲಿ ಶಾಸಕರಿಗೆ ಸೋಲಾಗಿದೆ. ಕೆ.ಎಸ್. ಈಶ್ವರಪ್ಪ, ಹರತಾಳು ಹಾಲಪ್ಪ, ಸಂಗಮೇಶ್, ಕೆ.ಜಿ. ಕುಮಾರಸ್ವಾಮಿ, ಬೇಳೂರು ಗೋಪಾಲಕೃಷ್ಣ ಸೋಲು ಕಂಡಿದ್ದಾರೆ. ಶಿವಮೊಗ್ಗದ ಕೆ.ಬಿ. ಪ್ರಸನ್ನಕುಮಾರ್, ಗ್ರಾಮಾಂತರ ಕ್ಷೇತ್ರದ ಶಾರದಾ ಪೂರ್ಯಾನಾಯ್ಕ್, ಸೊರಬದ ಮಧು ಬಂಗಾರಪ್ಪ ಇದೇ ಮೊದಲ ಬಾರಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಜಿಲ್ಲೆಯ 70 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮಹಿಳೆಯೊಬ್ಬರು ವಿಧಾನಸಭೆ ಪ್ರವೇಶಿಸುತ್ತಿರುವುದು ಇದೇ ಮೊದಲು. ಅದೂ 50 ವರ್ಷಗಳ ನಂತರ. ಆ ಅವಕಾಶ ಸಿಕ್ಕಿರುವುದು ಶಾರದಾ ಪೂರ್ಯಾನಾಯ್ಕ್ ಅವರಿಗೆ.
ಕೆಜೆಪಿ ಎಲ್ಲೆಡೆ ಸೆಕೆಂಡ್
ಬಿಜೆಪಿ ತೊರೆದಿದ್ದ ಯಡಿಯೂರಪ್ಪ ಅವರಿಗೆ ಈ ಪಕ್ಷವನ್ನು ಸಂಪೂರ್ಣವಾಗಿ ಬಗ್ಗುಬಡಿಯಲು ಸಾಧ್ಯವಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿಯೇ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕರ್ನಾಟಕ ಜನತಾ ಪಕ್ಷ ಗಮನಾರ್ಹ ಸಾಧನೆ ಮಾಡಿದೆ. ಐದು ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ಕ್ಷೇತ್ರದಲ್ಲಿ ಕೆಜೆಪಿ ಬೆಂಬಲಿತ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದಾರೆ. ಒಂದು ಕ್ಷೇತ್ರದಲ್ಲಿ ಜಯ ಗಳಿಸಿದೆ. ಬಿಜೆಪಿ ಹಾಗೂ ಕೆಜೆಪಿ ನಡುವೆ ಆಗಿರುವ ಮತ ವಿಭಜನೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ನೆರವಾಗಿದೆ.
ಇಷ್ಟು ವರ್ಷಗಳ ಕಾಲ ಯಡಿಯೂರಪ್ಪ ಎಂಬ ಕೆರೆಯಲ್ಲಿ ಅರಳಿ ನಗುನಗುತ್ತಿದ್ದ ಕಮಲ ಈಗ ನೀರಿಲ್ಲದ ಕೆರೆಯಲ್ಲಿ ಮುದುಡಿ ಹೋಗಿದೆ.
ಫೋಟೋ ಫಿನಿಶ್ ಫಲಿತಾಂಶ
ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪ ಮೂರನೇ ಸ್ಥಾನಕ್ಕೆ ಎಂಬುದು ಗ್ಯಾರೆಂಟಿಯಾಗಿತ್ತು. ಆದರೆ, ಪ್ರಥಮ ಸ್ಥಾನಕ್ಕಾಗಿ ಕಾಂಗ್ರೆಸ್ನ ಕೆ.ಬಿ. ಪ್ರಸನ್ನಕುಮಾರ್, ಕೆಜೆಪಿಯ ಎಸ್. ರುದ್ರೇಗೌಡ ಅವರ ನಡುವೆ ತೀವ್ರ ಪೈಪೋಟಿ ನಡೆಯಿತು. ಎಲೆಕ್ಟಾನಿಕ್ ಮತಯಂತ್ರಗಳ ಎಣಿಕೆ ಮುಗಿದಾಗ ಪ್ರಸನ್ನ ಅವರು 238 ಮತಗಳ ಮುನ್ನಡೆ ಗಳಿಸಿದ್ದರು. ಅಂತಿಮ ಫಲಿತಾಂಶಕ್ಕಾಗಿ ಪೋಸ್ಟಲ್ ಮತಗಳ ಎಣಿಕೆ ಆರಂಭವಾದಾಗ ಎರಡೂ ಪಕ್ಷದ ಕಾರ್ಯಕರ್ತರು ಆತಂಕದಿಂದ ಕಾಯುತ್ತಿದ್ದರು. ಕೊನೆಗೆ ಪ್ರಸನ್ನಕುಮಾರ್ ಅವರು 278 ಮತಗಳ ಅಂತರದಿಂದ ಜಯ ಗಳಿಸಿದ್ದಾರೆಂದು ಘೋಷಿಸಿದಾಗ ನಿಟ್ಟುಸಿರು ಬಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

