ಭಯ ದೂರವಾದಾಗ ಹೊಸತನ ಸಾಧ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 21
ಎಕ್ಸ್ಚೇಂಜಿಂಗ್ ಶಿವಮೊಗ್ಗ ಘಟಕವು ಬುಧವಾರ ಇನ್ನೋವೇಶನ್ (ನಾವೀನ್ಯ) ಆಂದೋಲನ ನಡೆಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್,
ಬದುಕಿನಲ್ಲಿ ಭಯದಿಂದ ದೂರವಾದಾಗ ಹೊಸತನವನ್ನು ಕಾಣಲು ಹಾಗೂ ಹೊಸದನ್ನು ಸೃಷ್ಟಿಸಲು ಸಾಧ್ಯವಿದೆ ಎಂದರು. ಯಾವುದೋ ಒಂದು ಸೀಮಿತ ಚೌಕಟ್ಟಿನಲ್ಲಿ ಸಾಗದೇ ಅದರಿಂದ ಹೂರಬಂದು ಆಲೋಚನೆ ನಡೆಸಿದಾಗ ಯಸಶ್ಸು ಸಾಧ್ಯವಿದೆ. ಹಾಗೆಂದು ಸೀಮಿತ ಚೌಕಟ್ಟಿನಿಂದ ಹೊರಬರುವುದು ಕಷ್ಟಸಾಧ್ಯ. ಫಾರ್ಮುಲಾ ಹಾಕಿಕೊಂಡರೆ ನಾವೀನ್ಯತೆಯ ಸೃಷ್ಟಿ ಕಷ್ಟಸಾಧ್ಯ. ವಿಷಯಾಧಾರಿತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದರು.
ಎಲ್ಲಕ್ಕಿಂತ ಮುಖ್ಯವಾಗಿ ಸೋಲುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ಭಯವನ್ನು ದೂರವಿಟ್ಟು ಸವಾಲುಗಳನ್ನು ಸ್ವೀಕರಿಸಬೇಕು. ಆಗ ನಾವೀನ್ಯತೆಯ ಸೃಷ್ಟಿಸಬಹುದಾಗಿದೆ ಎಂದು ತಿಳಿಸಿದರು.
ನಾವು ಕಂಡಂತಹ ಅನೇಕ ಸಾಧಕರು ತುಂಬಾ ಓದಿದವರಲ್ಲ. ಅವರ ಕ್ರಿಯಾಶೀಲತೆ ಮತ್ತು ಹೊಸತನ್ನು ಹುಡುಕುವ ತವಕದಿಂದ ಸಾಧನೆ ಮಾಡಿದ್ದರ ಫಲವಾಗಿ ಹೊಸ ದಾರಿಗಳನ್ನು ಸೃಷ್ಟಿ ಮಾಡಿದ್ದಾರೆ ಅಥವಾ ಕಂಡುಕೊಂಡಿದ್ದಾರೆ. ವಿಷಯದಲ್ಲಿ ಆಸಕ್ತಿ ಇಟ್ಟು ಮುಂದಡಿ ಇಡುವುದು ಮುಖ್ಯವಾಗಿರುತ್ತದೆ ಎಂದರು.
ಮಕ್ಕಳು ಶಾಲೆಯಿಂದ ದೊಡ್ಡ ಸಂಖ್ಯೆಯಲ್ಲಿ ದೂರ ಉಳಿಯುತ್ತಿದ್ದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಕಾಮರಾಜ್ ಅವರು ಶಾಲೆಯಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತಂದರು.
ಆರಂಭದಲ್ಲಿ ಅಧಿಕಾರಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಶಾಲೆ ಇರುವುದು ಪಾಠ ಹೇಳಲು, ಊಟ ಕೊಡಲು ಅಲ್ಲ ಎಂಬ ಅಭಿಪ್ರಾಯವೂ ಕೇಳಿಬಂತು. ಆದರೂ ಸಿಎಂ ಅವರ ಕಠಿಣ ನಿರ್ಧಾರದಿಂದ ಚೆನ್ನೈನಲ್ಲಿ ಬಿಸಿಯೂಟ ಆರಂಭವಾಯಿತು. ನಂತರ ಬಂದ ಮುಖ್ಯಮಂತ್ರಿ ಇಡೀ ರಾಜ್ಯಕ್ಕೆ ವಿಸ್ತರಿಸಿದರು. ಇದೀಗ ಬಿಸಿಯೂಟ ಯೋಜನೆ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಮಕ್ಕಳು ಶಾಲೆಗೆ ಹತ್ತಿರವಾಗಿದ್ದಾರೆ, ಅವರಲ್ಲಿನ ಅಪೌಷ್ಟಿಕತೆಯನ್ನು ದೂರ ಮಾಡಲು ಸಾಧ್ಯವಾಗಿದೆ. ಈ ಕಾರ್ಯಕ್ರಮ ಕೂಡ ಒಂದು ನಾವೀನ್ಯತೆಯ ಪ್ರಯೋಗ ಎಂದೇ ಹೇಳುತ್ತೇನೆ ಎಂದು ಸಸಿಕಾಂತ್ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಕ್ಸ್ಚೇಂಜಿಂಗ್ ಇಂಡಿಯಾ ಬಿಪಿಓಯ ಸಹ ಉಪಾಧ್ಯಕ್ಷ ಸುಬ್ರಹ್ಮಣ್ಯ ಬಸವನಹಳ್ಳಿ, ಇನ್ನೋವೇಶನ್ ಡ್ರೈವ್ ಕುರಿತಂತೆ ಮಾಹಿತಿ ನೀಡಿದರು. ಈ ವೇದಿಕೆಯನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭ ಸಂಸ್ಥೆಯ ಸಿಬ್ಬಂದಿ ಸಸಿಕಾಂತ್ ಸೆಂಥಿಲ್ ಅವರೊಂದಿಗೆ ಸಂವಾದ ನಡೆಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಡ್ರೈವ್, ಎಕ್ಸ್ಚೇಂಜಿಂಗ್ನಲ್ಲಿ ಕಾರ್ಯನಿರತ ಸಿಬ್ಬಂದಿಯಿಂದ ಹೊಸ ಆಲೋಚನೆಗಳನ್ನು (ಐಡಿಯಾ) ಪಡೆದು ಅದನ್ನು ಫಲವತ್ಪೂರ್ಣಗೊಳಿಸುತ್ತದೆ. ಇದಕ್ಕಾಗಿ 2.50 ಲಕ್ಷ ಪೌಂಡ್ ಮೀಸಲಿಟ್ಟಿದೆ. ಪ್ರತಿ ಕೇಂದ್ರದಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಇಲ್ಲಿನ ಸಿಬ್ಬಂದಿಯನ್ನು ಕ್ರಿಯಾಶೀಲರನ್ನಾಗಿ ಮಾಡುವ ಕಾರ್ಯ ಮಾಡುತ್ತದೆ ಎಂದು ಸಂಸ್ಥೆಯ ಕೀರ್ತಿ ಹಾಗೂ ಶಿವರಾಜು ವಿವರಿಸಿದರು.
ಇನ್ನು ಮುಂದೆ ಹೊಸ ಹೊಸ ಆಲೋಚನೆಗಳನ್ನು ಸ್ಥಳೀಯ ಮುಖ್ಯಸ್ಥರೆದುರು ಪ್ರಸ್ತುತಪಡಿಸಿದರೆ ಅವರು ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ ಎಕ್ಸ್ಚೇಂಜಿಂಗ್ ಮುಖ್ಯ ತಂಡಕ್ಕೆ ಕಳುಹಿಸುತ್ತಾರೆ. ಅಲ್ಲಿ ಆ ಆಲೋಚನೆಗೆ ಅಗತ್ಯವಾದ ತಾಂತ್ರಿಕ, ಬೌದ್ಧಿಕ ಅಂಶಗಳನ್ನು ಕ್ರೋಢೀಕರಿಸಲಾಗುತ್ತದೆ. ಜೊತೆಗೆ ಸಿಬ್ಬಂದಿ ಕೊಟ್ಟ ಐಡಿಯಾವು ವ್ಯಾವಹಾರಿಕವಾಗಿ ಯಶಸ್ಸು ಗಳಿಸಿದರೆ ಅದರ ಒಂದಂಶ ಲಾಭವೂ ಸಹ ಐಡಿಯಾ ಕೊಟ್ಟವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

