ಶಿವಮೊಗ್ಗ

ರಾಮದೇವರ ವಿಶೇಷ ಪರಿಸೆ

Published On :

ಸೊರಬ: ಕಾರ್ತಿಕ ಮಾಸದ ಅಂಗವಾಗಿ ಕಳೆದೊಂದು ವಾರದಿಂದ ನಾಡವಾಡ ದೊಡ್ಡೇರಿಯಲ್ಲಿ ನಡೆಯುತ್ತಿದ್ದ ರಾಮದೇವರ ವಿಶೇಷ ಪರಿಸೆ ಶನಿವಾರ ಮುಕ್ತಾಯಗೊಂಡಿತು. ಸುಮಾರು 60 ವರ್ಷಗಳ ಇತಿಹಾಸ ಹೊಂದಿರುವ ಈ ಪರಿಸೆಯು ಶನಿವಾರ ಆಂಜನೇಯ ದೇಗುಲದಿಂದ ಆರಂಭಗೊಂಡಿತು. ಪರಿಸೆಯ ಅಂಗವಾಗಿ, ರಾಮದೇವರ  ಉತ್ಸವ, ಭಜನೆ ಮುಂತಾದ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಗಿತ್ತು.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಒಂದು ವಾರದ ಕಾಲ ರಾಮದೇವರ ಪಲ್ಲಕ್ಕಿಯೊಂದಿಗೆ ಭಜನಾ ತಂಡ ಗ್ರಾಮದ ಎಲ್ಲ ಜಾತಿ ವರ್ಗದ ಮನೆಮನೆಗಳಿಗೆ ದಿನಂಪ್ರತಿ ತೆರಳಿ ದೀಪ ಬೆಳಗಿಸುವ ಪದ್ಧತಿ ಬೆಳೆಸಿ, ಉಳಿಸಿಕೊಂಡು ಬಂದಿದೆ. ಅಂತಿಮ ದಿನ ಪೂಜೆ ಮುಗಿಯುವ ತನಕ ಇಲ್ಲಿನವರು ಉಪವಾಸವಿದ್ದು, ಜನಪದ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಹೋರಾತ್ರಿ ಭಜನೆ, ಪೂಜೆಯಲ್ಲಿ ಬೆರೆತುಕೊಳ್ಳುತ್ತಾರೆ.
ಮಾರನೇ ದಿನ ಮಧ್ಯಾಹ್ನದ ವೇಳೆ ಸಾರ್ವಜನಿಕ ಪ್ರಸಾದ ವಿತರಣೆ ಮೂಲಕ ಮುಕ್ತಾಯಗೊಳಿಸುತ್ತಾರೆ.  ಆಚರಣೆಯ ಒಂದು ವಾರ ಕಾಲ ಗ್ರಾಮದ ಬೀದಿಬೀದಿಯಲ್ಲಿ ಹಸಿರು ತಳಿರು ತೋರಣ,  ಮನೆಗಳ ಎದುರು ರಂಗೋಲಿ ಬರೆದು ಹಬ್ಬಕ್ಕೆ ಮೆರುಗು ನೀಡುವ ಇಲ್ಲಿನ ಜನ ಇಡೀ ವಾರ ಮೀನು, ಮಾಂಸ, ಹೆಂಡವನ್ನು ಸೇವಿಸುವುದಿಲ್ಲ. ಈ ವೇಳೆಯಲ್ಲದೆ ಇಲ್ಲಿ ವರ್ಷಾವಧಿ ಪ್ರತಿ ಶನಿವಾರ ರಾಮದೇವರ ಪಲ್ಲಕ್ಕಿ ಉತ್ಸವ ಮನೆಮನೆಗೆ ತೆರಳುತ್ತದೆ, ಗ್ರಾಮದ ಸಮಸ್ಯೆಗಳಿಗೆ, ವೈಯುಕ್ತಿಕ ಕೋರಿಕೆಗೆ ಪ್ರಸಾದ ಕಟ್ಟಿಸುವ ಇಲ್ಲಿನವರಿಗೆ ರಾಮ ಆರಾಧ್ಯದೈವವಾಗಿದ್ದಾನೆ. ರಾಮನ ಆರಾಧನೆ ಮೂಲಕ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸಕ್ತ ಸಾಲಿನ ಉತ್ಸವದಲ್ಲಿ ದೇಗುಲ ಸಮಿತಿ ಅಧ್ಯಕ್ಷ ವೈ.ಆರ್. ರಾಜು ನಾಡಿಗ್, ಕಾರ್ಯದರ್ಶಿ ಡಿ.ಕೆ. ರಾಜಾರಾಂ, ಖಜಾಂಚಿ ಹೆಚ್. ನಾಗರಾಜ್, ಗ್ರಾಮ ಸಮಿತಿ ಅಧ್ಯಕ್ಷ ಡಿ.ದುರ್ಗಪ್ಪ, ಕಡ್ಲೆ ವೀರಭದ್ರಪ್ಪ, ಮಂಜಪ್ಪ, ಮಾದೇವ, ಅರ್ಚಕ ಗಣಪತಿಯಪ್ಪ,  ಗ್ರಾಮದ ಶ್ರೀ ರಾಮ ಡೊಳ್ಳಿನ ಸಂಘದವರು, ಭಜನಾ ತಂಡದವರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.