ಸೂಕ್ತ ನಾಯಕನ ಆರಿಸಿ
ಕ.ಪ್ರ.ವಾರ್ತೆ ಶಿವಮೊಗ್ಗ ಜ.15
ದೇಶದ ಸಮರ್ಥ ನಾಯಕನನ್ನು ಆರಿಸುವ ಅವಕಾಶ ಒದಗಿಬಂದಿದೆ. ಎಲ್ಲರೂ ಚಿಂತನೆ ಮಾಡಿ ಬದಲಾವಣೆ ತರುವ ಸಂದರ್ಭ ಬಂದಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಡಾ. ಗುಲ್ವಾಡಿ ಅವರ ಜನ್ಮಶತಾಬ್ಧಿ ಮಹೋತ್ಸವ ಸಮಿತಿಯು ಹಮ್ಮಿಕೊಂಡ ಅಖಿಲ ಭಾರತೀಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವ್ಯಕ್ತಿ ನೆಮ್ಮದಿಯಿಂದ, ಗೌರವ ಸ್ವಾಭಿಮಾನದಿಂದ ಬದುಕಿ ಬಾಳಲು ದೇಶಕ್ಕೊಬ್ಬ ಸಮರ್ಥ ನಾಯಕತ್ವದ ಅವಶ್ಯಕತೆ ಇದೆ. ದೇಶದಲ್ಲಿ ಸಮರ್ಥ ನಾಯಕತ್ವ ಇಲ್ಲ ಎಂದರೆ, ಅನೇಕ ಆತಂಕ ಎದುರಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ನಾವು ಸೂಕ್ತ ನಾಯಕನನ್ನು ಆರಿಸುವ ದಿಕ್ಕಿನಲ್ಲಿ ಯೋಚನೆ ಮಾಡಬೇಕು ಎಂದು ಹೇಳಿದರು.
ಈ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ ಎಂದು ಮಾತನ್ನಾರಂಭಿಸಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಅಭಿವೃದ್ಧಿ ಮಾಡಿದ್ದೇನೆ. ಕಳೆದೊಂದು ವರ್ಷದಿಂದ ಶಿವಮೊಗ್ಗ ಅಭಿವೃದ್ಧಿ ತಟಸ್ಥವಾಗಿದೆ ಎಂಬುದನ್ನು ಗಮನಿಸಿರುತ್ತೀರಿ. ಸಿಎಂ ಆಗಿ ಪೂರ್ಣಾವಧಿ ಮುಗಿಸಿದ್ದರೆ, ಶಿವಮೊಗ್ಗಕ್ಕೆ ಇನ್ನೇನು ಬೇಡ ಎಂಬಷ್ಟರಮಟ್ಟಿಗೆ ಅಭಿವೃದ್ಧಿ ಮಾಡಿ ತೋರಿಸುತ್ತಿದ್ದೆ ಎಂದರು.
ಶಿವಮೊಗ್ಗ ಜಿಲ್ಲೆ ಫೋಟೋಗ್ರಫಿಯಲ್ಲಿ ಒಂದು ವೈಶಿಷ್ಯ ಸ್ಥಾನ ಪಡೆಯಬೇಕಾದರೆ ಗುಲ್ವಾಡಿ ಅವರ ಶ್ರಮ ಹೆಚ್ಚಿದೆ ಎಂದರೆ ಅತಿಶಯೋಕ್ತಿಯಲ್ಲ. ಚಿಕ್ಕವಯಸ್ಸಿನಲ್ಲೇ ಬಾಂಬೆ ಸೇರಿಕೊಂಡ ಗುಲ್ವಾಡಿ ಅವರು, ಬೆಳಗಾವಿಯಲ್ಲಿ ಫೋಟೋ ಸ್ಟುಡಿಯೋ ಸ್ಥಾಪಿಸಿದರು. ನಂತರ ತಮ್ಮ ನೆಲೆ ಕಂಡುಕೊಂಡಿದ್ದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ. ಇಲ್ಲಿನ ಸುಂದರ ಪರಿಸರರಿಂದ ಪ್ರಭಾವದಿಂದ ಮತ್ತಷ್ಟು ತಮ್ಮನ್ನು ತೊಡಗಿಸಿಕೊಂಡರು. ಅವರು ತೆಗೆದಂತಹ ಛಾಯಾಚಿತ್ರಗಳು ಜನಮಾನಸದಲ್ಲಿ ಉಳಿಯುವಂತದ್ದು ಎಂದು ಬಣ್ಣಿಸಿದರು.
ಆ ಕಾಲದಲ್ಲಿ ಶಿವಮೊಗ್ಗದಲ್ಲಿ ನನಗೆ ನೆನಪಿದೆ, ಗುಲ್ವಾಡಿ ಸ್ಟುಡಿಯೋದಲ್ಲಿ ಫೋಟೋ ತೆಗೆಸಿಕೊಳ್ಳುವುದೇ ಒಂದು ಪ್ರತಿಷ್ಠೆಯಾಗಿತ್ತು ಎಂದ ಅವರು, ಗುಲ್ವಾಡಿ ಅವರು ಕೆಲಸದಲ್ಲಿ ತೋರಿಸುತ್ತಿದ್ದ ಪರಿಪೂರ್ಣತೆ ಈ ಯಶಸ್ಸಿಗೆ ಕಾರಣ ಎಂದರು.
ಉತ್ತಮ ಶಿಸ್ತು ಬದ್ಧ ಜೀವನ ನಡೆಸಿದರು. ಜನಸಂಘದ ಅಧ್ಯಕ್ಷರಾಗಿ ಈ ಭಾಗದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. ದ್ವಿತೀಯ ಮಹಾಯುದ್ಧದ ವೇಳೆ ಕಾರ್ಯನಿರ್ವಹಿಸಿದ್ದರು. ಹೋಮಿಯೋಪತಿ ವೈದ್ಯ ಪದ್ಧತಿಯ ಅಭ್ಯಾಸ ಮಾಡಿ, ಆಟೋ ಮೊಬೈಲ್ ಕ್ಷೇತ್ರದತ್ತಲೂ ಆಕರ್ಷಿತರಾಗಿ, ಫೋಟೋಗ್ರಫಿ ತಮ್ಮ ವೃತ್ತಿ-ಪ್ರವೃತ್ತಿ ಮಾಡಿಕೊಂಡರು. ಇವೆಲ್ಲಾ ನಾಡಿನ ಜನತೆಗೆ ಹೆಮ್ಮೆ ತರುವ ಸಂಗತಿ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಮುಖಂಡರಾದ ರುದ್ರೇಗೌಡ, ಜ್ಯೋತಿಪ್ರಕಾಶ್, ನಗರಸಭಾ ಸದಸ್ಯ ಗೋಪಿ, ಎಂ.ಶಂಕರ್, ಗುಲ್ವಾಡಿ ಅವರ ಶ್ರೀಮತಿ ಛಾಯಾದೇವಿ ಇದ್ದರು.
ಡಾ. ಗುಲ್ವಾಡಿ ಅವರ ಜನ್ಮ ಶತಾಬ್ಧಿ ಮಹೋತ್ಸವ ಸಮಿತಿಯು ಇತ್ತೀಚೆಗೆ ನಡೆಸಿದ ಅಖಿಲ ಭಾರತ ಛಾಯಾಗ್ರಹಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ ಶಿವಮೊಗ್ಗದ ಗಣ್ಯರು, ವೈದ್ಯರನ್ನು ಗೌರವಿಸಲಾಯಿತು.
ಛಾಯಾಚಿತ್ರ ಪ್ರದರ್ಶನ, ಉಡುಗೊರೆ
ಡಾ. ಗುಲ್ವಾಡಿ ಅವರ ಜನ್ಮ ಶತಾಬ್ಧಿ ಮಹೋತ್ಸವ ಸಮಿತಿ ಇತ್ತೀಚೆಗೆ ನಡೆಸಿದ ಅಖಿಲ ಭಾರತ ಛಾಯಾಗ್ರಹಣ ಸ್ಪರ್ಧೆಗೆ ಬಂದ ಛಾಯಾಚಿತ್ರಗಳನ್ನು ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ. ಗುರುವಾರ ಸಹ ಪ್ರದರ್ಶನ ಮುಂದುವರಿಯಲಿದೆ.
ಅದ್ಭುತ, ಮನಮೋಹಕ ದೃಶ್ಯಗಳ ಛಾಯಾಚಿತ್ರ ಪ್ರದರ್ಶನ ಹಾಗೂ ಪುರಾತನ ಕ್ಯಾಮರಾ ಮತ್ತು ಪರಿಕರಗಳನ್ನು ವೀಕ್ಷಿಸಲು ನಗರದ ಜನತೆಗೊಂದು ಸುಸಂದರ್ಭ ಒದಗಿಬಂದಿದೆ. ಜೊತೆಗೆ ಜನ್ಮ ಶತಾಬ್ಧಿ ಮಹೋತ್ಸವದ ಸವಿನೆನಪಿಗಾಗಿ ಉಚಿತ ಉಡುಗೊರೆಯಾಗಿ ಕುಟುಂಬ ಸದಸ್ಯರ ಗುಂಪು ಛಾಯಾಚಿತ್ರ, ವಿದ್ಯಾರ್ಥಿಗಳಿಗಾಗಿ ಪಾಸ್ಪೋರ್ಟ್ ಅಳತೆಯ ಛಾಯಾಚಿತ್ರವನ್ನು ಕಾರ್ಯಕ್ರಮದಲ್ಲಿ ತೆಗೆದುಕೊಡುವ ವಿಶೇಷ ಕಾರ್ಯಕ್ರಮವನ್ನು ಗುಲ್ವಾಡಿ ಅವರ ಜನ್ಮಶತಾಬ್ದಿ ಮಹೋತ್ಸವ ಸಮಿತಿ ಆಯೋಜಿಸಿದೆ. ಕಣ್ಣಿನ ತಪಾಸಣೆ ಶಿಬಿರ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

