ಸುದ್ದಿ ಸಂಕ್ಷೇಪ
ಸಿಎನ್ನಾರ್ ರಾವ್ಗೆ ಅಭಿನಂದನೆ
ಶಿವಮೊಗ್ಗ: 1947-48ರಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾ ರ್ಥಿಯಾ ಗಿ ವ್ಯಾಸಂಗ ನಡೆಸಿದ್ದ ಖ್ಯಾತ ವಿಜ್ಞಾನಿ , ಪದ್ಮ ಶ್ರೀ, ಪದ್ಮವಿಭೂಷಣ ಹಾಗೂ ಕರ್ನಾಟಕ ರತ್ನ ಪುರಸ್ಕೃತರಾದ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಕೇಂದ್ರ ಸರ್ಕಾರ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಭಾರತರತ್ನ ಪುರಸ್ಕಾರಕ್ಕೆ ಆಯ್ಕೆಗೊಂಡಿರುವುದಕ್ಕೆ ಸಹ್ಯಾದ್ರಿ ಕಾಲೇಜು ಬಳಗ ಹರ್ಷ ವ್ಯಕ್ತಪಡಿಸಿದೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಿ.ಎನ್.ಆರ್. ರಾವ್ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ 2013-14ನೇ ಸಾಲಿನ 17ವರ್ಷ ವಯೋವುತಿಯೊಳಗಿನ ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು ನ.21ರಂದು ಬೆಳಗ್ಗೆ 8.30ಕ್ಕೆ ಶಿವಮೊಗ್ಗದ ಆದಿಚುಂಚನಗಿರಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ತಾಲೂಕು ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ನಿಗದಿಪಡಿಸಿದ ದಿನಾಂಕದಂದು ಸೂಚಿಸಿದ ಸ್ಥಳದಲ್ಲಿ ಸಕಾಲಕ್ಕೆ ಹಾಜರಿದ್ದು, ಕ್ರೀಡಾಕೂಟದ ಸಂಯೋಜಕರಲ್ಲಿ ವರದಿ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ರಿಗೆ ನ.21ರಂದು ಬೆಳ ಗ್ಗೆ 10 ಗಂಟೆಗೆ ನಗರದ ಸೆಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜಾನಪದ ಗೀತೆ, ಭಾವಗೀತೆ ಮತ್ತು ಭಕ್ತಿಗೀತೆಗಳ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಪಾಠೋಪಕರಣ ತಯಾರಿಕಾ ಸ್ಪರ್ಧೆ ಮತ್ತು ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಗಳಲ್ಲಿ ಶಿವಮೊಗ್ಗ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಭಾಗವಹಿಸಬಹುದಾಗಿದ್ದು, ಒಬ್ಬ ಶಿಕ್ಷಕರು ಒಂದು ಸ್ಪರ್ಧೆಯಲ್ಲಿ ಮಾತ್ರ ಪಾಲ್ಗೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
30ರಿಂದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ
ಭದ್ರಾವತಿ: ಚೆಸ್ ದಿನಾಚರಣೆ ಅಂಗವಾಗಿ ಭದ್ರಾವತಿ ತಾಲೂಕು ಚೆಸ್ ಸಂಸ್ಥೆ ಭದ್ರಾವತಿಯ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನ.30 ಮತ್ತು ಡಿ.1ರಂದು ಪಟ್ಟಣದಲ್ಲಿ ರಾಜ್ಯಮಟ್ಟದ ರ್ಯಾಪಿಡ್ ಚೆಸ್ ಪಂದ್ಯಾವಳಿ ನಡೆಸಲಿದೆ. 48 ವಿವಿಧ ಬಹುಮಾನಗಳನ್ನು ನೀಡಲಾಗುವುದು.
ಪಂದ್ಯಾವಳಿಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಲು ನ.29 ಕಡೆಯ
ದಿನವಾಗಿರುತ್ತದೆ. ಮಾಹಿತಿಗಾಗಿ ಎಸ್.ಜಿ. ನಾಗರಾಜ್, ಅಧ್ಯಕ್ಷರು, ಭದ್ರಾವತಿ ತಾಲೂಕು ಚೆಸ್ ಸಂಸ್ಥೆ (ಮೊ. 9986407613) ಅಥವಾ ಜೆ. ಮಂಜುನಾಥ್, ಉಪಾಧ್ಯಕ್ಷರು (ಮೊ. 9448627965) ಇವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
ತಾಂತ್ರಿಕ ಪ್ರತಿನಿಧಿಯಾಗಿ ರಾಜವೇಲು
ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕ್ರೀಡಾ ವಿಭಾಗದ ಉದ್ಯೋಗಿ ಹಾಗೂ ಖ್ಯಾತ ಹಿರಿಯ ಅಥ್ಲೀಟ್ ಎ. ರಾಜವೇಲು ಅವರನ್ನು ಭಾರತ ಅಥ್ಲೆಟಿಕ್ಸ್ ಒಕ್ಕೂಟ ನ. 26ರಿಂದ ನ.30ರವರೆಗೆ ಲಖನೌನಲ್ಲಿ ನಡೆಯಲಿರುವ 62ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2013 ಅಥ್ಲೆಟಿಕ್ಸ್ ಒಕ್ಕೂಟದಲ್ಲಿ ಒಕ್ಕೂಟದ ತಾಂತ್ರಿಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲು ಆಮಂತ್ರಿಸಿದೆ.
ರಾಜವೇಲು ಅವರು ನ.22ರಂದು ಲಖನೌಗೆ ತೆರಳಲಿದ್ದಾರೆ ಹಾಗೂ ಅಲ್ಲಿ ನ.25ರಂದು ನಡೆಯುವ ತಂಡಗಳ ವ್ಯವಸ್ಥಾಪಕರ ತಾಂತ್ರಿಕ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಕೂಟದಲ್ಲಿ ತಾಂತ್ರಿಕ ವ್ಯವಸ್ಥೆಗಳನ್ನು ಅವರು ಗಮನಿಸಲಿದ್ದಾರೆ.
ಸಂಭ್ರಮದ ಕಾರ್ತಿಕ ಹುಣ್ಣಿಮೆ ಆಚರಣೆ
ಸೊರಬ: ಇತಿಹಾಸ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ಕಾರ್ತಿಕ ಮಾಸದ ಹುಣ್ಣಿಮೆ ಪ್ರಯುಕ್ತ ರೇಣುಕಾಂಬೆಯ ದರ್ಶನಕ್ಕೆ ಸಾವಿರಾರು ಭಕ್ತರು ಪೂಜೆ, ಹರಕೆ ಸಲ್ಲಿಸಿದರು. ದಾವಣಗೆರೆ, ಹಾವೇರಿ, ಬಳ್ಳಾರಿ, ಕಾರವಾರ, ಬಿಜಾಪುರ, ರಾಣೆಬೆನ್ನೂರು ಜಿಲ್ಲೆಗಳಿಂದ ಅಗಮಿಸಿದ ಸಾವಿರಾರು ಭಕ್ತರು ರೇಣುಕಾಂಬ ದೇವಿ ನಿನ್ನಾಲ್ಕುದೋ ಉದೋ.. ಉದೋ.. ಚಂದ್ರಗುತ್ಯಮ್ಮ ನಿನ್ನಾಲ್ಕುದೋ.. ಉದೋ.. ಎಂದು ಬೋಪರಾಕ್ ಹೇಳುತ್ತಾ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದರು. ವಿಧಿವಿಧಾನಗಳಾದ ಪಡ್ಲಿಗೆ ತುಂಬಿಸುವುದು ದೀಡ್ ನಮಸ್ಕಾರ ಮುತ್ತು ಕಟ್ಟಿಸುವುದು, ಮುಡಿ ನೀಡುವುದು, ಕಿವಿ ಚುಚ್ಚಿಸುವುದು, ಮುಂತಾದವುಗಳನ್ನು ಆಚರಿಸಿ ನೈವೇದ್ಯಕ್ಕಾಗಿ ಸ್ಥಳದಲ್ಲಿಯೇ ಒಲೆ ಹೂಡಿ ಕರಿದ ಹೋಳಿಗೆ, ರೊಟ್ಟಿ, ಬುತ್ತಿ ತಯಾರಿಸಿ ರೇಣುಕಾಂಬೆಗೆ ಅರ್ಪಿಸಿ, ಭೋಜನ ಸವಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

