'ಕ್ರಿಯಾ ಯೋಜನೆ' ವಾಪಸ್ ಪಡೆಯಲಿ'
ಶಿವಮೊಗ್ಗ: ನಗರೋತ್ಥಾನ ಯೋಜನೆ ಅಡಿ ಶಿವಮೊಗ್ಗ ನಗರಕ್ಕೆ 100 ಕೋಟಿ ರು. ಅನುದಾನ ಬಂದಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದ್ದಾರೆ. ಇದನ್ನು ಯಾರು, ಎಲ್ಲಿ, ಹೇಗೆ ಸಿದ್ಧಪಡಿಸಿದರು, ಇದಕ್ಕೆ ಕಾನೂನಿನ ಸಮ್ಮತಿ ಇದೆಯೇ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ.
ನಗರೋತ್ಥಾನ ಯೋಜನೆ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಜಿಲ್ಲಾಧಿಕಾರಿಯವರು ಇದಕ್ಕೆ ಕಾರ್ಯದರ್ಶಿಯಾಗಿರುತ್ತಾರೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಇದಕ್ಕೆ ಸದಸ್ಯರಾಗಿರುತ್ತಾರೆ. ಅದರೆ ಯಾರನ್ನೂ ಕರೆಯದೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಹಾಗಾಗಿ ಇದನ್ನು ವಾಪಸ್ ಪಡೆಯಬೇಕು. ನಿಯಮ ಪ್ರಕಾರ ಸಭೆ ಕರೆದು ಮತ್ತೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿಸಿ ತಪ್ಪಿತಸ್ಥರು: ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಸಚಿವರು, ಶಾಸಕರು, ಡಿಸಿ ಸೇರಿಕೊಂಡು, ಬಾಗಿಲು ಹಾಕಿಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಿ ಶಿಫಾರಸು ಮಾಡಲು ಬರುವುದಿಲ್ಲ. ಹೀಗೆ ಮಾಡಿದರೆ ಜಿಲ್ಲಾಧಿಕಾರಿಯೇ ತಪ್ಪಿತಸ್ಥರಾಗಿರುತ್ತಾರೆ ಎಂದರು.
ಶಾಸಕ ಪ್ರಸನ್ನ ಕುಮಾರ್ ಅವರು ಬೇರೆಯವರಿಗೆ ಸಂವಿಧಾನಬದ್ಧವಾಗಿ ಇರುವ ಹಕ್ಕು, ಅಧಿಕಾರದ ಬಗ್ಗೆ ಗೌರವ ಹೊಂದಿರಬೇಕು. ಕ್ರಿಯಾಯೋಜನೆ ಕುರಿತು ನಡೆದಿದ್ದ ಸಭೆ ಅನಧಿಕೃತ. ಇದನ್ನು ರದ್ದುಪಡಿಸಬೇಕು ಎಂದಿದ್ದಾರೆ.
ಶಿವಮೊಗ್ಗ ನಗರಸಭೆಯು ನಗರಪಾಲಿಕೆ ಆದ ನಂತರ 100 ಕೋಟಿ ರು. ಅನುದಾನ ಬಿಡುಗಡೆ ಆಗಿರುವುದು ಸಹಜ. ಇದನ್ನು ನಾನು ತಂದಿರುವೆ ಎನ್ನುವುದು ಸರಿ ಅಲ್ಲ ಎಂದು ಟೀಕಿಸಿದರು.
ಕ್ರಿಯಾಯೋಜನೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದೇನೆ ಎಂದರು.
ಅಡಕೆ ವಿವಾದ: ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರೇ ಅಡಕೆ ಹಾನಿಕರ ಎಂಬ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಹಾಗಾಗಿ ಕಾಂಗ್ರೆಸ್ನವರ ಸುಮ್ಮನೆ ಟೀಕಿಸುವುದು ಸರಿ ಅಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.
ಅಡಕೆ ಹಾನಿಕರ ಎಂದು ಹೇಳಿರುವ ವರದಿಯನ್ನು, ವಾದಾಂಶವನ್ನು ಸುಪ್ರೀಂಕೋರ್ಟ್ನಿಂದ ವಾಪಸ್ ಪಡೆಯುವುದು ಹೇಗೆ ಎಂಬ ಚಿಂತನೆ ಆಗಬೇಕಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕತ್ವ ವಹಿಸಲಿ. ಕೇಂದ್ರ ಸಚಿವರಿದ್ದಾರೆ, ಕಾಂಗ್ರೆಸ್ ಸರ್ಕಾರವಿದೆ. ಯಾವತ್ತು ಕರೆದರೂ ನಾವು ಬರಲು ಸಿದ್ಧರಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮುಖಂಡರಾದ ಗಿರೀಶ್ ಪಟೇಲ್, ದೇವದಾಸ್ ನಾಯಕ್, ಎಸ್. ದತ್ತಾತ್ರಿ, ಜ್ಞಾನೇಶ್ವರ್, ಕೆ.ವಿ. ಅಣ್ಣಪ್ಪ, ಭವಾನಿರಾವ್ ಮೋರೆ, ಹಿರಿಯಣ್ಣಯ್ಯ, ಬಿ.ಆರ್. ಮಧುಸೂದನ್, ಕೆ.ವಿ. ಅಣ್ಣಪ್ಪ ಇದ್ದರು.
ಬಿಎಸ್ವೈ ಶಿವಮೊಗ್ಗದಿಂದ ಸ್ಪರ್ಧಿಸಲಿ
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಮ್ಮೆಲ್ಲರ ಅಪೇಕ್ಷೆ. ಇದನ್ನು ನಾವು ಸ್ವಾಗತಿಸುತ್ತೇವೆ. ಅವರು ಸ್ಪರ್ಧಿಸುವುದೇ ಆದರೆ ಬಿಜೆಪಿಯ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಅವರು ಸ್ಪರ್ಧಿಸುವುದಾದರೆ ಹಾಲಿ- ಮಾಜಿ ಸಂಸದರ್ಯಾರೂ ಬೇರೆ ಮಾತನಾಡುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ. ಎಲ್ಲರ ಬೆಂಬಲ ಸಿಗಲಿದೆ ಎಂದರು.
ಯಡಿಯೂರಪ್ಪ ಅವರು ಸ್ಪರ್ಧಿಸಿದರೆ ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರು ಸಂತಸಪಡುತ್ತಾರೆ. ಅವರಿಗೆ ರಾಜಕೀಯವಾಗಿ ಅಪಾರ ಅನುಭವ ಇದೆ. ಸಂಸತ್ತನ್ನು ಪ್ರವೇಶಿಸಿದರೆ ಹೇಗೆ ಕರ್ತವ್ಯ ನಿರ್ವಹಿಸಬೇಕೆಂದು ಅವರಿಗೆ ನಮ್ಮೆಲ್ಲರಿಗಿಂತಲೂ ಚೆನ್ನಾಗಿ ಗೊತ್ತು. ಸಮರ್ಥವಾಗಿ ಕೆಲಸ ಮಾಡಬಲ್ಲರು.
ಆಕಾಂಕ್ಷಿಗಳ ಪಟ್ಟಿ ಇದೆ. ಆದರೆ, ಅವರು ಸ್ಪರ್ಧಿಸಲು ನಿಶ್ಚಯಿಸಿದರೆ ಎಲ್ಲರೂ ಹಿಂದೆ ಸರಿಯುತ್ತಾರೆ ಎಂದ ಆಯನೂರು ಮಂಜುನಾಥ್, ಜ.10ರಂದು ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಯಲಿದೆ. ಇದಕ್ಕೂ ಮುಂಚೆ ಆಂತರಿಕವಾಗಿ ಜಿಲ್ಲೆಯಲ್ಲಿ ಪಕ್ಷದ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಲ್ಲಿಸುತ್ತೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

