ಬಸವಣ್ಣ ಸಮಾಜದ ಚಿಕಿತ್ಸಕ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 14
12ನೇ ಶತಮಾನದಲ್ಲಿನ ಮೇಲುಕೀಳೆಂಬ ಭಾವನೆ ಹೋಗಲಾಡಿಸಲು ಬಸವಣ್ಣನವರು ಶ್ರಮಿಸಿದ್ದು, ಅವರು ಈ ಸಮಾಜದ ಚಿಕಿತ್ಸಕ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ವೀರಶೈವ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಸೋಮವಾರ ಸಂಜೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದಿನ ಕಾಲದ ವೈದ್ಯ: 12ನೇ ಶತಮಾನದಲ್ಲಿದ್ದ ಮೌಢ್ಯತೆ, ಜಾತಿ ನಿಂದನೆಗಳನ್ನು ಹೋಗಲಾಡಿಸಲು ಬಹಳಷ್ಟು ಶ್ರಮಿಸಿದ್ದ ಬಸವಣ್ಣನವರು ಅಂದಿನ ಕಾಲದ ಡಾಕ್ಟರ್. ಅವರ ಸ್ಥಾನ ತುಂಬುವ ಮತ್ತೊಬ್ಬ ಚಿಕಿತ್ಸಕ ಸಮಾಜದಲ್ಲಿ ಬರಲೇ ಇಲ್ಲ ಎಂದ ಅವರು, ಜಾತಿ ಭೇದಗಳಂತಹ ಗೋಡೆಯನ್ನು ಒಡೆಯುವ ಕೆಲಸವನ್ನು ನಾವು ಮಾಡಲ್ಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ, ಅಂಬೇಡ್ಕರ್ ಜಾತೀಯತೆ ಹೋಗಲಾಡಿಸುವ ಕನಸು ಕಾಣುತ್ತಿದ್ದರು. ಆದರೆ ಅಂತಹ ಕನಸನ್ನು ಬಸವಣ್ಣ 800 ವರ್ಷಗಳ ಹಿಂದೆಯೇ ಕಾಣುತ್ತಿದ್ದರು ಎಂಬುದು ವಿಶೇಷ. ಪ್ರತಿಯೊಂದು ಜಾತಿಯಲ್ಲಿಯು ಮೇಲು, ಕೀಳು ಎಂಬ ಒಳಪಂಗಡಗಳಿವೆ. 12ನೇ ಶತಮಾನದಲ್ಲಿದಂತಹ ಜಾತೀಯತೆ ಇಂದು ಸಹ ಇರುವುದು ವಿಷಾದನೀಯ ಎಂದರು.
ಬಹಳ ಜಾತೀಯತೆ: ಚುನಾವಣೆ ವೇಳೆ ಜಾತೀಯತೆ ಎಂಬುದು ಬಹಳಷ್ಟು ನಡೆಯುತ್ತದೆ. ಹೆಚ್ಚು ಮತದಾರಿರುವ ಜಾತಿ ಮುಖಂಡರಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಿ ಆಯ್ಕೆ ಮಾಡುವುದು ಸಾಮಾನ್ಯವಾಗಿದೆ. ಅದನ್ನು ಈ ವ್ಯವಸ್ಥೆ ಕೂಡ ಒಪ್ಪಿಕೊಂಡಿದೆ ಎಂದ ಅವರು, ಬಸವಣ್ಣ, ಅಂಬೇಡ್ಕರ್ ಯಾವುದೇ ಜಾತಿ, ಪಂಗಡಗಳಿಗೆ ಸಿಮೀತವಾಗಿರಲಿಲ್ಲ. ಜನ ಜಾತಿಯತೆ ಎಂಬ ಕಂದಕದಿಂದ ಬಳಲುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಬಸವಣ್ಣನಂತಹ ಮತ್ತೊಬ್ಬ ವ್ಯಕ್ತಿ ಮತ್ತೆ ಹುಟ್ಟಿಬರಬೇಕಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದ ಪೂರ್ಯನಾಯ್ಕ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಮತ್ತು ಜನಪ್ರತಿನಿಧಿಗಳು ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಬಸವಣ್ಣ ಅವರ ತತ್ವ, ಆದರ್ಶಗಳಲ್ಲಿನ ಒಂದಂಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಏನಾದರೂ ಸಾಧಿಸಬಹುದು ಎಂದರು.
ಇದಕ್ಕೂ ಮೊದಲು ಡೊಳ್ಳು, ತಮಟೆ ಕಲಾ ತಂಡಗಳ ಮೂಲಕ ಬಸವಣ್ಣ ಅವರ ಭಾವಚಿತ್ರವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಬೆಕ್ಕಿನಕಲ್ಮಠದ ಶ್ರೀ ಮುರಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಮರುಳಸಿದ್ದ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಸಿದ್ದರಾಮಣ್ಣ, ಜಿಲ್ಲಾಧಿಕಾರಿ ಬನ್ಸಾಲ್, ವೀರಶೈವ ಮುಖಂಡ ಜ್ಯೋತಿಪ್ರಕಾಶ್, ರುದ್ರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹರಿಕುಮಾರ್, ಹಾಸ್ಯ ವಾಗ್ಮಿ ಇಂದುಮತಿ ಸಾಲೀಮಠ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

