ನೂತನ ಪಂಚಾಯಿತಿ ರಚನೆಗೆ ಹೆಚ್ಚಿದ ಬೇಡಿಕೆ
ಕ.ಪ್ರ. ವಾರ್ತೆ, ಶಿವಮೊಗ್ಗ, ಮೇ 24
ರಾಜ್ಯದ ಇತರೆಡೆಗಳಿಗಿಂತ ಶಿವಮೊಗ್ಗ ಜಿಲ್ಲೆಯಲ್ಲಿ ನೂತನ ಗ್ರಾಮ ಪಂಚಾಯಿತಿ ರಚನೆಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೊಸ ಗ್ರಾಮ ಪಂಚಾಯಿತಿ ರಚಿಸುವಂತೆ 25 ಅರ್ಜಿಗಳು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಬದಲಾವಣೆ ಮಾಡಿ ಎಂದು 20 ಅರ್ಜಿಗಳು ಬಂದಿವೆ.
ಈ ಕುರಿತು ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಿ. ನಂಜಯ್ಯಮಠ, ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಬೇರೆಲ್ಲಾ ಕಡೆಗಳಿಗಿಂತ ಇಲ್ಲಿ ಹೆಚ್ಚು ಬೇಡಿಕೆ ಇದೆ ಎಂದರು.
ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡು ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರಿಂದ ಅಹವಾಲುಗಳನ್ನು ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.
2011ರ ಜನಗಣತಿ ಆಧಾರದ ಮೇಲೆ ಗ್ರಾಮ ಪಂಚಾಯಿತಿಗಳನ್ನು ರಚನೆ ಮಾಡಲು ಸಾರ್ವಜನಿಕರ ಸೂಚನೆ, ಅಹವಾಲು ಸ್ವೀಕರಿಸಲು ಬಂದಿದ್ದೇವೆ. ಇನ್ನೂ ಒಂದು ತಿಂಗಳು ಅಹವಾಲು ಸ್ವೀಕರಿಸುತ್ತೇವೆ. ಆಸಕ್ತರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಥವಾ ಜಿ.ಪಂ.ಅಧ್ಯಕ್ಷರ ಮುಖಾಂತರ ಅಹವಾಲು ಸಲ್ಲಿಸಬಹುದಾಗಿದೆ ಎಂದರು.
ಜನರಿಗೆ ಅನುಕೂಲ: ಸಾಗರ ತಾಲೂಕಿನ ಬರುವೇ ಗ್ರಾಮ 40 ಕಿಮೀ ಅಂತರದಲ್ಲಿ ಪಂಚಾಯಿತಿ ಇದೆ. ಇದೇ ರೀತಿ ಸಾಕಷ್ಟು ಗ್ರಾಮ ಪಂಚಾಯಿತಿಗಳು ಸಾಕಷ್ಟು ದೂರದಲ್ಲಿರುವುದು ಗಮನಕ್ಕೆ ಬಂದಿದೆ. ಗ್ರಾಮ ಪಂಚಾಯಿತಿ ಕೆಲಸಗಳಿಗೆ ಸುಲಭವಾಗಿ ಹೋಗಿಬರಲು ಅನುಕೂಲವಾಗುವಂತೆ ಸನಿಹದಲ್ಲಿ ಪಂಚಾಯಿತಿ ರಚಿಸುವ ಪ್ರಯತ್ನ ನಾವು ಮಾಡುತ್ತೇವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಪರಿಷ್ಕರಣಾ ವರದಿಯನ್ನು ಬೆಂಗಳೂರಿನ ಕಚೇರಿಯಲ್ಲಿ ಕುಳಿತು ಸಿದ್ಧಪಡಿಸಬಾರದು, ಜನಸಾಮಾನ್ಯರಿಂದ ಅಹವಾಲು, ಸಲಹೆ ಸ್ವೀಕರಿಸಿ ವರದಿ ಸಿದ್ಧಪಡಿಸಬೇಕೆಂಬ ಉದ್ದೇಶದಿಂದ ನಮ್ಮ ತಂಡ ಜಿಲ್ಲಾ ಪ್ರವಾಸ ನಡೆಸುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯವಸ್ಥೆ ಜಾರಿಯಾದ ನಂತರ ಇದೇ ಮೊದಲ ಬಾರಿಗೆ ಸರ್ಕಾರವು ಪಂಚಾಯತಿ ವ್ಯವಸ್ಥೆಯನ್ನು ಪರಿಷ್ಕರಿಸಲು ಮುಂದಾಗಿದ್ದು, ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮದ ನಿಯಮಗಳನುಸಾರ ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಿಸುವ ಅಥವಾ ಪರಿಷ್ಕರಿಸುವ ಹಾಗೂ ಕೇಂದ್ರಸ್ಥಾನ ಬದಲಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
350-400 ಪಂಚಾಯಿತಿ: ಈ ಸಮಿತಿಯು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯು 5 ಕಿ.ಮೀ. ವ್ಯಾಪ್ತಿಯೊಳಗಿರುವಂತೆ ರೂಪಿಸಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಉದ್ದೇಶ ಹೊಂದಿದೆ ಎಂದ ಅವರು ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ನಂತರ ರಾಜ್ಯದಲ್ಲಿ ಸುಮಾರು 350 ರಿಂದ 400 ನೂತನ ಗ್ರಾಮ ಪಂಚಾಯಿತಿಗಳನ್ನು ಸೃಷ್ಟಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.
ಬಯಲು ಸೀಮೆಯ ಪ್ರದೇಶಗಳಲ್ಲಿ 5ರಿಂದ 7ಸಾವಿರ ಜನಸಂಖ್ಯೆ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ 2ರಿಂದ 3ಸಾವಿರ ಜನಸಂಖ್ಯೆಗೊಂದರಂತೆ ಗ್ರಾಮ ಪಂಚಾಯಿತಿಗಳು ಅಸ್ತಿತ್ವದಲ್ಲಿವೆ. ಪ್ರಸ್ತುತ 2011ರ ಜನಗಣತಿಯ ಆಧಾರದ ಮೇಲೆ ಗ್ರಾಮ ಪಂಚಾಯಿತಿಗಳನ್ನು ಪುನರ್ ವಿಂಗಡಿಸುವ, ಪರಿಷ್ಕರಿಸುವ ಅಥವಾ ಕೇಂದ್ರಸ್ಥಾನ ಬದಲಾಯಿಸಿ ಮಧ್ಯವರ್ತಿ ಸ್ಥಳವನ್ನಾಗಿ ಪರಿವರ್ತಿಸಲು ಈ ಸಮಿತಿಯ ಸ್ಥಳ ಭೇಟಿಯ ನಂತರ ಕ್ರೋಢೀಕರಿಸಿದ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದರು.
ಗ್ರಾಪಂ ಪರಿಷ್ಕರಣಾ ಸಮಿತಿಯ ಸದಸ್ಯರಾದ ಸುಧಾಮಣಿ, ಎಸ್.ಕೆ. ಭಾಗವತ್, ರೇವಯ್ಯ ಒಡೆಯರ್ ಮತ್ತು ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

