ಮೂವರೊಳಗೆ ಹಿತವರ್ಯಾರು?
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಲೋಕಸಭೆ ಚುನಾವಣೆ ಸದ್ಯವೇ ಘೋಷಣೆಯಾಗಬಹುದು. ಯಾವತ್ತಿನಂತೆ ಚುನಾವಣೆ ವೇಳೆ ಅಭ್ಯರ್ಥಿಯ ಘೋಷಣೆ ಮಾಡುವ ಬದಲು ಕಾಂಗ್ರೆಸ್ ಪಕ್ಷವು ಈ ಬಾರಿ ಜನವರಿ ಮೊದಲ ವಾರದಲ್ಲಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿರುವುದರಿಂದ ಇತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು, ವರಿಷ್ಠರ ಗಮನ ಸೆಳೆಯಲು ಆಕಾಂಕ್ಷಿಗಳ ಪೈಪೋಟಿ ಆರಂಭವಾಗಿದ್ದು, ಅಭ್ಯರ್ಥಿ ಯಾರೆಂಬ ಚರ್ಚೆ ಶುರುವಾಗಿದೆ.
ಸ್ವಾತಂತ್ರ್ಯಾ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಬಿಜೆಪಿ, ಒಮ್ಮೆ ಸಮಾಜವಾದಿ ಪಕ್ಷಕ್ಕೆ ಕ್ಷೇತ್ರ ಹೋಗಿದ್ದು ಬಿಟ್ಟರೆ ಉಳಿದೆಲ್ಲಾ ಸಂದರ್ಭದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಇತಿಹಾಸ ಕಾಂಗ್ರೆಸ್ ಪರವಾಗಿದ್ದರೂ ವಾಸ್ತವದ ಸ್ಥಿತಿ ಹಾಗಿಲ್ಲ. ಹಾಗಾಗಿ ಸಮರ್ಥ ಅಭ್ಯರ್ಥಿಯ ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷ ಹೆಣಗುತ್ತಿದೆ.
ಸಂಭವನೀಯರು: ಈ ನಡುವೆ ಜಿಲ್ಲಾ ಕಾಂಗ್ರೆಸ್ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್. ಸುಂದರೇಶ್, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಅವರ ಹೆಸರನ್ನು ಶಿಫಾರಸು ಮಾಡಿದೆ. ಇವರ ಜತೆಗೆ ಮಲ್ಲೇಶ್ ಹುಲ್ಲಮನಿ ಅವರ ಹೆಸರೂ ಸಹ ತೇಲಿ ಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗ ಬಿಜೆಪಿಗೆ ವಾಪಸಾಗಿರುವುದರಿಂದ ಕಾಂಗ್ರೆಸ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದೆ. ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅಥವಾ ಯಡಿಯೂರಪ್ಪ ಅವರೇ ಸ್ಪರ್ಧಿಯಾಗಬಹುದು. ಇತ್ತ ಜೆಡಿಎಸ್ ಸಹ ಪ್ರಭಲವಾಗಿ ಬೆಳೆದಿದ್ದು ಬಂಗಾರಪ್ಪ ಅವರ ಕುಟುಂಬದ ಯಾರಾದರೊಬ್ಬರು ಚುನಾವಣೆಗೆ ನಿಲ್ಲಬಹುದು. ಹಾಗಾಗಿ ಅಭ್ಯರ್ಥಿ ಆಯ್ಕೆಯಲ್ಲಿ ಸಂಪೂರ್ಣ ಎಚ್ಚರ ವಹಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.
ಮುಖಂಡರ ಹಣಾಹಣಿ: ಕುಮಾರ್ ಬಂಗಾರಪ್ಪ ಅವರ ಹೆಸರು ಚಿರಪರಿಚಿತ. ಬಂಗಾರಪ್ಪ ಅವರ ಪುತ್ರ, ಚಲನಚಿತ್ರ ನಟರಾಗಿ ಜನಪ್ರಿಯರಾಗಿದ್ದವರು. ಆದರೆ ಶಾಸಕರಾಗಿದ್ದಾಗ, ಸಚಿವರಾಗಿದ್ದಾಗ ಮಾತ್ರ ಇವರು ಜನರ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು. ಅದೂ ಬಹುತೇಕ ಸೊರಬ ಕ್ಷೇತ್ರದಲ್ಲಿ ಮಾತ್ರ. ನಂತರ ಅವರು ಪಕ್ಷದ ಕಾರ್ಯಕರ್ತರೊಂದಿಗೂ ಸಹ ಸಂಪರ್ಕ ಉಳಿಸಿಕೊಳ್ಳಲಿಲ್ಲ ಎಂಬ ಟೀಕೆಗಳು ಅವರ ವಿರುದ್ಧ ಇವೆ. ಅಲ್ಲದೇ ಜೆಡಿಎಸ್ನಿಂದ ಬಂಗಾರಪ್ಪ ಅವರ ಕುಟುಂಬದವರೇ ಕಣಕ್ಕಿಳಿದರೆ ಈಡಿಗರ ಮತ ವಿಭಜನೆಯಾಗುವ ಆತಂಕ ಕಾಂಗ್ರೆಸ್ಗೂ ಇದೆ. ಇನ್ನು ಮಂಜುನಾಥ ಭಂಡಾರಿ ಅವರ ಸಂಪರ್ಕ ರಾಜ್ಯ ಹಾಗೂ ರಾಷ್ಟ್ರ ರಾಜಧಾನಿ ಮಟ್ಟದಲ್ಲಿಯೇ ಹೊರತು ಬೇರುಮಟ್ಟದಲ್ಲಿ ಇಲ್ಲ. ಸಾರ್ವಜನಿಕರ ಜತೆಗಿರಲಿ, ಪಕ್ಷದ ಕಾರ್ಯಕರ್ತರೊಂದಿಗೂ ಸಹ ಸಂಪರ್ಕ ಕಡಿಮೆಯೇ. ಜಿಲ್ಲೆಗಿಂತ ಬೆಂಗಳೂರು, ದೆಹಲಿಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆಂಬ ಟೀಕೆಗಳಿವೆ. ಅಲ್ಲದೇ, ಇವರದೇ ಸಮುದಾಯದ ಜಯಪ್ರಕಾಶ ಹೆಗ್ಡೆ ಅವರು ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಹಾಲಿ ಸಂಸದರಾಗಿರುವುದರಿಂದ ಜಾತಿ ಲೆಕ್ಕಚಾರದಲ್ಲಿ ಭಂಡಾರಿ ಹಿಂದೆ ಬೀಳಬಹುದು. ಡಾ. ಮಲ್ಲೇಶ್ ಹುಲ್ಲಮನಿ ಅವರು ಖ್ಯಾತ ವೈದ್ಯರಾಗಿದ್ದರೂ ಪಕ್ಷದ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿಲ್ಲ.
ಈ ವಿಶ್ಲೇಷಣೆಯ ನಡುವೆ ಎದ್ದು ಕಾಣುವುದು ಎಚ್.ಎಸ್. ಸುಂದರೇಶ್. ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದಿರುವ ಇವರ ಜತೆಗೆ ಇನ್ನುಳಿದ ಮೂವರಿಗಿಂತ ಹೆಚ್ಚು ಕಾರ್ಯಕರ್ತರು ಇದ್ದಾರೆ. ಹಲವು ಚುನಾವಣೆಗಳಲ್ಲಿ ವೀಕ್ಷಕರಾಗಿ ಕೆಲಸ ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಸುಂದರೇಶ್ ಅವರು ಕಣಕ್ಕಿಳಿದರೆ ಜೆಡಿಎಸ್, ಬಿಜೆಪಿಗೆ ಪೈಪೋಟಿ ಕೊಡಬಹುದೆಂಬ ನಿರೀಕ್ಷೆ ಕಾರ್ಯಕರ್ತರದು. ಒಕ್ಕಲಿಗ ಸಮುದಾಯದವರನ್ನೇ ಕಣಕ್ಕಿಳಿಸಲು ನಿರ್ಧರಿಸಿದರೆ ಕಾಂಗ್ರೆಸ್ ಪಕ್ಷದ ಮೊದಲ ಆಯ್ಕೆ ಸಚಿವ ಕಿಮ್ಮನೆ ರತ್ನಾಕರ್ ಅವರಾಗಬಹುದು. ಆದರೆ ಅವರು ರಾಷ್ಟ್ರ ರಾಜಕಾರಣದತ್ತ ಹೋಗಲು ಆಸಕ್ತರಾಗಿಲ್ಲ.
ಅಂತಿಮವಾಗಿ ಜಾತಿ ಲೆಕ್ಕಚಾರವೇ ಮಾನದಂಡವಾಗುವ ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಕೊನೆಯ ಕ್ಷಣದವರೆಗೂ ಅಭ್ಯರ್ಥಿ ಯಾರೆಂದು ಹೇಳುವುದು ಅಸಾಧ್ಯ. ಈ ನಡುವೆ ಜನರ ನಡುವೆ ಚರ್ಚೆಯಂತೂ ಸಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

