ಶಾಲಾ ಆರಂಭಕ್ಕೆ ಮುನ್ನುಡಿ
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 29
2013-14ನೇ ಶೈಕ್ಷಣಿಕ ವರ್ಷದಾರಂಭಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳು ಈಗಾಗಲೇ ಮಕ್ಕಳ ಆಹ್ವಾನಕ್ಕೆ ಸಿದ್ಧತೆ ನಡೆಸಿವೆ. ಶಾಲೆಯ ಶಿಕ್ಷಕರು ಈಗಾಗಲೇ ಶಾಲೆಗಳಿಗೆ ತೆರಳಿ ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವ ತಯಾರಿ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕುಮಾರ್, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಈಗಾಗಲೇ ದಾಸ್ತಾನು ಮಾಡಲಾಗಿದ್ದು, ಮಕ್ಕಳಿಗೆ ಆಪ್ಯಾಯಮಾನವಾಗುವ ರೀತಿ ಶಾಲೆ ಆರಂಭಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಹಬ್ಬದಂತೆ ಆಚರಣೆ: ಪ್ರತಿ ವರ್ಷದಂತೆ ಈ ಬಾರಿಯೂ ಶಾಲಾ ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಹಬ್ಬದ ರೀತಿಯಲ್ಲಿ ಆಚರಿಸುವಂತೆ ಸೂಚನೆ ನೀಡಲಾಗಿದೆ. ಮೇ 30ರಂದು ಶಾಲಾ ಪ್ರಾರಂಭೋತ್ಸವದ ಸಿದ್ಧತೆ ಮಾಡಲಾಗುತ್ತದೆ.
ಶಾಲಾ ಕೊಠಡಿ ಸ್ವಚ್ಛತೆ, ಕುಡಿವ ನೀರು ಹಾಗೂ ಶೌಚಾಲಯ ಸುಸ್ಥಿತಿಯಲ್ಲಿರುವಂತೆ ವ್ಯವಸ್ಥೆಗೊಳಿಸಲಾಗುತ್ತದೆ. 31ರಂದು ಪ್ರಾರಂಭೋತ್ಸವ ನಡೆಯಲಿದ್ದು, ಹೊಸ ವಾತಾವರಣದಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಗುತ್ತದೆ ಎಂಬುದು ಅಧಿಕಾರಿಗಳ ವಿವರಣೆ.
ಶಾಲಾ ಪ್ರಾರಂಭೋತ್ಸವವನ್ನು ಎಸ್ಡಿಎಂಸಿ ಮತ್ತು ಸ್ಥಳೀಯ ಗಣ್ಯರು, ಸಾರ್ವಜನಿಕರ ಮತ್ತು ಪೋಷಕರ ಉಪಸ್ಥಿತಿಯಲ್ಲಿ ನೆರವೇರಿಸುವಂತೆಯೂ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಇದರೊಟ್ಟಿಗೆ ಮೇ 30ರಿಂದ ಜೂನ್ 8ರ ವರೆಗೆ ಮಿಂಚಿನ ಸಂಚಾರ ನಡೆಯುವುದು. ಇದರ ಪ್ರಧಾನ ಆಶಯ ಎಲ್ಲಾ ಇದರ ಪ್ರಧಾನ ಆಶಯ ಎಲ್ಲಾ ಶಾಲೆಗಳು ತೆರೆಯಲ್ಪಟ್ಟಿವೆಯೇ ಮತ್ತು ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿವೆಯೇ ಎಂಬುದನ್ನು ಅಧಿಕಾರಿಗಳು ಖಚಿತಪಡಿಸುವ ಕಾರ್ಯಕ್ರಮ. ಶಾಲೆಗೆ ಭೇಟಿ ಕೊಡುವ ಅಧಿಕಾರಿಗಳ ತಂಡ ಶಾಲಾ ವಾತಾವರಣ ಸ್ವಚ್ಛತೆ, ಶೌಚಾಲಯ ಮತ್ತು ಕುಡಿವ ನೀರು ವ್ಯವಸ್ಥೆ, ಮಧ್ಯಾಹ್ನದ ಉಪಾಹಾರ ವ್ಯವಸ್ಥೆ, ಪಠ್ಯಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರ ವಿತರಣೆ, ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿಯ ಸಮರ್ಪಕತೆಯ ಬಗ್ಗೆ ಅವಲೋಕಿಸಿ ವರದಿ ನೀಡಲಿದ್ದಾರೆ.
ಪುಸ್ತಕ, ಸಮವಸ್ತ್ರ: ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಬೇಕಾದ ಉಚಿತ ಪಠ್ಯಪುಸ್ತಕ, ಮಾರಾಟದ ಪಠ್ಯಪುಸ್ತಕಗಳ ದಾಸ್ತಾನು ಮಾಡಲಾಗಿದ್ದು, ಕೆಲವು ಪ್ರಮಾಣದ ಪುಸ್ತಕಗಳು ಶಾಲೆಗಳನ್ನೂ ತಲುಪಿವೆ.
ಬುಧವಾರದ ಮಾಹಿತಿಯಂತೆ ಜಿಲ್ಲೆಗೆ ಈ ವರೆಗೆ ಶೇ.85ರಷ್ಟು ಪಠ್ಯಪುಸ್ತಕಗಳು ಬಂದಿವೆ. 6 ಮತ್ತು 9ನೇ ತರಗತಿ ಪಠ್ಯಪುಸ್ತಕಗಳು ಬರಬೇಕಾಗಿದೆ.
ಇದರ ಜೊತೆಗೆ ವಿವಿಧ ತರಗತಿಯ ತಮಿಳು, ಉರ್ದು ಸೇರಿದಂತೆ ಭಾಷ ಪುಸ್ತಕಗಳು ಬರಬೇಕಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಎಲ್ಲಾ ತರಗತಿಗಳ ಎಲ್ಲಾ ಟೈಟಲ್ ಸೇರಿ 15,27,559 ಪುಸ್ತಗಳ ಅಗತ್ಯವಿದೆ. 1,61,612 ಸಮವಸ್ತ್ರದ ಬೇಡಿಕೆ ಇದ್ದು ಅಷ್ಟೂ ಪ್ರಮಾಣದ ಸಮವಸ್ತ್ರ ಜಿಲ್ಲೆಗೆ ಬಂದಿದೆ.
ಪಠ್ಯಪುಸ್ತಕ (ತಾಲೂಕು ವಾರು) ಬೇಡಿಕೆ, ಸರಬರಾಜು ವಿವರ
ತಾಲೂಕು ಉಚಿತ ವಿತರಣೆಗೆ ಮಾರಾಟಕ್ಕೆ ಸರಬರಾಜಾಗಿರುವುದು
ಶಿವಮೊಗ್ಗ 249273 151294 323516
ತೀರ್ಥಹಳ್ಳಿ 80306 22784 83699
ಸಾಗರ 137969 35652 125873
ಹೊಸನಗರ 86839 21561 89747
ಶಿಕಾರಿಪುರ 179895 55767 189529
ಸೊರಬ 171654 21462 142154
ಭದ್ರಾವತಿ 181262 104925 212732
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

