ಶಿವಮೊಗ್ಗ

ಇಂದು ಪ್ರಸನ್ನ ಉಪವಾಸ ಅಂತ್ಯ

Published On :

ಕ.ಪ್ರ.ವಾರ್ತೆ ,  ಸಾಗರ ,  ಫೆ.1
ಪಾರಂಪರಿಕ ಕೈಮಗ್ಗ ಕ್ಷೇತ್ರದಲ್ಲಿ ವಿದ್ಯುತ್ ಮಗ್ಗಗಳಿಗೆ ಸಹಾಯಧನ ನೀಡಬಾರದು ಎನ್ನುವ ಪ್ರಮುಖ ಬೇಡಿಕೆ ಬಗ್ಗೆ ರಾಜ್ಯ ಸರ್ಕಾರದ ಜವಳಿ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹೆಗ್ಗೋಡಿನ ಚರಕ ಸಂಸ್ಥೆಯ ರೂವಾರಿ ಪ್ರಸನ್ನ ಭಾನುವಾರ ಬೆಳಗ್ಗೆ ತಮ್ಮ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲಿದ್ದಾರೆ.
ಈ ಸಂಬಂಧ ಜವಳಿ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಶನಿವಾರ ಸಂಜೆ ಪ್ರಸನ್ನ ಉಪವಾಸ ಕುಳಿತಿರುವ ಹೊನ್ನೇಸರದ ಶ್ರಮಜೀವಿ ಆಶ್ರಮಕ್ಕೆ ಭೇಟಿ ನೀಡಿ ಸರ್ಕಾರದ ಲಿಖಿತ ಹೇಳಿಕೆಯನ್ನು ಪ್ರಸನ್ನ ಅವರಿಗೆ ತಲುಪಿಸಿದ್ದಾರೆ.
ಲಿಖಿತ ಭರವಸೆ: ವಿದ್ಯುತ್ ಮಗ್ಗಗಳಿಗೆ ಸಹಾಯಧನ ನಿಲ್ಲಿಸುವ ಜೊತೆಗೆ ಉಳಿದ ಬೇಡಿಕೆಗಯನ್ನು ಪರಸ್ಪರ ಮಾತುಕತೆ  ಮೂಲಕ ಪರಿಹರಿಸಿಕೊಳ್ಳುವ ಹೇಳಿಕೆ ನೀಡಿದ್ದಾರೆ. ಕೈಮಗ್ಗ ನೇಕಾರಿಕೆಯನ್ನು ಉಳಿಸಲು ಅಗತ್ಯವಾದ ಕಾನೂನು ತಿದ್ದುಪಡಿ ತರಲು ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಸುವ ಭರವಸೆಯನ್ನೂ ಲಿಖಿತವಾಗಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪಾರಂಪರಿಕ ಕೈಮಗ್ಗ ನೇಕಾರಿಕೆ ಉಳಿಸಲು ಪ್ರಸನ್ನ ಅವರು ಕಳೆದ 3 ದಿನಗಳಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಭಾನುವಾರ ಮುಕ್ತಾಯಗೊಳಿಸಲಿದ್ದಾರೆ.
ಕೈಮಗ್ಗ ನೇಕಾರಿಕೆಯನ್ನು ಉಳಿಸಬೇಕು ಎಂದು ಹಠತೊಟ್ಟು ಪ್ರಸನ್ನ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಮೂರನೇ ದಿನವಾದ ಶನಿವಾರವೂ ಮುಂದುವರೆದಿತ್ತು.
ದಸ್ತಕರ್ ಆಂಧ್ರ ಸಂಸ್ಥೆಯ ಸೌಮಿತ್ರಿ, ಆಂಧ್ರದ ಕೆರೂರಿನ ನೇಕಾರರು, ರಾಣಿಬೆನ್ನೂರು ಸಮೀಪದ ದುಂಬಿನಕಟ್ಟೆ ನೇಕಾರರು ಶನಿವಾರ ಸತ್ಯಾಗ್ರಹದಲ್ಲಿ ಭಾಗವಹಿಸಿ ಪ್ರಸನ್ನ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಸ್ಥಳೀಯ ಚರಕ ಸಂಸ್ಥೆಯ ಕಾರ್ಯಕರ್ತರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಕಾಗೋಡು ಭೇಟಿ: ಶುಕ್ರವಾರ ಸಂಜೆ ಪ್ರಸನ್ನ ಸತ್ಯಾಗ್ರಹ ನಡೆಸುತ್ತಿರುವ ಶ್ರಮಜೀವಿ ಆಶ್ರಮಕ್ಕೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಭೇಟಿ ನೀಡಿ, ಪ್ರಸನ್ನ ಅವರಿಗೆ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದರು.
ಶೀಘ್ರವೇ ರಾಜ್ಯದ ಮುಖ್ಯಮಂತ್ರಿ ಹಾಗೂ ಜವಳಿ ಸಚಿವರೊಂದಿಗೆ ಭೇಟಿಗೆ ದಿನಾಂಕ ನಿಗದಿಮಾಡಿ ನೇಕಾರರ ಸಮಸ್ಯೆ ಬಗ್ಗೆ ಚರ್ಚಿಸಲು ಏರ್ಪಾಡು ಮಾಡುವುದಾಗಿ ಕಾಗೋಡು ಹೇಳಿದರು.
ಆರೋಗ್ಯದ ದೃಷ್ಟಿಯಿಂದ ಉಪವಾಸ ಮುಂದುವರೆಸುವುದು ಸರಿಯಲ್ಲ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಮನವಿ ಮಾಡಿದ್ದರು.
ಆದರೆ ಪ್ರಸನ್ನ ಅವರು ಪಾರಂಪರಿಕ ಕೈಮಗ್ಗ ನೇಕಾರಿಕಾ ಕ್ಷೇತ್ರದಲ್ಲಿ ವಿದ್ಯುತ್ ಮಗ್ಗಗಳಿಗೆ ಸಹಾಯಧನ ನೀಡಬಾರದು ಎನ್ನುವ ಪ್ರಮುಖ ಬೇಡಿಕೆ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಘೋಷಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಹೇಳಿದ್ದರು.
ಸರ್ಕಾರ ಕಾನೂನಿಗೆ ಯಾವುದೇ ತಿದ್ದುಪಡಿ ತರಬೇಕಾದ ಅವಶ್ಯಕತೆ ಇಲ್ಲ. ಇರುವ ಕಾನೂನನ್ನು ಸರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಈ ಬಗ್ಗೆ ಲಿಖಿತವಾಗಿ ಭರವಸೆ ನೀಡಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.