ಶಿವಮೊಗ್ಗ

ಮುಂದಿದೆ ಜಿಪಂನಲ್ಲಿ ಬಿಜೆಪಿ- ಕೆಜೆಪಿ ಕಾದಾಟ

Published On :

ಕ.ಪ್ರ.ವಾರ್ತ ಶಿವಮೊಗ್ಗ
ಮೇ13 ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕೆಜೆಪಿ ನಡುವಿನ ಕಾದಾಟಕ್ಕೆ ಮತ್ತೊಂದು  ವೇದಿಕೆ ಸಿದ್ಧವಾಗುತ್ತಿದೆ.
 ವಿಧಾನಸಭಾ ಚುನಾವಣಾ ಕಾದಾಟದಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡಿರುವ ಬಿಎಸ್‌ವೈ ನೇತೃತ್ವದ ಕೆಜೆಪಿಗೆ ಸವಾಲೊಂದು ಎದುರಿಗಿದೆ.
 ಅತಂತ್ರ ಶಿವಮೊಗ್ಗ ಜಿಪಂ ಕೆಜೆಪಿ ಕೈವಶ ಮಾಡಿಕೊಳ್ಳಲು ತಂತ್ರಗಾರಿಕೆ ನಡೆಸಿದ್ದ ಬಿಎಸ್‌ವೈ, ಆಪರೇಷನ್ ಕೆಜೆಪಿ ನಡೆಸಿದ್ದರು. ಅದರಂತೆ ಗ್ರಾಮೀಣಾಭಿವೃದ್ಧಿ ವೇದಿಕೆ ರಚನೆಗೊಂಡಿದ್ದು..., ಈ ತಂಡದ ಸದಸ್ಯರು ಪ್ರತ್ಯೇಕ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದು..., ಬಂಡಾಯಗಾರರ ಅನರ್ಹತೆಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ಇತಿಹಾಸ.
ಸದ್ಯದ ಪರಿಸ್ಥಿತಿ: ಬಿಜೆಪಿಯಿಂದ ಸಿಡಿದು ತಮ್ಮದೇ ಆದ ಪ್ರತ್ಯೇಕ ವೇದಿಕೆ ರಚಿಸಿಕೊಂಡು ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಜಿಪಂ 11 ಸದಸ್ಯರ ಸ್ಥಿತಿ ಸದ್ಯಕ್ಕೆ ಅತಂತ್ರ. ಮರಳಿ ಬಿಜೆಪಿಗೆ ಹೋಗಬೇಕಾ ಅಥವಾ ಕೆಜೆಪಿಯೊಂದಿಗೆ ಮುಂದುವರಿಯಬೇಕಾ ಎಂಬ ಗೊಂದಲದಲ್ಲಿದ್ದು, ಗಂಭೀರ ಚಿಂತನೆಯಲ್ಲಿ ಮುಳುಗಿದ್ದಾರೆ.
 ಒಂದೆಡೆ ಬಿಜೆಪಿ ಬಂಡಾಯ ಸದಸ್ಯರ ನೇತೃತ್ವ ವಹಿಸಿರುವ, ಬಹುಮತ ಕಳೆದುಕೊಂಡಿರುವ ಜಿಪಂ ಅಧ್ಯಕ್ಷೆ -ಉಪಾಧ್ಯಕ್ಷೆಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್, ಜೆಡಿಎಸ್ ಕಾರ್ಯತಂತ್ರವನ್ನೂ ನಡೆಸುತ್ತಿವೆ. ಇದನ್ನು ಬಿಜೆಪಿ ಬೆಂಬಲಿಸಿದರೂ ಅಚ್ಚರಿಯೇನಿಲ್ಲ. ಈರೀತಿಯ ನಿಲುವು ತೆಗೆದುಕೊಳ್ಳುವ  ಮೂಲಕ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಸದಸ್ಯರಿಗೆ ತಕ್ಕ ಪಾಠ ಕಲಿಸಲು ಆ ಪಕ್ಷದ ಮುಖಂಡರು ಚಿಂತನೆ ನಡೆಸಿದ್ದಾರೆ.
ದೂರು ಅರ್ಜಿ: ಮತ್ತೊಂದೆಡೆ ಬಂಡಾಯ ಎದ್ದಿರುವ ಸದಸ್ಯರ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ಈಗಾಗಲೇ ಚುನಾವಣಾ ಆಯೋಗಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ಮೇ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.
 ಈ ನಡುವೆ ವಿಧಾನಸಭೆ ಚುನಾವಣೆ ಮಾದರಿ ನೀತಿ-ಸಂಹಿತೆ ಹಾಗೂ ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದ ಅವಿಶ್ವಾಸ ನಿರ್ಣಯ ಮಂಡನೆ ವಿಷಯದ ಚರ್ಚೆ ಮತ್ತೆ ಬಿರುಸುಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
 ಈ ಬೆಳಣಿಗೆಯ ನಡುವೆಯೇ ಬಂಡಾಯಗಾರರ ಮುಂದಾಳತ್ವ ವಹಿಸಿದ್ದ ಜಿಪಂ ಸದಸ್ಯ ಅಶೋಕ ನಾಯ್ಕ ಬಿಜೆಪಿಗೆ ವಾಪಸಾಗುವ ಮೂಲಕ ವಿರೋಧಿ ಅಲೆ ತಗ್ಗಿಸಿದ್ದಾರೆ.
ಬಿಜೆಪಿಯಲ್ಲಿ ಗೊಂದಲ: ಈ ಘಟನೆಗಳು ಬಿಜೆಪಿ ಬಂಡಾಯ ಸದಸ್ಯರಲ್ಲಿ ಗೊಂದಲ ಮೂಡಿಸಿದೆ. ಒಂದು ವೇಳೆ ಅಧ್ಯಕ್ಷೆ- ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಮುಂದೆ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತಂತೆ ಚರ್ಚಿಸಲು ಸದ್ಯವೇ ಈ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 ಜೊತೆಗೆ ಕೆಜೆಪಿ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಈ ಮಧ್ಯೆ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಲು ಬಂಡಾಯ ಸದಸ್ಯರು ಸಿದ್ಧರಿಲ್ಲ. ಈಗ ಏನೂ ಹೇಳಲ್ಲ, ಚರ್ಚೆ ನಡೆಸುತ್ತಿದ್ದೇವೆ ಎಂದಷ್ಟೇ ಹೇಳಿ ದೂರವಾಣಿ ಕರೆಯನ್ನು ಕಟ್ ಮಾಡುತ್ತಿದ್ದಾರೆ.
 ಜಿಪಂನಲ್ಲಿ ಒಟ್ಟು 31 ಸದಸ್ಯರ ಬಲಾಬಲವಿದೆ. ಈ ಹಿಂದೆ 16 ಬಿಜೆಪಿ, 13 ಕಾಂಗ್ರೆಸ್, 2 ಜೆಡಿಎಸ್ ಸದಸ್ಯರಿದ್ದರು. ಸರಳ ಬಹುಮತ ಹೊಂದಿದ್ದ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದು ಪ್ರಥಮ ಹಂತದ 20 ತಿಂಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿತು. ಶುಭಾ ಕೃಷ್ಣಮೂರ್ತಿ ಹಾಗೂ ಹುಣವಳ್ಳಿ ಗಂಗಾಧರಪ್ಪರವರು ಕ್ರಮವಾಗಿ ಅಧ್ಯಕ್ಷೆ - ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಎರಡನೇ ಹಂತ: ಎರಡನೇ ಹಂತದ 20 ತಿಂಗಳ ಅವಧಿಯ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ನೂತನ ಮೀಸಲಾತಿ ನಿಗದಿಪಡಿಸಿತು. ಅದರಂತೆ ಬಿಸಿಎಂ ಬಿ ಮಹಿಳಾ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಗೀತಾ ಮಲ್ಲಿಕಾರ್ಜುನ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಪಾವನಿಯವರು ಆಯ್ಕೆಯಾದರು.
 ಆದರೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆಯುತ್ತಿದ್ದಂತೆ 12 ಬಿಜೆಪಿ ಜಿಪಂ ಸದಸ್ಯರು ಅವರನ್ನು ಬೆಂಬಲಿಸಿ ಬಂಡಾಯ ಎದ್ದರು. ತಮ್ಮದೇ ಆದ ಗ್ರಾಮೀಣಾಭಿವೃದ್ಧಿ ವೇದಿಕೆ ರಚಿಸಿಕೊಂಡು, ಪ್ರತ್ಯೇಕ ಸ್ಥಾನಮಾನಕ್ಕೆ ಪ್ರಾರ್ಥಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ಬರೆದರು.
 ಬಂಡಾಯ ಶಮನ ಮಾಡುವ ಬಿಜೆಪಿ ಮುಖಂಡರಿಂದ ಸಾಧ್ಯವಾಗದ ಕಾರಣ, ಪಕ್ಷವು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಚುನಾವಣಾ ಆಯೋಗಕ್ಕೆ ದೂರು ನೀಡಿತು. ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಮನವಿ ಮಾಡಿತು.
 ಈ ನಡುವೆಯೇ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಪಂ ಸದಸ್ಯ ಅಶೋಕ್ ನಾಯ್ಕ ಟಿಕೆಟ್ ಸಿಗದ ಕಾರಣ ನಿರಾಸೆಗೊಂಡು ಪಕ್ಷಕ್ಕೆ ವಾಪಸಾಗಿ, ಪಕ್ಷ ಹೇಳಿದಂತೆ ತಾವು ನಡೆದುಕೊಳ್ಳುವುದಾಗಿ ಘೋಷಿಸಿದರು.
ಮುಂದೇನು...?
ಒಂದು ಬಾರಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಆರು ತಿಂಗಳವರೆಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಇದೀಗ 2ನೇ ಹಂತದ ಅಧ್ಯಕ್ಷೆ- ಉಪಾಧ್ಯಕ್ಷೆ ಆಯ್ಕೆಯಾಗಿ ಏಳೆಂಟು ತಿಂಗಳು ಕಳೆಯುತ್ತ ಬಂದಿದೆ. ವಿಧಾನಸಭೆ ಚುನಾವಣೆ ಸಂಹಿತೆ ಕೂಡ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ವಿಷಯಕ್ಕೆ ಮತ್ತೆ ಜೀವ ಬಂದಿದ್ದು, ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.