ಸುದ್ದಿ ಸಂಕ್ಷೇಪ
26ರಂದು ನಗರಕ್ಕೆ
ರಾಜನಾಥಸಿಂಗ್
ಶಿವಮೊಗ್ಗ: ಚುನಾವಣೆ ಘೋಷಣೆಗೆ ಮುನ್ನವೇ ಬಿಜೆಪಿಯು ಬಿರುಸಿನ ಪ್ರಚಾರಕ್ಕೆ ಚಾಲನೆ ನೀಡಿದೆ. ಒಂದೆಡೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಈಗ ಸ್ವತಹ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ಫೆ.26 ರಂದು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಭಾರಿ ಬಲಪ್ರದರ್ಶಕ್ಕೆ ಬಿಜೆಪಿ ಮುಂದಾಗಿದೆ. ರಾಜನಾಥಸಿಂಗ್ ಭಾಗವಹಿಸಲಿರುವ ಬೃಹತ್ ಸಮಾವೇಶದ ಅಂಗವಾಗಿ ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆ ಆಯೋಜಿಸಿದ್ದು, ಉದ್ಘಾಟಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಲೋಕಸಭೆ ಚುನಾವಣೆ ಈ ಬಾರಿ ವಿಶೇಷವಾಗಿದೆ ಎಂದರು.
ನಾಳೆ ಅಂತರ್ಜಲ
ಜನಜಾಗೃತಿ ಶಿಬಿರ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಶ್ರಯದಲ್ಲಿ ಫೆ.17ರಂದು ಬೆಳಿಗ್ಗೆ 11 ಗಂಟೆಗೆ ಸೊರಬ ಪಟ್ಟಣದ ಗುರುಭವನದಲ್ಲಿ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ, ನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಜನಜಾಗೃತಿ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಉದ್ಘಾಟಿಸುವರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜನ ಅಂತರ್ಜಲ ಕೈಪಿಡಿ ಬಿಡುಗಡೆ ಮಾಡುವರು. ಶಾಸಕ ಮಧು ಬಂಗಾರಪ್ಪ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ರವಿಕುಮಾರ್ ಆರ್. ಹಾಗೂ ಚಿತ್ರದುರ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಸಾಯನಿಕ ತಜ್ಞ ಪ್ರೇಮಚಂದ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿಶೇಷ ಉಪನ್ಯಾಸ ನೀಡುವರು.
ಸಾಂಸ್ಕೃತಿಕ ಭವನಕ್ಕೆ ಜಿಎಸ್ಸೆಸ್ ಹೆಸರು
ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿಕಾರಿಪುರದಲ್ಲಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಸಾಂಸ್ಕೃತಿಕ ಭವನ ಎಂದು ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕುಮಾರ ಬೆಕ್ಕೇರಿ ತಿಳಿಸಿದ್ದಾರೆ.
ತಳಮಟ್ಟದ ಜನರಿಗೆ ಸೌಲಭ್ಯ ತಲುಪಿಸಿ: ಕಾಗೋಡು ತಿಮ್ಮಪ್ಪ
ಸಾಗರ: ತಳಮಟ್ಟದ ಸಮುದಾಯದ ಜನರಿಗೆ ಸೌಲಭ್ಯ ತಲುಪಿಸುವ ಮಹತ್ತರವಾದ ಜವಾಬ್ದಾರಿ ಗ್ರಾಮ ಪಂಚಾಯ್ತಿ ಮೇಲಿದ್ದು, ಸ್ಥಳೀಯ ಆಡಳಿತ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕಿನ ಭೀಮನೇರಿ ಗ್ರಾಮದಲ್ಲಿ 13.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಪಂಚಾಯ್ತಿ ಕಟ್ಟಡವನ್ನು ಉದ್ಘಾಟಿಸಿ, ಭೀಮನೇರಿ ಹಾಗೂ ಶಿರವಾಳ ಗ್ರಾಮದ ಸುವರ್ಣ ಗ್ರಾಮ ಯೋಜನೆಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶರಾವತಿ ಹಿನ್ನೀರಿನಿಂದ ಸಾಗರ ಪಟ್ಟಣಕ್ಕೆ ತರುವ ನೀರನ್ನು ಸೂರನಗದ್ದೆ ಗ್ರಾಮಕ್ಕೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಈ ಭಾಗದಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಸಹಕಾರಿಯಾಗುವ ರೀತಿಯಲ್ಲಿ ಕೈಮಗ್ಗವನ್ನು ಸ್ಥಾಪಿಸಲು ಮುಂದೆ ಬಂದರೆ ಅಂತಹವರಿಗೆ ಎಲ್ಲ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಭೀಮನೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ತುಕಾರಾಮ ಮಾತನಾಡಿದರು.
ತಾಪಂ ಅಧ್ಯಕ್ಷ ಹರೀಶ್ ಗಂಟೆ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯೆ ಪಾರ್ವತಿ ಈಶ್ವರ್, ಜಿಪಂ ಸದಸ್ಯೆ ಸುಮಂಗಲ ರಾಮಕೃಷ್ಣ, ಗ್ರಾಪಂ ಉಪಾಧ್ಯಕ್ಷ ಮೇಘರಾಜ್, ಸದಸ್ಯರಾದ ರಾಮಚಂದ್ರ ಎಚ್.ಎನ್., ಗಲ್ಲಿ ವೆಂಕಟೇಶ್, ಮಂಜಮ್ಮ, ರೂಪ, ರೇಣುಕಾ, ಗೌರಮ್ಮ, ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ. ವೆಂಕಟೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

