ಶಿವಮೊಗ್ಗ

ಬರಿದಾದ ವರದೆ; ನೀರಿಗೆ ಪರದಾಟ

Published On :

ಸೊರಬ: ಚಂದ್ರಗುತ್ತಿಯ ವರದಾನದಿ ಬತ್ತ ಹೋಗಿದ್ದು, ಚಂದ್ರಗುತ್ತಿ ಸೇರಿದಂತೆ ಪಟ್ಟಣ ಹಾಗೂ ನದಿ ದಂಡೆಯ ಅನೇಕ ಗ್ರಾಮಗಳು ನೀರಿನ ಬವಣೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ನದಿ ಒಣಗಿರುವುದರಿಂದ ಜನ, ಜಾನುವಾರುಗಳು ನೀರಿಗಾಗಿ ಈಗಾಗಲೆ ಪರದಾಡುತ್ತಿದ್ದು, ಇರುವ ಒಂದಿಷ್ಟು ಕೊಳವೆ ಬಾವಿಗಳ ಅಂತರ್ಜಲಮಟ್ಟವೂ ಕುಸಿದಿದೆ, ಕೆರೆಕಟ್ಟೆ ಒಣಗಿವೆ.
ಕಾರಣ: ಕುಡಿಯುವ ನೀರಿನ ಬಗ್ಗೆ ಕಾಳಜಿ ವಹಿಸದೆ ವಾಣಿಜ್ಯ ಬೆಳೆಗಾಗಿ ಬೇಸಿಗೆಯಿಡಿ ಮಿತಿ ಇಲ್ಲದೆ ನೀರಿಗೆ ಲಗ್ಗೆಹಾಕಿದ್ದೆ ವರದೆ ಬರಿದಾಗಲು ಕಾರಣ. ಪ್ರಸಕ್ತ ಚಂದ್ರಗುತ್ತಿ ಜೋಳದಗುಡ್ಡೆ ಬಳಿಯ ನದಿಯಿಂದ ಸೊರಬಕ್ಕೆ ಮತ್ತು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.
ನೀರು ಸಂಗ್ರಹಣೆಗಾಗಿ ಗುನ್ನೂರು ವ್ಯಾಪ್ತಿಯಲ್ಲಿ ನದಿಗಡ್ಡವಾಗಿ ಮರಳು ಚೀಲ ಇರಿಸಿ ತಡೆಗಟ್ಟುವ ಪರಿಪಾಟವಿದೆ. ಈ ಭಾಗದಲ್ಲಿ ಸುಮಾರು ನೂರಿನ್ನೂರು ಮೀಟರ್‌ವ್ಯಾಪ್ತಿಯಲ್ಲಿ ಇನ್ನೂರಕ್ಕೂ ಅಧಿಕ ಶಕ್ತಿಯ ಪಂಪ್‌ಸೆಟ್‌ಗಳನ್ನು ಬಳಸಿ ಅನಧಿಕೃತವಾಗಿ ನೀರೆತ್ತುವುದು ರಾಜಾರೋಷವಾಗಿ ನಡೆಯುತ್ತಿದೆ ಎಂಬುದು ಕುಡಿಯುವ ನೀರಿನ ಬವಣೆ ಎದುರಿಸುತ್ತಿರುವ ಗ್ರಾಮಸ್ಥರ ಅಳಲು.
ಹುಸಿ ಭರವಸೆ: ಜನಪ್ರತಿನಿಧಿಗಳು ಕುಡಿಯುವ ನೀರಿನ ಶಾಶ್ವತ ಸಂಗ್ರಹಣೆಗಾಗಿ ಪಿಕ್‌ಅಪ್ ಡ್ಯಾಂ ನಿರ್ಮಿಸಲು 5 ಕೋಟಿ ಮಂಜೂರಾಗಿದೆ ಎನ್ನುತ್ತಲೆ ಇದ್ದಾರೆ ಹೊರತು ಯೋಜನೆಯ ಯಾವುದೇ ಸುಳಿವಿಲ್ಲ. ಈ ಪರದಾಟ ಇಂದು ನಿನ್ನೆಯದಲ್ಲ. ಮುಖ್ಯವಾಗಿ ಚಂದ್ರಗುತ್ತಿ ಗ್ರಾಮದಲ್ಲೀಗ ಕುಡಿಯುವ ನೀರಿನ ಬವಣೆ ಉಲ್ಬಣಗೊಂಡಿದೆ. ಸಮಸ್ಯೆ ನೀಗಿಸುವುದಕ್ಕೆ ಪಕ್ವ ಯೋಜನೆಗಳನ್ನು ರೂಪಿಸದೆ, ಒಂದೆರಡು ಬಾರಿ ಅಪಕ್ವ ಯೋಜನೆ ರೂಪಿಸಿ ಹಣವನ್ನು ದುರುಪಯೋಗಿಸುವ ಪ್ರಯತ್ನವೆ ನಡೆದಿದೆ. ಅಂತಹ ಯತ್ನಕ್ಕೆ ಗ್ರಾಮಸ್ಥರು ಅಡ್ಡಗಾಲಾಗಿ ನಿಷ್ಟೂರಕ್ಕೊಳಗಾದವರೂ ಇದ್ದಾರೆ ಎಂದಿರುವ ಗ್ರಾಮಸ್ಥರು ಜನಪ್ರತಿನಿಧಿಗಳ ನಿರ್ಲಕ್ಷ್ಯ, ಸುಳ್ಳು ಭರವಸೆಗಳು ಇಂತಹ ಬವಣೆಗೆ ಕಾರಣ ಎಂದು ದೂರಿದ್ದಾರೆ.
ಮಾಡಬೇಕಾದ್ದು: ಮಳೆಗಾಲಕ್ಕೆ ಮುಂಚೆ ಈ ಭಾಗದಲ್ಲಿ ಅಲ್ಲಲ್ಲಿ ಒಂದಿಷ್ಟು ಬ್ಯಾರೇಜ್ ಆಗಬೇಕು. ನದಿ ಅಂಚಿನಲ್ಲಿರುವ ಕೆರೆಗಳ ಹೂಳೆತ್ತುವ ಕಾರ್ಯವಾಗಬೇಕು, ನದಿ ದಂಡೆಯಲ್ಲಿ ಒಂದಿಷ್ಟು ಅರಣ್ಯೀಕರಣವಾಗಬೇಕು, ಬೇಸಿಗೆ ಬೆಳೆಗೆ ಅನಿವಾರ್ಯ ಕಡಿವಾಣ ಹಾಕಬೇಕು, ಅನಧಿಕೃತ ಪಂಪ್‌ಸೆಟ್ ಹಾವಳಿ ತಡೆಯಬೇಕು, ಪುಕ್ಕಟೆ ನೀರು ಕೊಟ್ಟರೆ ದುರುಪಯೋಗ ತಪ್ಪಿದ್ದಲ್ಲ ಹಾಗಾಗಿ ಜನತೆಗೆ ಇಂತಿಷ್ಟು ನೀರಿಗೆ ಇಂತಿಷ್ಟು ಎಂಬ ಲೆಕ್ಕದಲ್ಲಿ ಕುಡಿಯುವ ನೀರು ಕೊಡುವುದು ಸೂಕ್ತ ಎಂಬುದು ಇಲ್ಲಿನ ಪ್ರಜ್ಞಾವಂತರ ಸಲಹೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.