ಶಿವಮೊಗ್ಗ

ಬರ; ಹರಪನಹಳ್ಳಿ ಹರೋಹರ

Published On :

ಟಿ ಬಿ. ರಾಮಪ್ರಸಾದ್ಗಾಂಧಿ
ಹರಪನಹಳ್ಳಿ: ಡಾ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲಿಯೇ ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಹರಪನಹಳ್ಳಿ.  ಪದೇಪದೆ ಬರಗಾಲಕ್ಕೆ ತುತ್ತಾಗಿ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಹಾಗೆ ಇದೆ. ಈ ವರ್ಷ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಮುಂಗಾರು ಕ್ಷೀಣಿಸಿದೆ.
ಬೇಸಿಗೆಯಂತೆ ಬಿಸಿಲು ತಾಂಡವವಾಡುತ್ತಿದ್ದು, ಬರದ ಚಾಯೆ ತಾಲೂಕಿನ ಮೇಲೆ ಆವರಿಸಿದೆ.  ರೈತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಮಳೆ ಹಂಚಿಕೆ ಸಮರ್ಪಕವಾಗಿಲ್ಲ: ತಾಲೂಕಿನ ವಾರ್ಷಿಕ ಸರಾಸರಿ ಮಳೆ - 752.1 ಮಿಮೀ,  ಜೂನ್ ಅಂತ್ಯಕ್ಕೆ ವಾಡಿಕೆ ಮಳೆ 233.3 ಮಿಮೀ ಇದ್ದು, ಈವರೆಗೂ 57.49 ಮಿಮೀ ಆಗಿದೆ.  ಆದರೆ ಜೂನ್ 2,3,4 ರಂದು ಮಳೆ ಯಾಗಿದ್ದು ರೈತರು ಅತ್ಯಂತ ಹುರುಪಿನಿಂದ ಬಿತ್ತನೆ ಕೈಗೊಂಡರು. ನಂತರ ಜೂ.19ರಂದು ಅಲ್ಪ ಪ್ರಮಾಣ ದಲ್ಲಿ ಮಳೆ ಬಿದ್ದಿದೆ. ಅಲ್ಲಿಂದ ಈವರೆಗೂ ಮಳೆಯ ದರ್ಶನ ಭಾಗ್ಯ ದೊರೆತಿಲ್ಲ. ಮೊದಲಿಗೆ ಬಿದ್ದ ಮಳೆ ಸಹ ಸರಿಯಾಗಿ ಹಂಚಿಕೆಯಾಗಿಲ್ಲ.
58,894 ಹೆ.ಬಿತ್ತನೆ: ತಾಲೂಕಿನಲ್ಲಿ 19,040 ಹೆ.ನೀರಾವರಿ ಹಾಗೂ 60,960 ಹೆಕ್ಟೇರ್ ಖುಷ್ಕಿ ಸೇರಿ ಒಟ್ಟು 80 ಸಾವಿರ ಹೆಕ್ಟೇರ್ ಬಿತ್ತನೆಯ ಗುರಿ ಇದೆ. ಆದರೆ ಈವರೆಗೂ ಕೇವಲ 58,894 ಹೆಕ್ಟರ್ ಬಿತ್ತನೆಯಾಗಿದೆ. ಏಕದಳ 42,992 ಹೆಕ್ಟೇರ್, ದ್ವಿದಳ - 3786 ಹೆಕ್ಟೇರ್, ಎಣ್ಣೆ ಕಾಳು -2250 ಹೆಕ್ಟೇರ್, ವಾಣಿಜ್ಯ ಬೆಳೆಗಳು -9866 ಹೆಕ್ಟೇರ್ ಬಿತ್ತನೆಯಾಗಿವೆ. ಅದರಲ್ಲೂ ಮೆಕ್ಕೆಜೋಳ 37,803 ಹೆಕ್ಟೇರ್ ಅತಿ ಹೆಚ್ಚು  ಬಿತ್ತನೆಯಾಗಿದ್ದು, ಹರಪನಹಳ್ಳಿ ಮೆಕ್ಕೆಜೋಳದ ಕಣಜ ಎಂದೇ ಖ್ಯಾತವಾಗಿದೆ. 8380 ಹೆಕ್ಟೇರ್ನಲ್ಲಿ ಹತ್ತಿ ಬಿತ್ತನೆಯಾಗಿದೆ.
ರೈತರು ಸಾಲ ಮಾಡಿ ಬೀಜ, ಗೊಬ್ಬರ ಹೊಂದಿಸಿ ಬಿತ್ತನೆ ಮಾಡಿ ಈಗ ಆಕಾಶ ದತ್ತ ಮುಖ ಮಾಡಿದ್ದಾರೆ.  ಈಗ 10-20 ದಿವಸದ ಬೆಳೆಗಳು ಇದ್ದು, ಎಲ್ಲಾ ಬೆಳೆಗಳು ಬಾಡಿವೆ. ಮುಂಗಡವಾಗಿ ಬಿತ್ತಿದ ಹತ್ತಿ ಬೆಳೆ ಮಾತ್ರ ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುತ್ತಿವೆ. ಉಳಿದ ಬೆಳೆಗಳಿಗೆ ಇನ್ನು 2-3 ದಿನದಲ್ಲಿ ಮಳೆ ಬಂದರೆ ಮಾತ್ರ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತವೆ. ಇಲ್ಲದಿದ್ದರೆ  ಬೆಳೆಗಳು ಒಣಗಿ ಹೋಗುತ್ತವೆ ಎಂಬುದು ಕೃಷಿ ಸಹಾಯಕ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಹಾಗೂ ಕೃಷಿ ಅಧಿಕಾರಿ ನಾರನಗೌಡ ಅವರ ಅಭಿಪ್ರಾಯವಾಗಿದೆ.
ವಿಶೇಷ ಪೂಜೆ:  ಮಳೆಗಾಗಿ  ಪಟ್ಟಣದ ಹರಿಹರ ರಸ್ತೆಯಲ್ಲಿರುವ ಗೇಟಿ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಸಮಿತಿ ವತಿಯಿಂದ ಗುರುವಾರ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಸವ ಸಮಿತಿ ಅಧ್ಯಕ್ಷರಾದ ಟಿಎಚ್ಎಂ ಶಿವಾನಂದಯ್ಯ, ಹೊಳಿಬಸಯ್ಯ, ಟಿಎಚ್ಎಂ ಮಲ್ಲಿಕಾರ್ಜುನ, ತೆಗ್ಗಿನಮಠದ ಟಿ.ಎಂ.ಚಂದ್ರಶೇಖರಯ್ಯ, ಗೊಂಗಡಿ ನಾಗರಾಜ, ಎ.ಶಿವಕುಮಾರ, ಮುದುಗಲ್ ನಾಗಾನಂದ, ಶಿವಮೂರ್ತಿ, ಬಡಿಗಿ ಮಂಜುನಾಥ ಮತ್ತಿತರರು ಪಾಲ್ಗೊಂಡಿದ್ದರು.
ದಿಗಂಬರ ಜೈನರ ನಾಗದೇವರ ಗುಡಿಯಲ್ಲೂ ವಿಶೇಷ ಪೂಜೆ ನಡೆಸಲಾಯಿತು.  ವಾಲ್ಮೀಕಿ ನಗರದಲ್ಲಿ  ಕತ್ತೆಗಳ ವಿವಾಹ, ಮೆರವಣಿಗೆ ನಡೆಸಲಾಯಿತು.
ಖುಷ್ಕಿ ಜಮೀನಿನವರ ಪಾಡು ಒಂದು  ರೀತಿ ಆದರೆ, ನೀರಾವರಿಯವರದು  ಮಳೆ ಹೋದ ಕಾರಣ ಅಂತರ ಜಲ ಕುಸಿಯುತ್ತಲಿದ್ದು, ಕೊಳವೆ ಬಾವಿಗಳು ಬತ್ತುವ ಆತಂಕ ಎದುರಾಗಿದೆ.
ಮಳೆಗಾಗಿ ಜನತೆ ಹೋಮ, ಪೂಜೆ, ಕತ್ತೆಗಳ ಮದುವೆ ಇನ್ನಿತರ  ಧಾರ್ಮಿಕ ವಿಧಿ ವಿಧಾನಗಳು, ನಂಬಿಕೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಒಟ್ಟಿನಲ್ಲಿ ಹಿಂದುಳಿದ ಹಣೆ ಪಟ್ಟಿ ಗಟ್ಟಿಗೊಳ್ಳುವ ಸಾಧ್ಯತೆ ಇದ್ದು, ಹಾಗಾಗದಿರಲಿ ಎಂಬುದು ಎಲ್ಲರ ಆಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.