ಶಿವಮೊಗ್ಗ

ಗೋಮಾಳ ಅತಿಕ್ರಮಣ ತಡೆಯಿರಿ

Published On :

ಕ.ಪ್ರ.ವಾರ್ತೆ, ಸಾಗರ, ನ. 28
ಪಟ್ಟಣ ಸಮೀಪದ ವಡ್ನಾಲ- ಜಂಬಗಾರು ಗ್ರಾಮದ ಸರ್ವೆ ನಂ.15ರಲ್ಲಿರುವ ಗೋಮಾಳ ಜಾಗ ಅತಿಕ್ರಮಣ ತಡೆಯಬೇಕು ಹಾಗೂ ಈ ಭಾಗದಲ್ಲಿ ನೀಡಿರುವ ನಕಲಿ ಆಶ್ರಯ ಪತ್ರಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಗುರುವಾರ ಗ್ರಾಮಸ್ಥರು ನಗರಸಭೆ ಪೌರಾಯುಕ್ತರಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸರ್ವೆ 15ರಲ್ಲಿರುವ ಜಮೀನನ್ನು ಸುಮಾರು 60 ವರ್ಷಗಳಿಂದ ಊರಿನ ಜಾನುವಾರುಗಳನ್ನು ಮೇಯಿಸಲು ಸಂರಕ್ಷಿಸಿಕೊಂಡು ಬಂದಿದ್ದೇವೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ಜಾನುವಾರುಗಳಿದ್ದು, ಗೋಮಾಳದ ಈ ಜಾಗ ಹೊರತುಪಡಿಸಿದರೆ ಬೇರೆ ಕಡೆ ಜಾನುವಾರು ಮೇಯಲು ಸ್ಥಳ ಇಲ್ಲವಾಗಿದೆ. ಇಲ್ಲಿ 173 ಎಕರೆ ಜಾಗವಿದ್ದು, ಅದನ್ನು ಈಗಾಗಲೆ ಬೇರೆ- ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಹಸಿರೀಕರಣ: ಇಲ್ಲಿ ಉಳಿದಿರುವುದು ಕೇವಲ 15 ಎಕರೆ ಜಾಗ ಮಾತ್ರ. ಆ ಜಾಗದಲ್ಲಿ ಸ್ಥಳೀಯ ಗ್ರಾಪಂ ವತಿಯಿಂದ ಈಗಾಗಲೆ 7 ಎಕರೆ ಪ್ರದೇಶದಲ್ಲಿ ಹಸಿರೀಕರಣ ನಡೆದಿದ್ದು, ಗ್ರಾಮಸ್ಥರು 5 ಎಕರೆ ಜಾಗದಲ್ಲಿ ಹಸಿರೀಕರಣ ಮಾಡುವ ಮೂಲಕ ಗೋಮಾಳ ರಕ್ಷಣೆ ಮಾಡಲು ಗಿಡ ನೆಡುವ ಉದ್ದೇಶದಿಂದ ಗುಂಡಿ ತೋಡಿದ್ದಾರೆ. ಉಳಿದ ಜಾಗವನ್ನು ಶಾಲೆಗೆ ಗ್ರಾಮಸ್ಥರು ಬಿಟ್ಟುಕೊಟ್ಟಿರುತ್ತಾರೆ. ಆದರೆ, ನಗರಸಭೆ ಸದಸ್ಯರೊಬ್ಬರು ತಮ್ಮ ಬೆಂಬಲಿಗರೊಂದಿಗೆ ಈ ಜಾಗ ಅತಿಕ್ರಮಣಕ್ಕೆ ಮುಂದಾಗಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ರಾಜಶೇಖರ ಗಾಳಿಪುರ, ಗ್ರಾಪಂ ಸದಸ್ಯರಾದ ಮಂಜಪ್ಪ, ಮಾಜಿ ಸದಸ್ಯರಾದ ಹೊಯ್ಸಳ, ಸುಬ್ಬಮ್ಮ, ಸರೋಜಮ್ಮ, ಪ್ರಮುಖರಾದ ಚಂದ್ರಪ್ಪ ವಡ್ನಾಲ, ಲಕ್ಷ್ಮಣ, ಶಿವರಾಮ, ಸುರೇಶ್, ಹೊಳೆಯಪ್ಪ, ಎಂ.ನಾರಾಯಣಪ್ಪ, ರಾಮಪ್ಪ, ಧರ್ಮಪ್ಪ ಹಾಜರಿದ್ದರು.


ಅತಿಕ್ರಮಣ: ಕ್ರಮಕ್ಕೆ ಆಗ್ರಹ
ಗೋಮಾಳ ಪ್ರದೇಶದಲ್ಲಿ ರಾತ್ರೋರಾತ್ರಿ ಬೇಲಿ ನಿರ್ಮಾಣ ಮಾಡುವುದು, ಶೆಡ್ ರಚಿಸಿ ಜಾಗ ಅತಿಕ್ರಮಿಸುವುದು ಇನ್ನಿತರ ಕೆಲಸ ನಡೆಯುತ್ತಿದೆ. ಆಶ್ರಯ ನಿವೇಶನಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸುವ ಸಂಚು ರೂಪಿಸಿದ್ದಾರೆ. ಈ ರೀತಿ ಮುಂದುವರಿದರೆ ಗ್ರಾಮದ ಜಾನುವಾರುಗಳು ಮೇಯಲು ಜಾಗವೆ ಇಲ್ಲದಂತೆ ಆಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಈ ಹಿಂದೆ ಕೂಡ ಅಕ್ರಮ ಒತ್ತುವರಿದಾರರು ಮಾರಕಾಸ್ತ್ರಗಳೊಂದಿಗೆ ಜನರನ್ನು ಕರೆದುಕೊಂಡು ಬಂದು ಈ ಜಾಗ ಒತ್ತುವರಿ ಮಾಡಲು ಪ್ರಯತ್ನಿಸಿದಾಗ ಗ್ರಾಮಸ್ಥರು ಹಾಗೂ ಒತ್ತುವರಿದಾರರ ನಡುವೆ ಜಗಳ ನಡೆದು ಪ್ರಕರಣ ಸಹ ದಾಖಲಾಗಿದೆ. ಮುಂದೆ ಹೆಚ್ಚಿನ ಅನಾಹುತ ನಡೆಯದಂತೆ ತಕ್ಷಣ ಈ ಜಾಗ ಗೋಮಾಳ ಪ್ರದೇಶವಾಗಿ ಉಳಿಸಿಕೊಳ್ಳಬೇಕು ಹಾಗೂ ಅಕ್ರಮ ಒತ್ತುವರಿ ಮಾಡಲು ಪ್ರಯತ್ನಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.