ಮಹಾನಗರದಲ್ಲಿ ನೀರಿಗೆ ಬರ
ದಾವಣಗೆರೆ: ದಾವಣಗೆರೆಗೆ ಕುಡಿಯುವ ನೀರು ಪೂರೈಸುವ ಟಿವಿ ಸ್ಟೇಷನ್ ಕೆರೆ ಹಾಗೂ ಕುಂದುವಾಡ ಕೆರೆ ಸಂಪೂರ್ಣ ನೀರಿಲ್ಲದೆ ಸಂಪೂರ್ಣವಾಗಿ ಬರಿದಾಗಿದ್ದು, ಭದ್ರಾ ನಾಲೆಯಿಂದ ನೀರು ಪೂರೈಸದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಲಕ್ಷಾಂತರ ಜನ, ಜಾನುವಾರು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉದ್ಭವಿಸುವ ಆತಂಕ ಆಡಳಿತ ಯಂತ್ರವನ್ನು ಇನ್ನಿಲ್ಲದಂತೆ ಈಗ ಕಾಡುತ್ತಿದೆ.
ಪಾಲಿಕೆಗೆ ಜನಪ್ರತಿನಿಧಿಗಳು ಇದ್ದರೂ ಇಲ್ಲದಂತೆ ವರ್ಷ ಕಳೆಯಬೇಕಾಯಿತು. ಇನ್ನೂ ಅಧಿಕಾರಿ ವರ್ಗದ ಆಡಳಿತವು ಮುಂದಾಲೋಚನೆ ಮಾಡದ ಪರಿಣಾಮ 1ನೇ ಹಂತದ ಸಮಗ್ರ ನೀರು ಸರಬರಾಜು ಕೇಂದ್ರದ ಕೆರೆ(ಟಿವಿ ಸ್ಟೇಷನ್ ಕೆರೆ) ಹಾಗೂ 2ನೇ ಹಂತದ ಸಮಗ್ರ ನೀರು ಸರಬರಾಜು ಕೇಂದ್ರದ ಕುಂದುವಾಡ ಕೆರೆ ಖಾಲಿಯಾಗಿದ್ದು, ಜನ ಮುಂದೇನು ಎಂಬ ಆಂತಕದ ಸುಳಿಗೆ ಸಿಲುಕಿದ್ದಾರೆ.
ಟಿವಿ ಸ್ಟೇಷನ್ ಕೆರೆ ಸುಮಾರು 51 ಎಕರೆ ವಿಸ್ತೀರ್ಣ ಹೊಂದಿದ್ದು, 900 ಮಿಲಿಯನ್ ಲೀಟರ್ನಷ್ಟು, ಕುಂದುವಾಡ ಕೆರೆ ಸುಮಾರು 250 ಎಕರೆ ವಿಸ್ತೀರ್ಣ ಹೊಂದಿದ್ದು, 2400 ಮಿಲಿಯನ್ಲೀಟರ್ನಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕುಂದುವಾಡ ಕೆರೆಯಲ್ಲಿ ತುಂಬಿದ್ದ ಹೂಳು ತೆರವು ಮಾಡುವ ಉದ್ದೇಶದಿಂದ ನೀರು ಸಂಗ್ರಹಿಸಲಿಲ್ಲ. ಕೆರೆಯ ಹೂಳು ಎಷ್ಟರ ಮಟ್ಟಿಗೆ ಎತ್ತಿ, ನೀರು ಸಂಗ್ರಹ ಸಾಮರ್ಥ್ಯ ಪ್ರಮಾಣವನ್ನು ಎಷ್ಟರಮಟ್ಟಿಗೆ ವೃದ್ಧಿಸಲಾಗಿದೆ ಎಂಬುದು ಕೆರೆ ಸಂಪೂರ್ಣ ತುಂಬಿದ ನಂತರವಷ್ಟೇ ಸ್ಪಷ್ಟವಾಗಲಿದೆ.
ಇನ್ನು ಟಿವಿ ಸ್ಟೇಷನ್ ಕೆರೆ ಹಿಂದಿನಿಂದಲೂ ದಾವಣಗೆರೆಗೆ ನೀರು ಪೂರೈಸುತ್ತಾ ಬಂದ ಕೆರೆ. ಸಾಕಷ್ಟು ಜನ, ಜಾನುವಾರು ಬಲಿ ಪಡೆದ ಅಪಾಯಕಾರಿ ಕೆರೆಯಾಗಿ ಕುಖ್ಯಾತಿ ಪಡೆದಿದೆ.
ವ್ಯವಸ್ಥಿತವಾಗಿ ಕೆರೆ ಅಂಗಳ ಹೊಂದಿರದ ಕೆರೆಯಲ್ಲಿ ಎಲ್ಲಿ ಆಳ ಗುಂಡಿ ಇದೆ, ಎಲ್ಲಿ ಉಬ್ಬು ಇದೆ ಎಂಬುದನ್ನು ಊಹಿಸಲಾಗದಷ್ಟು ಭಯಾನಕ ಕೆರೆಯಾಗಿದೆ. ಹಿಂದೆ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೆರೆ ಅಂಗಳದ ಮಣ್ಣನ್ನು ನೀಡಲಾಗಿತ್ತು. ಟಿವಿ ಸ್ಪೇಷನ್ ಕೆರೆ ಅಂಗಳದ ಮಣ್ಣನ್ನು ವ್ಯವಸ್ಥಿತವಾಗಿ ತೆಗೆಯದೆ, ಸಿಕ್ಕ ಸಿಕ್ಕಲ್ಲಿ ತೆಗೆದುಕೊಂಡಿದ್ದರಿಂದ ಕೆರೆ ತುಂಬಿದ ವೇಳೆ ಕೆರೆಯ ಆಳ, ಅಗಲ ಗೊತ್ತಿಲ್ಲದ ಅದೆಷ್ಟೋ ಅಮಾಯಕರು, ಜಾನುವಾರು ಕೆರೆಗೆ ಹಾರವಾಗಿವೆ. ಇಷ್ಟಾದರೂ ಪಾಲಿಕೆ ಮಾತ್ರ ಇಂದಿನವರೆಗೂ ಎಚ್ಚೆತ್ತಿಲ್ಲ. ವ್ಯವಸ್ಥಿತವಾಗಿ ಕೆರೆಯ ಹೂಳು ತೆಗೆಯುವ ಜತೆಗೆ ಕೆರೆ ಅಂಗಳವನ್ನು ಸಮತಟ್ಟು ಮಾಡುವ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವುದಕ್ಕೆ ಸಾಕಷ್ಟು ಅವಕಾಶವಿದ್ದರೂ ಅಂತಹ ಕಳಕಳಿಯನ್ನು ಪಾಲಿಕೆ ಆಡಳಿತ ಯಂತ್ರ ಮಾತ್ರ ಮಾಡುತ್ತಿಲ್ಲ.
ಅನಧಿಕೃತ ನಲ್ಲಿ ಹಾವಳಿ
ನಿಯಮಾನುಸಾರ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 135 ಲೀಟರ್ ನೀರನ್ನು ಪೂರೈಸಬೇಕು. ಆದರೆ, ಮಳೆ ಕೈಕೊಟ್ಟಿದ್ದು, ಆಡಳಿತ ಯಂತ್ರದ ದೂರಾಲೋಚನೆ ಕೊರತೆಯಿಂದ ಕೇವಲ 100 ಲೀಟರ್ನಷ್ಟು ಮಾತ್ರ ನೀರು ಪೂರೈಸಲಾಗುತ್ತಿದೆ. ನಗರದಲ್ಲಿ 40 ಸಾವಿರ ಗೃಹ ಬಳಕೆ ನಲ್ಲಿಗಳಿದ್ದರೆ, 5 ಸಾವಿರದಷ್ಟು ವಾಣಿಜ್ಯ ಬಳಕೆ ನಲ್ಲಿಗಳಿವೆ. ಇವು ಕೇವಲ ಅಧಿಕೃತ ಸಂಖ್ಯೆ ಮಾತ್ರ. ಹಿಂದೆ ಕೆಲ ಅಧಿಕಾರಿ, ಸಿಬ್ಬಂದಿಯೇ ಅನಧಿಕೃತ ನಲ್ಲಿ ಸಂಪರ್ಕ ಕಲ್ಪಿಸಿ, ಕಾಸು ಮಾಡಿಕೊಂಡಿದ್ದ ವಿಚಾರ ನಗರಸಭೆ ಕಾಲದಿಂದಲೂ ಕೇಳಿ ಬರುತ್ತಲೇ ಇದೆ. ಪ್ರಭಾವಿಗಳ, ಪ್ರತಿಷ್ಠಿತರ ಸದಸ್ಯತ್ವ ಹೊಂದಿರುವ ಕ್ಲಬ್ವೊಂದು ಪಾಲಿಕೆಗೆ ಹೊಂದಿಕೊಂಡಂತೆ ಇದ್ದು, ಹಲವು ದಶಕಗಳಿಂದಲೂ ನೀರು ಕರ, ಕಂದಾಯವನ್ನೇ ಪಾವತಿಸಿರಲಿಲ್ಲ. ಎರಡು ನಲ್ಲಿಗಳ ಅಕ್ರಮ ಸಂಪರ್ಕ ಪಡೆದಿದ್ದ ಬಗ್ಗೆ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ಅಕ್ರಮ ನಲ್ಲಿ ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. 1 ತಿಂಗಳ ನಂತರ 25 ಸಾವಿರ ನಲ್ಲಿ ಕಂದಾಯ ಕಟ್ಟಿ, ಅಧಿಕೃತವಾಗಿ ಸಂಪರ್ಕ ಮಾಡಿಕೊಂಡ ಕ್ಲಬ್ ಅದಾಗಿದೆ. ಹೀಗೆ ಅಪಾರ ಸಂಖ್ಯೆಯಲ್ಲಿ ಗೃಹ ಬಳಕೆ, ವಾಣಿಜ್ಯ ಬಳಕೆ ನಲ್ಲಿಗಳ ಸಂಪರ್ಕ ಪಡೆದಿರುವ ನಿದರ್ಶನಗಳಿವೆ.
ಭದ್ರಾ ಕಾಡಾ ಸಮಿತಿ ಕೃಪೆ ತೋರಲಿ
ಶೈಕ್ಷಣಿಕ, ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಶೀಘ್ರದಲ್ಲೇ ನೀರಿಗೆ ಹಾಹಾಕಾರ ಏಳಲಿದೆ. ಮಹಾನಗರಕ್ಕೆ ನೀರು ಪೂರೈಸುವ ಒಂದನೇ ಹಂತದ ಸಮಗ್ರ ನೀರು ಸರಬರಾಜು ಕೇಂದ್ರದ ಟಿವಿ ಸ್ಟೇಷನ್ ಕೆರೆ ಹಾಗೂ ಕುಂದುವಾಡ ಕೆರೆ ಎರಡೂ ಬರಿದಾಗಿವೆ. ಶಿವಮೊಗ್ಗದ ಭದ್ರಾ ಕಾಡಾ ಸಮಿತಿ ಸಭೆ ಸೋಮವಾರ ಸೇರಿದ್ದು, ಅಲ್ಲಿ ಕೈಗೊಳ್ಳುವ ನಿರ್ಧಾರ ದಾವಣಗೆರೆ ಜನರ ದಾಹ ತೀರಿಸಬಲ್ಲದು.
ಈ ಹಿನ್ನೆಲೆಯಲ್ಲಿ ಭದ್ರಾ ಕಾಡಾ ಸಮಿತಿ ಆಕಸ್ಮಾತ್ ಭದ್ರಾ ನಾಲೆಗೆ ಇಂದೇ ನೀರು ಬಿಡಲು ನಿರ್ಧರಿಸಿದರೂ ಅದು ಜು.10ಕ್ಕೆ ದಾವಣಗೆರೆ ತಲುಪಿ, ಅಲ್ಲಿಂದ 3- 4 ದಿನಗಳ ನಂತರವಷ್ಟೇ ನೀರು ಪೂರೈಸಲು ಸಾಧ್ಯ ಎಂಬುದು ಪಾಲಿಕೆ ಮೂಲಗಳ ಹೇಳಿಕೆಯಾಗಿದೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

