ಸುದ್ದಿ ಸಂಕ್ಷೇಪ
ವ್ಯಾನಿಗೆ ಬೆಂಕಿ
ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಕೈಮರ ಬಳಿ ಚಲಿಸುತ್ತಿದ್ದ ಮಾರುತಿ ಓಮ್ಮಿ ವ್ಯಾನಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಭಾನುವಾರ ತಡರಾತ್ರಿ 12.30ಕ್ಕೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ಸ್ಥಳಕ್ಕೆ ಹೊಳೆಹೊನ್ನೂರು ಧಾವಿಸಿದರು. ಪೊಲೀಸರು ಸಾರ್ವಜನಿಕರ ನೆರವಿನಿಂದ ಬೆಂಕಿಯನ್ನು ನಂದಿಸಿದರು.
ಮಹಡಿ ಮೇಲಿಂದ ಬಿದ್ದು ಸಾವು
ಶಿವಮೊಗ್ಗ: ಮಹಡಿ ಮೇಲೆ ಸೀಗರೇಟ್ ಸೇದುತ್ತಾ ನಿಂತಿದ್ದ ವ್ಯಕ್ತಿಯೊಬ್ಬರು ತಲೆ ತಿರುಗಿ ಆಕಸ್ಮಿಕವಾಗಿ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಪ್ರಿಯದರ್ಶಿನಿ ಲೇಔಟ್ನಲ್ಲಿ ನಡೆದಿದೆ.
ಶ್ರೀನಿವಾಸ್ (28) ಮೃತಪಟ್ಟವರು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಅಜಿತಶ್ರೀ ಪುರಸ್ಕಾರ
ಶಿವಮೊಗ್ಗ: ಶ್ರೀ ಅಜಿತ ಕುಮಾರ ಅವರ ಪುಣ್ಯತಿಥಿ ನಿಮಿತ್ತ ಆಚರಿಸುವ ಸೇವಾದಿನದ ಅಂಗವಾಗಿ ಕರ್ನಾಟಕ ಸಂಘದಲ್ಲಿ ವಿಕಾಸ ಟ್ರಸ್ಟ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಾದ ಬಿ.ಪಿ. ಮನುಕುಮಾರ್ ಹಾಗೂ ದೈಹಿಕ ಶಿಕ್ಷಕ ಆನಂದಪ್ಪ ಅವರಿಗೆ ಅಜಿತಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಿ.ಎಸ್.ಅರುಣ್ ಮಾತನಾಡಿಅಜಿತ ಕುಮಾರ್ ಅವರು ಸಮಾಜ ಮುಖಿಯಾಗಿ ಅನೇಕ ಸೇವಾ ಚಟುವಟಿಕೆ ನಡೆಸಲು ಒಂದು ದಿಕ್ಕನ್ನು ಹಾಕಿಕೊಟ್ಟರು. ಅವರ ಪುಣ್ಯತಿಥಿ ನೆನಪಿನಲ್ಲಿ ಸೇವಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.ನಗರಸಭೆ ಮಾಜಿ ಅಧ್ಯಕ್ಷ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೃತ್ಯ ಗುರು ಸಹನಾ ಚೇತನ್ ಅವರ ಪರಿಕಲ್ಪನೆಯಲ್ಲಿ ದೇಶ ಭಕ್ತಿಗೀತೆಗಳಿಗೆ ಹಿಂದುಳಿದ ಬಡಾವಣೆಯ ಆಯ್ದ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಅಧಿಕಾರಿಗಳ ಗುಟ್ಟು ಆನ್ಲೈನ್ನಲ್ಲಿ ರಟ್ಟು
ಆಡಳಿತದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ತರುವುದಾಗಿ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಂತೆ ಶೇ.50ಕ್ಕಿಂತ ಹೆಚ್ಚು ಕಡತಗಳು ಬಾಕಿ ಇರುವ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಲು ಕೂಡ ನಿರ್ಧರಿಸಿದೆ. ಅದರಂತೆ ಕಾರ್ಯದರ್ಶಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಕಡತಗಳ ತ್ವರಿತ ವಿಲೇವಾರಿಗೆ ನಿರ್ದೇಶನ ಹೊರಡಿಸಿದ್ದಾರೆ. ಇದುವರೆಗೆ ಬೆಚ್ಚಗೆ ಕೂತು ಈಗ ಇದ್ದಕ್ಕಿದ್ದಂತೆ ಎದ್ದು ಕೆಲಸ ಮಾಡುವುದು ಕೆಲವರಿಗೆ ಕಷ್ಟವಾಗದೇ ಇರುತ್ತದೆಯೇ? ಆದರೂ ಕೆಲಸ ಆಗಿದೆ ಎಂದು ತೋರಿಸಲೇ ಬೇಕು. ಅದಕ್ಕೆ ಕೆಲವು ಜಿಲ್ಲೆಗಳ ಅಧಿಕಾರಿಗಳು ಏನೇನೋ ದಾರಿ ಹುಡುಕುತ್ತಿದ್ದಾರೆ. ಮೊನ್ನೆ ನಡೆದ ಅಧಿಕಾರಿಗಳ ಸಭೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಂಡುಕೊಂಡಿರುವ ಹೊಸ ದಾರಿಯನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಪತ್ತೆ ಮಾಡಿದರು. ಕಡತ ವಿಲೇವಾರಿ ಕುರಿತು ಅಧಿಕಾರಿಗಳು ಕೊಡುವ ಮಾಹಿತಿಗೂ ಆನ್ಲೈನ್ನಲ್ಲಿ ಲಭ್ಯವಿರುವ ಮಾಹಿತಿಗೂ ತಾಳೆಯಾಗುತ್ತಿರಲಿಲ್ಲ. ಅಧಿಕಾರಿಗಳು ಕೊಟ್ಟ ಪ್ರಮಾಣದಷ್ಟು ಕಡತ ವಿಲೇವಾರಿಯಾಗಿಲ್ಲ ಎಂಬುದನ್ನು ಆನ್ಲೈನ್ ಮಾಹಿತಿ ಹೇಳುತ್ತಿತ್ತು. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದರು. ಆಡಳಿತದಲ್ಲಿ ಆಗಿರುವ ಈ ಬದಲಾವಣೆಯಾದರೂ ಕಣ್ಣಿಗೆ ಕಂಡಿತಲ್ಲಾ ಎಂದು ಅವರು ಹೇಳಿದಾಗ ಜಿಲ್ಲಾ ಮಟ್ಟದ ಅಧಿಕಾರಿಗಳು ತಲೆ ಕೆಳಗೆ ಹಾಕಿ ಕುಳಿತರು.
ಟಚಿಂಗ್ ಸ್ಟಾರ್ ಈಸ್ ಮಿಸ್ಸಿಂಗ್
ಶಿವಮೊಗ್ಗದಲ್ಲಿ ಒಬ್ಬ ರಾಜಕೀಯ ನಾಯಕರಿದ್ದಾರೆ. ಅವರು ನಮ್ಮ ಪಕ್ಷದ ಮುಖಂಡರಲ್ಲವೇ ಅಲ್ಲ ಎಂದು 'ಕೈ' ಪಕ್ಷದ ಜಿಲ್ಲಾಧ್ಯಕ್ಷರೇ ಸ್ಪಷ್ಟಪಡಿಸಿದ್ದಾಗಿದೆ. ಆದರೂ, ತಾವು ಕಾಂಗ್ರೆಸ್ ಮುಖಂಡ ಎಂದು ಓಡಾಡುವ ಇವರಿಗೆ 'ಟಚಿಂಗ್ ಸ್ಟಾರ್' ಎಂಬ ಅಡ್ಡ ಹೆಸರೂ ಇದೆ. ಏಕೆಂದ್ರೆ, ಸಾರ್ವಜನಿಕವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಇವರು ಕಾಣ ಸಿಗುತ್ತಾರೆ. ಆಹ್ವಾನವಿಲ್ಲದಿದ್ದರೂ ವೇದಿಕೆ ಏರುವ ಹಂಬಲ. ಶ್ವೇತವಸ್ತ್ರಧಾರಿಗಳಾಗಿ ತಿರುಗುವ ಈ ವ್ಯಕ್ತಿ ಅಕ್ಕಪಕ್ಕ ಇಬ್ಬರು ಹೊಗಳುಭಟ್ಟರೂ ಇರುತ್ತಾರೆ. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ತಮ್ಮ ಸಫಾರಿ ವಾಹನ ಏರಿ ನಗರ ಸುತ್ತುವ ಈ ಸ್ಟಾರ್ ಪ್ರತಿಭಟನೆಗೂ ಹೋಗ್ತಾರೆ, ಶಾಲಾ ವಾರ್ಷಿಕೋತ್ಸವವನ್ನೂ ಬಿಡಲ್ಲ. ಮಾಧ್ಯಮದ ಕ್ಯಾಮೆರಾ ಎಲ್ಲೆಲ್ಲಿ ಕಾಣುತ್ತದೋ ಅಲ್ಲಿ ಈ ಮುಖ ಅರಳಿಸಿಕೊಳ್ಳುತ್ತಾರೆ. 'ನಾನು ಆ ಪ್ರೋಗ್ರಾಂ ಟಚ್ ಮಾಡಿ ಬಂದೆ ಸಾರ್. ಮತ್ತೊಂದು ಕಡೆ ಹೊರಟಿದ್ದೀನಿ' ಎಂದು ಬಡಬಡಿಸುತ್ತಲೇ ಇರುತ್ತಾರೆ. ಈ ಶಿಖಾಮಣಿ ಮುಂಬರುವ ಲೋಕಸಭಾ ಚುನಾವಣೆಗೆ 'ನಾನೇ ಅಭ್ಯರ್ಥಿ. ಹೈಕಮಾಂಡ್ ನನಗೇ ಟಿಕೆಟ್ ನೀಡಲು ಒಪ್ಪಿದೆ' ಎಂದೂ ಹೇಳಿಕೊಂಡು ತಿರುಗುತ್ತಿದ್ದಾರೆ. 'ಕೈ' ಕಾರ್ಯಕರ್ತರು, ಮುಖಂಡರು ಮಾತ್ರ ಇವರ ಟಚಿಂಗ್ 'ಡೈಲಾಗ್' ಕೇಳಿ ಮುಸಿಮುಸಿ ನಗುತ್ತಾರೆ. ಸದ್ಯ ನಾಪತ್ತೆಯಾಗಿರುವ ಇವರು ಲೋಕಸಭೆ ಟಿಕೆಟ್ಗಾಗಿ ಹೈಕಮಾಂಡ್ ಅನ್ನು ಟಚ್ ಮಾಡಲು ಹೋಗಿರಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

