ಭಾರಿ ಅಕ್ರಮ ಮರಳು ವಶ
ಶಿವಮೊಗ್ಗ: ಮಳೆಗಾಲಕ್ಕೆ ಮುನ್ನ ಅಕ್ರಮವಾಗಿ ಮರಳು ಸಂಗ್ರಹಿಸಿ ನಂತರ ಹೆಚ್ಚಿನ ಬೆಲೆ ಮರಳು ಮಾರಾಟ ಮಾಡುವ ದೊಡ್ಡ ಮಾಫಿಯಾವನ್ನು ಜಿಲ್ಲಾಡಳಿತ ಹತ್ತಿಕ್ಕಿದೆ. ಶುಕ್ರವಾರ ಒಂದೇ ದಿನ ವಿವಿಧೆಡೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ನೂರಾರು ಲೋಡ್ ಮರಳನ್ನು ವಶಕ್ಕೆ ಪಡೆದುಕೊಂಡಿದೆ.
ದಾಳಿ ಮುಂದುವರಿದಿದ್ದು ಇನ್ನೂ ನೂರಾರು ಲೋಡ್ ಅಕ್ರಮ ಮರಳು ದಾಸ್ತಾನು ವಶಕ್ಕೆ ಪಡೆಯುವ ಸಾದ್ಯತೆ ಇದೆ.
ಕಾರ್ಯಾಚರಣೆ: ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಂದಾಯ, ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಐದು ತಂಡಗಳನ್ನು ರಚಿಸಿ ಶುಕ್ರವಾರ ಬೆಳಗ್ಗೆಯಿಂದಲೇ ದಾಳಿ ನಡೆಸಲಾಗಿದೆ.
ನಗರ ವ್ಯಾಪ್ತಿಯ ಮಂಜುನಾಥ ಬಡಾವಣೆ, ಗಾಡಿಕೊಪ್ಪ, ಟಿಪ್ಪುನಗರ, ಮಂಡ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ದಾಸ್ತಾನು ಮಾಡಲಾಗಿದ್ದ ಮರಳನ್ನು ಜೆಸಿಬಿ ಬಳಸಿ ಲೋಡ್ ಮಾಡಿಸಿದ ಜಿಲ್ಲಾಡಳಿತ ಅಣ್ಣಾನಗರದ ಮೈದಾನಲ್ಲಿ ಸಂಗ್ರಹ ಮಾಡಿತು.
ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಹೊಳಲೂರು, ಹಾಡೋನಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿಯೂ ದಾಳಿ ನಡೆಸಿ ಬೆಳಗ್ಗೆಯಿಂದ ಸಂಜೆವರೆಗೂ ಅಕ್ರಮ ಮರಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಿತು. ಬಹುತೇಕ ಕಡೆಗಲ್ಲಿ ರಸ್ತೆ ಬದಿಯಲ್ಲಿಯೇ ದಾಸ್ತಾನು ಮಾಡಲಾಗಿದ್ದು, ಇನ್ನು ಕೆಲವು ಕಡೆಗಳಲ್ಲಿ ತೋಟಗಳ ಮಧ್ಯ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿತ್ತು.
ನಗರದ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಕಿಷ್ಕಿಂದೆಯಂತಹ ರಸ್ತೆಗಳ ಬದಿಯಲ್ಲಿ ಸುಮಾರು 200-300 ಲೋಡ್ನಷ್ಟು ಮರಳು ಪತ್ತೆಯಾಗಿದೆ. ಈ ರೀತಿ ಸಂಗ್ರಹ ಮಾಡಿದವರಲ್ಲಿ ಯಾವುದೇ ಪರವಾನಿಗೆ ಇಲ್ಲದಿರುವುದು ಸಹ ದಾಳಿ ವೇಳೆ ಗೊತ್ತಾಗಿದೆ.
ಟಿಪ್ಪುನಗರ, ಮಂಜುನಾಥ ಬಡಾವಣೆಗಳಲ್ಲಿ ದಾಳಿಗೆ ಹೋದ ಅಧಿಕಾರಿಗಳ ತಂಡ ಮುಜುಗರ
ಎದುರಿಸುವಂತಾಗಿತ್ತು. ಪೊಲೀಸರಿದ್ದ ತಂಡವನ್ನು ಬಡಾವಣೆ ಒಳಗೆ ಬರಲು ಬಿಡದೆ ತಡೆಯುವ ಯತ್ನವನ್ನು ಮಾಡಿದರು. ಕೆಲವು ಕಡೆ ಮಹಿಳೆಯರೇ ಮುಂದೆ ನಿಂತರು. ಕೆಲ ಕಡೆಗಳಲ್ಲಿ ವರದಿ ತೆರಳಿದ ಮಾಧ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರ ಮೇಲೆಯೇ ದಾಳಿ ನಡೆಸಲು ಮುಂದಾದ ಪ್ರಸಂಗವೂ ನಡೆಯಿತು.ದಾಳಿಯಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಲ್ಲಪ್ಪ, ಡಿವೈಎಸ್ಪಿ ಪಿ.ಓ.ಶಿವಕುಮಾರ್, ತಹಶೀಲ್ದಾರ್ ಮೊದಲಾದವರು ಇದ್ದರು.
ಮಾಫಿಯಾ ಕೈವಾಡ
ಪ್ರತಿ ಬಾರಿಯೂ ಮಳೆಗಾಲಕ್ಕೆ ಮುನ್ನ ದೊಡ್ಡದಾಗಿ ಕಾರ್ಯೋನ್ಮುಖವಾಗಿ ಮರಳು ಮಾಫಿಯಾ ಸರ್ಕಾರಕ್ಕೆ ತೆರಿಗೆ ವಂಚಿಸಿ ಪರ್ಮಿಟ್ಟು ಡೆಯದೇ ಹಗಲು ರಾತ್ರಿ ಮರಳನ್ನು ಅಕ್ರಮವಾಗಿ ಸಾಗಣೆ ಮಾಡಿ ಸಂಗ್ರಹಿಸುತ್ತದೆ. ಒಂದು ಲೋಡ್ಗೆ ಪರ್ಮಿಟ್ ಡೆದು 3-4 ಲೋಡ್ ಮರಳನ್ನು ಅದೇ ಪರ್ಮಿಟ್ನಲ್ಲಿಯೇ ಸಾಗಿಸಿ ಈ ರೀತಿಯ ದಾಸ್ತಾನು ಮಾಡಲಾಗಿದೆ. ಮಳೆ ಆರಂಭವಾದ ನಂತರ ಕಟ್ಟಡ ಕಾಮಗಾರಿಗಳಿಗೆ ಮರಳು ಬೇಡಿಕೆ ಹೆಚ್ಚಾದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ.
ಪೊಲೀಸ್ ಠಾಣೆ ಎದುರು ಲಾಠಿ ಪ್ರಹಾರ
ಅಕ್ರಮ ಮರಳು ವಶಕ್ಕೆ ಪಡೆದುಕೊಂಡಿರುವುದನ್ನು ವಿರೋಧಿಸಿ ಲಾರಿ ಮಾಲೀಕರು ದೊಡ್ಡಪೇಟೆ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರಸಂಗ ನಡೆಯಿತು. ಈ ವೇಳೆ ಪೊಲೀಸರು ಹಾಗೂ ಲಾರಿ ಮಾಲೀಕರ ನಡುವೆ ವಾಗ್ವಾದ ನಡೆದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ಒಂದು ಹಂತದಲ್ಲಿ ವಾಗ್ವಾದ ತಾರಕಕ್ಕೆ ಹೋಯಿತು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮರಳು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಡಿ.ರಾಜಶೇಖರ್ ಅವರ ಮೇಲೆ ಕೇಸು ದಾಖಲಿಸಿ ಬಂಧಿಸಲಾಯಿತು. ಗುಂಪಿನೊಂದಿಗೆ ಠಾಣೆಗೆ ಬಂದ ಡಿ.ರಾಜಶೇಖರ್ ಸಿಪಿಐ ಹಾಗೂ ಪಿಎಸ್ಐ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಬಂಧಿಲಾಗಿತ್ತು.
ರಾಜಶೇಖರ್ ಬಿಡುಗಡೆಗೆ ಒತ್ತಾಯಿಸಿ ಲಾರಿ ಮಾಲೀಕರು, ಕಾರ್ಮಿಕರು ಠಾಣೆ ಮುಂದೆ ಜಮಾಯಿಸಿ ಠಾಣೆಗೆ ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಅನಿವಾರ್ಯವಾಗಿ ಲಾಠಿ ರುಚಿ ತೋರಿಸಿ ಅಲ್ಲಿದ್ದವರನ್ನು ಚದುರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

