ಮಹಿಳೆಗೆ ಮತ್ತೆ ಮಣೆ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಮಹಿಳಾ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿರುವ ಜನತಾ ಪರಿವಾರವು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಎರಡು ಬಾರಿ ಟಿಕೆಟ್ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ ಬೇರೆ ಯಾವ ಪಕ್ಷವೂ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. 25 ವರ್ಷಗಳ ನಂತರ ರಾಜಕೀಯ ಪಕ್ಷವೊಂದು ಮಹಿಳೆಗೆ ಟಿಕೆಟ್ ನೀಡಿದೆ.
1952ರಿಂದ ಇದೂವರೆಗೆ ನಡೆದ ಚುನಾವಣೆಯಲ್ಲಿ 1989ರಲ್ಲಿ ಮಾತ್ರ ರಾಜಕೀಯ ಪಕ್ಷವೊಂದು ಮಹಿಳೆಗೆ ಟಿಕೆಟ್ ನೀಡಿತ್ತು. ಅಂದು ಜನತಾ ಪಕ್ಷದಿಂದ ಕಣಕ್ಕಿಳಿದಿದ್ದು ಸರೋಜಿನಿ ಮಹಿಷಿ. ಇಷ್ಟರಲ್ಲಾಗಲೇ ಇವರು ಧಾರವಾಡ ಉತ್ತರ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ತಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶ ಪರಿಶೀಲಿಸಿ ವಿಮರ್ಶಿಸಲು ರಾಜ್ಯ ಸರ್ಕಾರವು ಸರೋಜಿನಿ ಮಹಿಷಿ ಅವರಿಗೆ ಕೇಳಿಕೊಂಡಿತ್ತು. ಇವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದು ಖ್ಯಾತವಾಗಿದೆ.
ಮತಗಳು ಛಿದ್ರ: ರಾಮಕೃಷ್ಣ ಹೆಗಡೆ ಅವರ ಅಧಿಕಾರ ಮುಗಿಯುತ್ತಿದ್ದಂತೆ ಎಚ್.ಡಿ. ದೇವೇಗೌಡ ಅವರೊಂದಿಗೆ ಭಿನ್ನಮತ ತಾರಕಕ್ಕೇರಿ ಅವರು ಜನತಾ ಪಕ್ಷದಿಂದ ಹೊರಬಂದು ಸಮಾಜವಾದಿ ಜನತಾ ಪಕ್ಷ ಸ್ಥಾಪಿಸಿದ್ದರು. 1989ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಹೆಗಡೆ ಅವರ ಜನತಾ ಪಕ್ಷವು ಎಂ. ಕೋಟೋಜಿರಾವ್ ಅವರನ್ನು ಕಣಕ್ಕಿಳಿಸಿದರೆ, ದೇವೇಗೌಡರ ಸಮಾಜವಾದಿ ಜನತಾ ಪಕ್ಷವು ಸರೋಜಿನಿ ಮಹಿಷಿ ಅವರನ್ನು ನಿಲ್ಲಿಸಿತ್ತು. ಚುನಾವಣೆಯ ನಂತರ ಜನತಾ ಪರಿವಾರದ ಮತಗಳು ಛಿದ್ರವಾಗಿದ್ದವು.
ಇದರ ಲಾಭ ಪಡೆದ ಕಾಂಗ್ರೆಸ್ ಪಕ್ಷದ ಟಿ.ವಿ. ಚಂದ್ರಶೇಖರಪ್ಪ ಗೆಲವು ಸಾಧಿಸಿದ್ದರು. ಎರಡನೇ ಸ್ಥಾನದಲ್ಲಿ ಜನತಾ ದಳದ ಎಂ. ಕೋಟೋಜಿರಾವ್, ಮೂರನೇ ಸ್ಥಾನದಲ್ಲಿ ಬಿಜೆಪಿಯ ಎಂ. ಆನಂದರಾವ್ ಇದ್ದರೆ, ಸರೋಜಿನಿ ಮಹಿಷಿ ಅವರು 94,715 ಮತಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದರು.
ಪ್ರಾತಿನಿಧ್ಯವಿರಲಿಲ್ಲ: ರಾಜಕೀಯ ಪಕ್ಷಗಳು ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಕೊಟ್ಟಿದ್ದೆ ಕಡಿಮೆ. ಇದೂವರೆಗೆ ನಡೆದಿರುವ 16 ಚುನಾವಣೆಗಳಲ್ಲಿ ಒಟ್ಟು 110 ಮಂದಿ ವಿವಿಧ ಪಕ್ಷಗಳಿಂದ, ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇವರಲ್ಲಿ ಮಹಿಳಾ ಸ್ಪರ್ಧಿಗಳು ಕೇವಲ ನಾಲ್ವರು ಮಾತ್ರ. ಸರೋಜಿನಿ ಮಹಿಷಿ ಅವರನ್ನು ಬಿಟ್ಟರೆ ಬೇರೆ ಯಾವ ಸ್ಪರ್ಧಿಗಳೂ ನಾಲ್ಕು ಸಾವಿರಕ್ಕಿಂತ ಹೆಚ್ಚು ಮತ ಗಳಿಸಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಹಿಳೆಯರೂ ಪ್ರಭಾವಶಾಲಿಗಳಾಗಿದ್ದಿಲ್ಲ.
1989ರಲ್ಲಿ ನಾಗರತ್ನ ರಾಮಕೃಷ್ಣ(1,128 ಮತ), 1991ರಲ್ಲಿ ಡಾ. ಬಿ.ಎಲ್. ಕೃಷ್ಣವೇಣಿ(232 ಮತ), 1999ರಲ್ಲಿ ವಸುಂಧರಾ ದೇವಿ(3,204 ಮತ) ಗಳಿಸಿದ್ದರು. ಈ ನಾಲ್ವರೂ ಪಕ್ಷೇತರರೆ. ಈ ದಿಸೆಯಲ್ಲಿ ಮತಗಳಿಕೆಯ ದಾಖಲೆ ಇರುವುದು ಸರೋಜಿನಿ ಮಹಿಷಿ ಅವರಿಗೆ ಮಾತ್ರ.
ಮಹಿಳೆಯರೇ ಹೆಚ್ಚು: ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರದೇ ಮೇಲುಗೈ. ಪುರುಷ ಮತದಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯ ನಂತರ ಬದಲಾದ ಸ್ವರೂಪವೇ ಈ ಕ್ಷೇತ್ರವನ್ನು ಮಹಿಳಾ ಪ್ರಾಬಲ್ಯದ ಕ್ಷೇತ್ರವನ್ನಾಗಿ ಮಾಡಿತ್ತು. ಮೊದಲು ಈ ಕ್ಷೇತ್ರ 7 ವಿಧಾನಸಭಾ ಕ್ಷೇತ್ರ ಮಾತ್ರ ಹೊಂದಿತ್ತು. ಅಗ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿತ್ತು. 2009ರ ಚುನಾವಣೆ ವೇಳೆಗೆ ಬೈಂದೂರು ಕ್ಷೇತ್ರ ಶಿವಮೊಗ್ಗಕ್ಕೆ ಸೇರ್ಪಡೆಯಾದ ನಂತರ ಚಿತ್ರಣವೇ ಬದಲಾಗಿ ಹೋಯಿತು. ಏಕೆಂದರೆ ಬೈಂದೂರಿನಲ್ಲಿ ಮಹಿಳಾ ಮತದಾರರ ಸಂಖ್ಯೆ ಶೇ. 54.6ರಷ್ಟು ಇತ್ತು. ಈ ಬಾರಿಯೂ ಚಿತ್ರಣ ಬದಲಾಗಿಲ್ಲ.
ಕ್ಷೇತ್ರದಲ್ಲಿ ಒಟ್ಟು 15,20,992 ಮತದಾರರಿದ್ದು, ಪುರುಷರು 7,58,925 ಇದ್ದರೆ ಮಹಿಳೆಯರ ಸಂಖ್ಯೆ 7,62,027.
ಈ ಬಾರಿ ಮತ್ತೆ ಮಹಿಳೆಯೊಬ್ಬರು ರಾಜಕೀಯ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಎಚ್.ಡಿ. ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳವೇ ಮತ್ತೆ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಿರುವುದು ವಿಶೇಷ. ಮಹಿಳಾ ರಾಜಕಾರಣಿ ಯಾವತ್ತೂ ಯಶಸ್ವಿಯಾಗದ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮತದಾರರ ಒಲವು ಗೊತ್ತಾಗುವುದಕ್ಕೆ ಎರಡು ತಿಂಗಳು ಕಾಯಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

